ಧರ್ಮಶಾಲಾ: ಒಂದಲ್ಲ ಒಂದು ವಿವಾದದ ಮೂಲಕವೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಈಗ ರಾಜಕೀಯದತ್ತ ಮುಖ ಮಾಡಿದ್ದಾರೆ. ಅವರು ಈ ಬಾರಿಯ ಲೋಕಸಭಾ ಚುನಾವಣೆ (Lok Sabha Election 2024)ಯಲ್ಲಿ ಸ್ಪರ್ಧಿಸುತ್ತಿದ್ದು, ಹಿಮಾಚಲ ಪ್ರದೇಶದ ಮಂಡಿಯಿಂದ ಮೇ 14ರಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅವರು ತಮ್ಮ ಬಳಿ 91 ಕೋಟಿ ರೂ.ಗಳ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. ಅವರ ಆಸ್ತಿಯಲ್ಲಿ 28.7 ಕೋಟಿ ರೂ.ಗಳ ಚರಾಸ್ತಿ ಮತ್ತು 62.9 ಕೋಟಿ ರೂ.ಗಳ ಸ್ಥಿರಾಸ್ತಿ ಸೇರಿವೆ. ಜತೆಗೆ ಅವರ ಹೆಸರಿನಲ್ಲಿ 50 ಜೀವ ವಿಮಾ ನಿಗಮ (ಎಲ್ಐಸಿ) ಪಾಲಿಸಿಗಳಿವೆ. ಸದ್ಯ ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಬಗ್ಗೆ ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ.
ನೆಟ್ಟಿಗರು ಏನಂದ್ರು?
ʼʼಕಂಗನಾ ರಾಣಾವತ್ 50 ಎಲ್‌ಐಸಿ ಪಾಲಿಸಿ ಹಿಂದಿದ್ದಾರೆ. ಏಜೆಂಟ್ ಉತ್ತಮ ಕೆಲಸ ಮಾಡಿದ್ದಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಕಂಗನಾ ರಾಣಾವತ್ 50 ಎಲ್ಐಸಿ ಪಾಲಿಸಿಗಳನ್ನು ಹೊಂದಿದ್ದಾರೆ! ಇದು ಭಾರತದಲ್ಲಿ ಆರ್ಥಿಕ ಸಾಕ್ಷರತೆಯ ವ್ಯಾಪಕ ಕೊರತೆಯನ್ನು ಎತ್ತಿ ತೋರಿಸುತ್ತದೆ. ಅನೇಕ ಎಲ್ಐಸಿ ಪಾಲಿಸಿಗಳನ್ನು ಖರೀದಿಸುವ ಮನಸ್ಥಿತಿಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ ಎನ್ನುವುದು ಈ ಮೂಲಕ ಸಾಬೀತಾಗಿದೆ. ನಿಮ್ಮ ಸುತ್ತಮುತ್ತ ಇದೇ ರೀತಿಯ ಅನೇಕ ಪಾಲಿಸಿ ಖರೀದಿಗಳ ಪ್ರಕರಣಗಳನ್ನು ಗಮನಿಸಿದ್ದೀರಾ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
Kangana Ranaut Has 50 LIC Policies 😀
— CA Paaras Gangwal (@ThetaVegaCap) May 15, 2024
Good Job LIC Wale Uncle 😀#Kangana
ʼʼಕಂಗನಾ ಅವರ ಎಲ್‌ಐಸಿ ಏಜೆಂಟ್ ಅದೃಷ್ಟವಂತ. ಅವರು ಫುಲ್ ಖುಷಿಯಾಗಿರಬಹುದು. ಬಹುಶಃ ಏಜೆಂಟ್ ಅವರ ಸಂಬಂಧಿಕರಿರಬಹುದುʼʼ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ʼʼಕಂಗನಾ ರಾಣಾವತ್ 50 ಎಲ್‌ಐಸಿ ಪಾಲಿಸಿ ಮಾಡಿಸುವ ಮೂಲಕ ಆರ್ಥಿಕ ಸಾಕ್ಷರತೆಯ ಉತ್ತುಂಗದಲ್ಲಿದ್ದಾರೆʼʼ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ʼʼಕಂಗನಾ ಅವರ ಆಸ್ತಿ ಮೌಲ್ಯ 90 ಕೋಟಿ ರೂ. ಅವರು ಯಾವುದೇ ಸ್ಟಾಕ್ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿಲ್ಲ. ಆದರೆ 50 ಎಲ್‌ಐಸಿ ಪಾಲಿಸಿ ಹೊಂದಿದ್ದಾರೆʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನೇ ಹುಟ್ಟು ಹಾಕಿದೆ.
Kangana Ranaut has 50 LIC policies.
— Kashif Raza (@simplykashif) May 15, 2024
Financial literacy at its peak😃.
5 ಕೋಟಿ ರೂ. ಮೌಲ್ಯದ ಚಿನ್ನಾಭರಣ
ಬಾಲಿವುಡ್‌ನ ಟಾಪ್ ನಟಿಯಲ್ಲಿ ಒಬ್ಬರೆನಿಸಿಕೊಂಡಿರುವ ಕಂಗನಾ ಪ್ರತೀ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ಅವರ ಚಿತ್ರಗಳು ಹಿಟ್ ಆಗದಿದ್ದರೂ ಅವರ ಬೇಡಿಕೆ ಒಂದಿನಿತೂ ಕಡಿಮೆ ಆಗಲಿಲ್ಲ. ಜಾಹೀರಾತು ಮೂಲಕವೂ ಅವರು ಆದಾಯ ಗಳಿಸುತ್ತಿದ್ದಾರೆ. ಅವರ ಬಳಿ 5 ಕೋಟಿ ರೂ. ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ರೂ. ಮೌಲ್ಯದ 60 ಕೆಜಿ ಬೆಳ್ಳಿ, 3 ಕೋಟಿ ರೂ. ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳಿವೆ. 2 ಲಕ್ಷ ರೂ. ನಗದು ಮತ್ತು ಸುಮಾರು 1.35 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವುದಾಗಿ ಕಂಗನಾ ತಿಳಿಸಿದ್ದಾರೆ.
ಇದನ್ನೂ ಓದಿ: Kangana Ranaut: ವಿಶೇಷ ಗೆಟಪ್ ನಲ್ಲಿ ಮತದಾರರ ಸೆಳೆಯುತ್ತಿರುವ ಕಂಗನಾ ರಣಾವತ್
Kangna Ranaut net worth is ₹90 Cr. She has no stocks or mutual funds but has 50 LIC policies.#trending #kanganaranaut #investingtips
— themanishkumawat (@ManishVKumawat) May 15, 2024
17 ಕೋಟಿ ರೂ. ಸಾಲ
ಕಂಗನಾ ಚಂಡೀಗಢದಲ್ಲಿ ನಾಲ್ಕು ವಾಣಿಜ್ಯ ಸಂಕೀರ್ಣಗಳು, ಮುಂಬೈನಲ್ಲಿ ವಾಣಿಜ್ಯ ಆಸ್ತಿ ಮತ್ತು ಮನಾಲಿಯಲ್ಲಿ ವಾಣಿಜ್ಯ ಕಟ್ಟಡ ಸೇರಿದಂತೆ ದೇಶಾದ್ಯಂತ ವಿವಿಧ ಆಸ್ತಿಗಳನ್ನು ಹೊಂದಿದ್ದಾರೆ. ಅವರು ಮುಂಬೈನಲ್ಲಿ 16 ಕೋಟಿ ರೂ ಮೌಲ್ಯದ ಮೂರು ಫ್ಲ್ಯಾಟ್ ಗಳನ್ನು ಮತ್ತು ಮನಾಲಿಯಲ್ಲಿ 15 ಕೋಟಿ ರೂ ಮೌಲ್ಯದ ಬಂಗಲೆಯನ್ನು ಹೊಂದಿದ್ದಾರೆ. ಅಲ್ಲದೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 98 ಲಕ್ಷ ರೂ ಮೌಲ್ಯದ ಬಿಎಂಡಬ್ಲ್ಯು, 58 ಲಕ್ಷ ರೂ ಮೌಲ್ಯದ ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಅವರಲ್ಲಿದೆ. ಜತೆಗೆ 17 ಕೋಟಿ ರೂ.ಗಳ ಸಾಲ ಇರುವುದಾಗಿಯೂ ಘೋಷಿಸಿಕೊಂಡಿದ್ದಾರೆ.