ಕೊಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ. ಆದರೂ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ.
ಕೊಲ್ಕತ್ತ ನಗರದ ಬಿಜೆಪಿ ಶಾಸಕಿ ಅಗ್ನಿಮಿತ್ರ ಪೌಲ್ ಅವರ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ರಹಮತ್ ನಗರ ಪ್ರದೇಶದಲ್ಲಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ವಾಹನದ ಗಾಜುಗಳು ಪುಡಿಪುಡಿಯಾಗಿವೆ ಎಂದು ವರದಿಯಾಗಿದೆ. ಈ ಸಂಬಂಧ ಅವರು ಹೀರಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಗ್ನಿಮಿತ್ರ ಪೌಲ್ ಅವರು ಆಸನ್ಸೋಲ್ ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಮತದಾನ ನಡೆಯುತ್ತಿದ್ದಾಗ ಅವರು ಹಲವು ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರೊಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಕಡೆ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂಧು ಸರ್ಕಾರ್ ಅವರನ್ನು ಸ್ಥಳೀಯರು ಥಳಿಸಿದ್ದಾರೆ. ಮತದಾನದ ವೇಳೆ ಗ್ರಾಮವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮಾತಿನ ಚಕಮಕಿ ಉಂಟಾಗಿದೆ. ಆಗ ಸುವೇಂಧು ಅವರ ಮೇಲೆ ಸ್ಥಳೀಯರು ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಹೆದರಿ ಅವರು ದಿಕ್ಕಾಪಾಲಗಿ ಓಡಿದ್ದಾರೆ. ತಮ್ಮನ್ನು ರಕ್ಷಿಸುವಂತೆಯೂ ಕೇಳಿಕೊಂಡಿದ್ದಾರೆ.
ಅವರಿಗೆ ಒಬ್ಬ ಗನ್‌ಮ್ಯಾನ್ ಭದ್ರತೆ ಮಾತ್ರ ಒದಗಿಸಲಾಗಿತ್ತು. ಅವರೂ ಅಸಹಾಯಕರಾಗಿದ್ದರು. ನಂತರ ಬೇರೊಂದು ಹಳ್ಳಿಯಲ್ಲಿದ್ದ ಭದ್ರತಾ ಸಿಬ್ಬಂದಿ ಆಗಮಿಸಿ ಸ್ಥಳೀಯರನ್ನು ಓಡಿಸಿ ಸುವೇಂಧು ಅವರನ್ನು ರಕ್ಷಿಸಿದ್ದಾರೆ. ಟಿಎಂಸಿ ಕಾರ್ಯಕರ್ತರು ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಸುವೇಂಧು ಸರ್ಕಾರ್ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ; ಥಳಿಸಿದ ಗ್ರಾಮಸ್ಥರು

