ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಎರಡನೇ ಹಂತದ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಮತ ಹಾಕಲು ಜನರು ಕೆಲಸ ಕಾರ್ಯಕ್ಕೆ ವಿರಾಮ ನೀಡಿ, ತಮ್ಮ ಊರುಗಳತ್ತ ತೆರಳಲು ಸಿದ್ಧರಾಗುತ್ತಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಖಾಸಗಿ ಬಸ್ ಮಾಲೀಕರು, ಟಿಕೆಟ್ ದರವನ್ನು ಹೆಚ್ಚು ಮಾಡಿ ಪ್ರಯಾಣಿಕರಿಂದ ವಸೂಲಿಗೆ (Bus Fare) ಇಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮತದಾನದ ಹಬ್ಬವನ್ನು ಆಚರಿಸಲು ಹೊರಟಿರುವ ಮತದಾರರ ಬಳಿ ಖಾಸಗಿ ಬಸ್ ಮಾಲೀಕರು ಲೂಟಿಗೆ ಇಳಿದಿದ್ದಾರೆ. ದೇಶದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಈ ಬಾರಿ ನಮ್ಮ ರಾಜ್ಯದಲ್ಲೂ ಕೂಡ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಕಳೆದ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ಮುಗಿದಿದೆ.
ಇನ್ನು ಮೇ.7ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕಾಗಿ ಜನರು ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿ ದರ ಏರಿಕೆ ಮಾಡಿ, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇನ್ನು ಈ ಕುರಿತು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರನ್ನ ಕೇಳಿದರೆ, ಶಕ್ತಿ ಯೋಜನೆಯ ಎಫೆಕ್ಟ್ ಜತೆಗೆ ಕೋವಿಡ್ ನಂತರ ಖಾಸಗಿ ಬಸ್ ಗಳಿಗೆ ಹೊಡೆತ ಬಿದ್ದಿದೆ. ಇನ್ನು ರಜಾ ದಿನಗಳು ಹಾಗೂ ಹಬ್ಬದ ಸಂದರ್ಭದಲ್ಲಿ ದರ ಏರಿಕೆ ಮಾಡುವುದು ಸಹಜ ಎಂದು ಹೇಳುತ್ತಿದ್ದಾರೆ.
ಪ್ರಯಾಣಿಕರಿಂದ ಬೇಕಾ ಬಿಟ್ಟಿ ವಸೂಲಿ ಮಾಡುತ್ತಿದ್ದರೂ ಕೂಡ ಇದುವರೆಗೂ ಸಾರಿಗೆ ಇಲಾಖೆ ಅಧಿಕಾರಿಗಳು, ನಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ದರ ಏರಿಕೆ ಮಾಡಿದರೆ ಪ್ರಯಾಣಿಕರು ಕೂಡ ಊರುಗಳತ್ತ ತೆರಳುವುದಿಲ್ಲ. ಮಹಿಳೆಯರು ಫ್ರೀ ಬಸ್ ಏರಬಹುದು, ಆದರೆ ಪುರುಷ ಪ್ರಯಾಣಿಕರು ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: Lok Sabha Election 2024: ಬಿಜೆಪಿಯ ʼಮೊಟ್ಟೆʼ ವಿಡಿಯೊ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ; ಅಂತಹದ್ದೇನಿದೆ?
Prajwal Revanna Case: ಪ್ರಜ್ವಲ್‌ಗೆ ವೋಟ್ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್; ಬಿಜೆಪಿಯಿಂದ ಫುಲ್ ಕ್ಲಾಸ್!
ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ರಾಜಕೀಯವಾಗಿ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಪ್ರಜ್ವಲ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದ್ದಾರೆ. ಅವರು ಅತ್ಯಾಚಾರಿ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಈಗ ಬಿಜೆಪಿ ತಿರುಗೇಟು ನೀಡಿದೆ. ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಬಗ್ಗೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಪರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. ಈಗ ಇದಕ್ಕೆ ಸಿಎಂ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್, 2019ರ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಭಾಷಣದ ವಿಡಿಯೊವನ್ನು ಪ್ಲೇ ಮಾಡಿದ್ದಾರೆ. 2019ರ ಏಪ್ರಿಲ್ 17ರಂದು ಕಡೂರಿನ ಎಪಿಎಂಸಿಯಲ್ಲಿ ಸ್ವತಃ ಪ್ರಜ್ವಲ್ ರೇವಣ್ಣ ಅವರನ್ನು ಸಿದ್ದರಾಮಯ್ಯ ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡಿದ್ದರು.
ಪ್ರಜ್ವಲ್ ರೇವಣ್ಣ ಯಂಗ್ ಸ್ಟಾರ್ ಇದ್ದಾನೆ. ಪ್ರತಿಭಾವಂತ ಇದ್ದಾನೆ. ಹಾಗಾಗಿ ನಮ್ಮ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಗೆಲ್ಲಿಸಿಕೊಡಿ. ಹಾಸನದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಶಕ್ತಿ ನೀಡಿ, ತೆನೆ ಹೊತ್ತ ಮಹಿಳೆಗೆ ಮತ ನೀಡಿ ಅಂತ ಮನವಿ ಮಾಡಿ (17-4-2019ರಲ್ಲಿ) ಟ್ವೀಟ್ ಮಾಡಿದ್ದರು. ನಾನು ಹೇಳಿದರೆ ಸುಳ್ಳು ಎಂದು ಹೇಳುತ್ತಾರೆ. ಇಲ್ಲಿ ನೋಡಿ ಅವರದ್ದೇ ಟ್ವೀಟ್ ಇದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರದರ್ಶನ ಮಾಡಿದರು.
ಈಗ ಹೇಳಿ ಸಿದ್ದರಾಮಯ್ಯ ಅವರೇ!
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಹಿಂದಿನ ಭಾಷಣವನ್ನು ಸಹ ಮಾಧ್ಯಮದವರ ಮುಂದೆ ಪ್ಲೇ ಮಾಡಿದರು. ಈಗ ದಾಖಲೆ ಬಿಡುಗಡೆ ಮಾಡಿದ್ದೇನೆ. ಈಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು. ಯಂಗ್ ಮತ್ತು ವಿಷನ್ ಲೀಡರ್ ಅಂತ ಹೇಳಿದ್ದೀರಿ. ನಮ್ಮದು ಮುಂದಿನ ಐದು ವರ್ಷಗಳ ವಿಷನ್ ಇದೆ. ಪ್ರಜ್ವಲ್ ಗೆದ್ದರೆ ಅದನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಿರಲ್ಲವೇ? ಪ್ರಜ್ವಲ್ ಅವರನ್ನು ಜೆಡಿಎಸ್‌ನಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಅವರು ಕಳೆದ ಬಾರಿ ನಮ್ಮ ಹೊಂದಾಣಿಕೆಯಿಂದ ಗೆದ್ದಿಲ್ಲ. ನಿಮ್ಮ ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ ಎಂದು ಕಿಡಿಕಾರಿದರು.
ಎಚ್.ಡಿ. ರೇವಣ್ಣ ಮೊಬೈಲ್ ವಶಕ್ಕೆ? ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಲು ಮುಂದಾದ ಎಸ್‌ಐಟಿ!
ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ ಬಂಧನದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಅಲ್ಲದೆ, ಅವರ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಇದೊಂದು ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆಯನ್ನು ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧವಾಗಲೀ ಅಥವಾ ಎಸ್‌ಐಟಿ ವಿರುದ್ಧವಾಗಲೀ ಯಾರೂ ಬೊಟ್ಟು ಮಾಡಬಾರದು ಎಂಬ ನಿಟ್ಟಿನಲ್ಲಿ ತನಿಖೆಯ ಜತೆ ಜತಗೆ ಸಾಕ್ಷ್ಯಗಳ ಸಂಗ್ರಹಕ್ಕೂ ಮುಂದಾಗಲಾಗಿದೆ.
ಈ ಸಂಬಂಧ ಈಗ ಎಸ್.ಐ.ಟಿ ಅಧಿಕಾರಿಗಳಿಂದ ಎಚ್.ಡಿ. ರೇವಣ್ಣ ಅವರ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಎಚ್.ಡಿ. ರೇವಣ್ಣ ಅವರ ಮೊಬೈಲ್ ಸೀಜ್ ಮಾಡಿ ಡೇಟಾ ಪರಿಶೀಲನೆ ಮಾಡಲಾಗುತ್ತಿದೆ. ರೇವಣ್ಣ ಮೊಬೈಲ್ ಚಾಟಿಂಗ್, ಕಾಲ್ ಸಿಡಿಆರ್ ಪರಿಶೀಲನೆಗೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಈಗ ಎಚ್.ಡಿ. ರೇವಣ್ಣ ಅವರನ್ನು ಕಿಡ್ನ್ಯಾಪ್ ಕೇಸ್ ಅಡಿ ಬಂಧಿಸಿರುವುದರಿಂದ ಟೆಕ್ನಿಕಲ್ ಎವಿಡೆನ್ಸ್ ಅನ್ನು ಸಂಗ್ರಹ ಮಾಡಬೇಕಾಗುತ್ತದೆ. ಹೀಗಾಗಿ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಈ ಮೊಬೈಲ್‌ನಲ್ಲಿ ಡಿಲಿಟ್ ಆಗಿರುವ ಡೇಟಾಗಳನ್ನೂ ರಿಟ್ರೀವ್ ಮಾಡಿ ಅವುಗಳನ್ನು ಸಾಕ್ಷ್ಯವೆಂದು ಪರಿಗಣಿಸಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಪರಿಶೀಲನೆಯಲ್ಲಿ ಈಗ ಎಸ್‌ಐಟಿ ತಂಡವಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ