Site icon Vistara News

Lok Sabha Election 2024: ಓದಿದ ಶಾಲೆಯಲ್ಲಿ ಮತ ಹಾಕಿದ ನಟ ರಿಷಬ್‌ ಶೆಟ್ಟಿ; ಕಾಂತಾರ 2 ಸೀಕ್ರೆಟ್‌ ರಿವೀಲ್‌!

lok sabha Election 2024 Actor Rishb Shetty

ಉಡುಪಿ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಉಡುಪಿಯ ಬೈಂದೂರಿನಲ್ಲಿ ಡಿವೈನ್‌ ಸ್ಟಾರ್‌ ಖ್ಯಾತಿಯ ನಟ ರಿಷಬ್ ಶೆಟ್ಟಿ ಮತ ಚಲಾಯಿಸಿದರು. ಬೈಂದೂರಿನ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 135 ರಲ್ಲಿ ರಿಷಬ್ (Rishab Shetty) ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿನ ನಟ ರಿಷಬ್ ಶೆಟ್ಟಿ ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕಾಗಿ, ನಾನು ದೇಶಕ್ಕೆ ಮತ ಹಾಕಿದ್ದೇನೆ. ಮತದಾನ ನಮ್ಮ ಹಕ್ಕು ಜವಾಬ್ದಾರಿ ಅದನ್ನು ಚಲಾಯಿಸಿದ್ದೇನೆ. ಜನ ಕಡಿಮೆ ಇರುತ್ತಾರೆ ಎಂದು ಸಂಜೆ ಬಂದಿದ್ದೇನೆ. ಸರ್ಕಾರದ ನಿರೀಕ್ಷೆ ಹಾಗೂ ಬೇಡಿಕೆ ಹಾಗೂ ರಾಜಕೀಯದ ಬಗ್ಗೆ ಮಾತನಾಡಲ್ಲ. ನನ್ನ ಜವಾಬ್ದಾರಿಯನ್ನು ಮಾಡಿದ್ದೇನೆ ಅಷ್ಟೇ ಅಂದರು.

ರಿಷಬ್ ಶೆಟ್ಟಿ ತಾವು ಓದಿದ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಮಾತ್ರವಲ್ಲ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುತ್ತಿದ್ದಾರೆ. ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಗ್ರೌಂಡನ್ನು ಮಕ್ಕಳಿಗೆ ಆಟವಾಡಲು ದೊಡ್ಡದಾಗಿ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Lok Sabha Election 2024: ಮತ ಹಾಕಲು ವಿದೇಶದಿಂದ ಬಂದರು! ಒಂದೇ ಕುಟುಂಬದ 69 ಮಂದಿಯ ವೋಟ್‌ ಸೆಲ್ಫಿ!

ಚಿತ್ರೀಕರಣ ಮುಗಿಯುವವರೆಗೆ ಎಲ್ಲವೂ ಗೌಪ್ಯ

ಕಾಂತಾರ 2 ಚಿತ್ರದ ಬಗ್ಗೆಯೂ ಮಾತನಾಡಿರುವ ನಟ ರಿಷಬ್ ಶೆಟ್ಟಿ, ಕಾಂತಾರ ಚಿತ್ರದ ಕುರಿತು ಅಧಿಕೃತವಾಗಿ ಹೊಂಬಾಳೆ ಸಂಸ್ಥೆ ಎಲ್ಲವನ್ನೂ ಘೋಷಣೆ ಮಾಡುತ್ತದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಬಹಳ ಚೆನ್ನಾಗಿ ಕೆಲಸಕಾರ್ಯಗಳು ನಡೀತಾ ಇದೆ. ಮೊದಲಿಗಿಂತ ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ತಂಡ ಕೆಲಸ ಮಾಡುತ್ತಿದೆ.

ಹೊಂಬಾಳೆ ಪ್ರೊಡಕ್ಷನ್ ಹೌಸ್ ಸಿಕ್ಕಿರುವುದು ಫಿಲಂ ಮೇಕರ್‌ಗಳಿಗೆ ಒಂದು ಪುಣ್ಯ. ಕಾಂತರದಲ್ಲಿ ಅದ್ಭುತವಾದ ಟೆಕ್ನಿಷಿಯನ್ಸ್‌ಗಳು ಕೆಲಸ ಮಾಡುತ್ತಿದ್ದಾರೆ. ನಿರಂತರವಾಗಿ ಕೆಲಸಗಳು ನಡೆಯುತ್ತಿದ್ದು ಪಾರ್ಟ್ ಬೈ ಪಾರ್ಟ್ ಚಿತ್ರೀಕರಣ ನಡೆಯುತ್ತದೆ. ಜನ ಕಾಂತಾರವನ್ನು ಗೆಲ್ಲಿಸಿದ್ದಾರೆ, ಹೀಗಾಗಿ ಮಾತಿನಲ್ಲಿ ಏನನ್ನು ಹೇಳುವುದಿಲ್ಲ. ಕೆಲಸದ ಮೂಲಕ ಮಾಡಿ ತೋರಿಸಬೇಕು ಎಂದು ಅಂದುಕೊಂಡಿದ್ದೇನೆ.

ಸಿನಿಮಾಗಾಗಿ ಒಂದು ವರ್ಷದಿಂದ ಗಡ್ಡ ಹಾಗೂ ಕೂದಲು ಬಿಟ್ಟಿದ್ದೇನೆ. ಚಿತ್ರೀಕರಣ ಪೂರ್ತಿ ಮುಗಿದ ಮೇಲೆ ಸೆಟ್ ವರ್ಕ್ ಚಿತ್ರೀಕರಣ ಸ್ಥಳಕ್ಕೆ ಕರೆಯುತ್ತೇವೆ. ಚಿತ್ರೀಕರಣ ಮುಗಿಯುವವರೆಗೆ ಬಹಳ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ. ಅಂತೆ ಕಂತೆಗಳ ಸುದ್ದಿ ಬಹಳಷ್ಟು ಹರಿದಾಡುತ್ತಿದೆ,ಆದರೆ ಚಿತ್ರದ ಬಗ್ಗೆ ಜನಕ್ಕೆ ನಿರೀಕ್ಷೆ ಹೋಗಬಾರದು. ಜನರು ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದರೆ ಒಳ್ಳೆಯದು. ಚಿತ್ರ ತೆರೆಗೆ ಬರುವ ತನಕ ಗೌಪ್ಯತೆ ಕಾಪಾಡಬೇಕು ಜನಕ್ಕೆ ಕುತೂಹಲ ಇರಬೇಕು. ಪೂರ್ತಿ ಕರಾವಳಿ ಭಾಗದಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version