ಬೆಂಗಳೂರು: ಲೋಕಸಭಾ ಚುನಾವಣಾ (Lok Sabha Election 2024) ಕಣ ಕಾವೇರುತ್ತಿದೆ. ಈ ಹೊತ್ತಿನಲ್ಲಿ ಜನಪ್ರತಿನಿಧಿಗಳು ನಾಲಿಗೆ ಉದ್ದ ಮಾಡುತ್ತಿರುವ ಪ್ರಸಂಗಗಳು ಆಗಾಗ ನಡೆಯುತ್ತಿವೆ. ಈಗ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ ಹೆಗಡೆ (Anantkumar Hegde) ಅವರು ಮಾಧ್ಯಮಗಳನ್ನು ನಾಯಿಗೆ ಹೋಲಿಕೆ ಮಾಡಿರುವುದರ ವಿರುದ್ಧ ಸಾಕಷ್ಟು ಆಕ್ಷೇಪಗಳು, ಆಕ್ರೋಶಗಳು ವ್ಯಕ್ತವಾಗಿವೆ. ಈ ಹೇಳಿಕೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯು ಜೆ – Karnataka union of Working Journalists) ಕಟುವಾಗಿ ಖಂಡಿಸಿದ್ದು, ಇಂಥವರನ್ನು ಸಾರ್ವಜನಿಕ ಚುನಾವಣೆಗಳಿಂದ (General Elections) ದೂರ ಇಡಬೇಕು ಎಂದು ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿ ಒತ್ತಾಯಿಸಿದೆ.
ಅನಂತ್ ಕುಮಾರ್ ಹೆಗಡೆ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಇಂಥ ಬೇಜವಾಬ್ದಾರಿ ಹೇಳಿಕೆ ನೀಡುವ ಸಂಸದರ ವಿರುದ್ಧ ಬಿಜೆಪಿ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಅನಂತ ಕುಮಾರ್ ಹೆಗಡೆ ಬೇಷರತ್ ಕ್ಷಮೆ ಯಾಚನೆ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.
ಕೆಯುಡಬ್ಲ್ಯು ಜೆ ಪತ್ರದ ಸಾರಾಂಶ ಇಲ್ಲಿದೆ
ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ ಕುಮಾರ ಹೆಗಡೆ ಅವರು ಅಂಕೋಲಾ ತಾಲೂಕಿನ ಹಿಲ್ಲೂರು ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ “ಆನೆ ಹೋಗಿದ್ದೇ ದಾರಿ ಎಂಬಂತೆ ನಾವು ಇರಬೇಕು. ಮಾಧ್ಯಮಗಳು ಏನು ಬೇಕಾದರೂ ಬರೆದುಕೊಳ್ಳಲಿ. ಆನೆಗಳು ಹೋಗುವಾಗ ನಾಯಿಗಳು ಬೊಗಳುವುದು ಸಹಜ” ಎಂದು ಮಾಧ್ಯಮದವರನ್ನು ಹೀಯಾಳಿಸಿದ್ದಾರೆ. ಇದು ಖಂಡನೀಯ. ಕೂಡಲೇ ಅವರು ಬಹಿರಂಗವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಕೆಯುಡಬ್ಲ್ಯು ಜೆ ಆಗ್ರಹಿಸುತ್ತದೆ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ವದ ಸ್ಥಾನವಿದೆ. ತಮಗೆ ಬೇಕಾದಾಗ ಮಾಧ್ಯಮವನ್ನು ಹೊಗಳುವುದು, ಬೇಡವೆನಿಸಿದಾಗ ತೆಗಳುವುದು ಕೆಲ ರಾಜಕಾರಣಿಗಳಿಗೆ ಪರಿಪಾಠವಾಗಿದೆ. ಅನಂತ ಕುಮಾರ ಹೆಗಡೆ ಅವರು ಜವಾಬ್ದಾರಿಯುತ ಸಂಸದರಾಗಿದ್ದು, ಆಗಿಂದಾಗ ಮನಸೋ ಇಚ್ಛೆ ಮಾತನಾಡುತ್ತಿರುವುದಲ್ಲದೆ ಮಾಧ್ಯಮವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು. ಅಲ್ಲದೆ, ನಾಲಿಗೆ ಮೇಲೆ ಹಿಡಿತವಿಲ್ಲದ ಇಂಥವರನ್ನು ಸಾರ್ವಜನಿಕ ಚುನಾವಣೆಗಳಿಂದ ದೂರ ಇಡಬೇಕು ಎಂದು ಕೆಯುಡಬ್ಲ್ಯು ಜೆ ಒತ್ತಾಯಿಸುತ್ತದೆ” ಎಂದು ಪತ್ರದ ಮೂಲಕ ಕಿಡಿಕಾರಲಾಗಿದೆ.
Uttara Kannada Constituency BJP MP Ananthakumar Hegde has made a statement comparing the media to a dog. MPs should apologize publicly for this. KUWJ demands that BJP take action against MPs who have stuck out their tongues.@PMOIndia @JPNadda @BSYBJP @BSBommai @BYVijayendra pic.twitter.com/JbIKiHuyBJ
— Karnataka Union of Working Journalists (R) (@KUWJ_R) March 12, 2024
ಅನಂತ್ ಕುಮಾರ್ ಹೆಗಡೆ ಹೇಳಿದ್ದೇನು?
ಅಂಕೋಲಾದ ಕಾರ್ಯಕ್ರಮವೊಂದರಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಮಾತನಾಡುತ್ತಾ, “ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನಿಜವಾದ ನಾಯಕತ್ವವಾಗಿದೆ. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಗೆ ಕಾರ್ಯಕರ್ತರು ಈಗ ತಲೆಕೆಡಿಸಿಕೊಳ್ಳಬಾರದು” ಎಂದು ಹೇಳಿದ್ದರು. ಇಷ್ಟೇ ಅಲ್ಲದೆ, ಮಾತನ್ನು ಮುಂದುವರಿಸಿ, “ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ, ಅವು ಬೊಗಳಿದರೆ ಮಾತ್ರ ಆನೆಗೆ ಒಂದು ಗತ್ತು ಬರುತ್ತದೆ. ಮಾಧ್ಯಮಗಳು ಏನಾದರೂ ಬರೆದುಕೊಳ್ಳಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: CM Siddaramaiah : ಅನಂತ್‌ಕುಮಾರ್ ಹೆಗಡೆ ಮೋದಿಯನ್ನೇ ಕೇರ್ ಮಾಡಲ್ಲ ಎಂದ ಸಿದ್ದರಾಮಯ್ಯ
ವೈರಲ್ ಆಗಿರುವ ವಿಡಿಯೊ!
ಅನಂತ್ ಕುಮಾರ್ ಹೆಗಡೆ ಹೇಳಿರುವ ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಸಾಕಷ್ಟು ಟೀಕೆಗಳು ಸಹ ವ್ಯಕ್ತವಾಗಿವೆ.