Site icon Vistara News

Loksabha Election 2024: ತಿರುವನಂತಪುರಂನಲ್ಲಿ ಶಶಿ ತರೂರ್‌ v/s ರಾಜೀವ್‌ ಚಂದ್ರಶೇಖರ್‌; ಗೆಲ್ಲುವ ಚಾನ್ಸ್‌ ಯಾರಿಗಿದೆ?

Lok Sabha election- 2024

ತಿರುವನಂತಪುರಂ: ದೇಶಾದ್ಯಂತ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ (Loksabha election 2024) ನಡೆಯಲಿದೆ. ಕೇರಳದ (kerala) 20 ಸ್ಥಾನಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ರಾಷ್ಟ್ರ ಮಟ್ಟದ ಇಬ್ಬರು ಪ್ರಮುಖ ನಾಯಕರು (national leader) ಹಾಗೂ (Shashi tharoor vs Rajeev chandrasekhar) ಕೆಳಮಟ್ಟದ ಪ್ರಮುಖ ನಾಯಕ ಈ ಬಾರಿ ಕೇರಳದ ತಿರುವನಂತಪುರಂ (Thiruvananthapuram) ಕ್ಷೇತ್ರದಲ್ಲಿ ಕಣಕ್ಕೆ ಇಳಿದಿರುವುದು ದೇಶದ ಗಮನ ಸೆಳೆದಿದೆ.

ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯದಲ್ಲಿ ಪಳಗಿರುವ ಅನುಭವಿ ನಾಯಕರುಗಳಾದ ಕಾಂಗ್ರೆಸ್‌ನಿಂದ (congress) ಶಶಿ ತರೂರ್ (Shashi Tharoor), ಬಿಜೆಪಿಯಿಂದ (bjp) ರಾಜೀವ್ ಚಂದ್ರಶೇಖರ್ (Rajeev Chandrasekhar ) ಮತ್ತು ಸಿಪಿಐ (cpi) ನಾಯಕ ಪನ್ನಯನ್ ರವೀಂದ್ರನ್ (Pannyan Raveendran) ಕಣಕ್ಕೆ ಇಳಿದಿದ್ದಾರೆ.

59 ವರ್ಷದ ಚಂದ್ರಶೇಖರ್ ಮತ್ತು 67 ವರ್ಷದ ತರೂರ್ ಇಬ್ಬರೂ ರಾಷ್ಟ್ರ ಮಟ್ಟದ ನಾಯಕರು. ಇವರಿಬ್ಬರೂ ತಮ್ಮದೇ ಆದ ಸಾಧನೆಗಳಿಂದ ಗುರುತಿಸಿಕೊಂಡಿದ್ದಾರೆ. ಇವರಿಗೆ ಪೈಪೋಟಿ ನೀಡಲು 78 ವರ್ಷದ ರವೀಂದ್ರನ್ ಸ್ಪರ್ಧೆಗೆ ಇಳಿದಿದ್ದು, ತಳಮಟ್ಟದ ನಾಯಕ ಎನ್ನುವ ಖ್ಯಾತಿ ಇವರಿಗೆ ಇದೆ.

ಇದನ್ನೂ ಓದಿ: K. Annamalai: ಬದುಕು ಬದಲಿಸಿದ ಮಾನಸ ಸರೋವರ ಯಾತ್ರೆ! ಕೆ.ಅಣ್ಣಾಮಲೈ ಕುರಿತ ಕುತೂಹಲಕರ ಸಂಗತಿಗಳಿವು

ಜನಪ್ರಿಯ ಮುಖಗಳ ಮುಖಾಮುಖಿ

ಎರಡು ಜನಪ್ರಿಯ ಮುಖಗಳು ಇಲ್ಲಿ ಪರಸ್ಪರ ಮುಖಾಮುಖಿಯಾಗುವುದರೊಂದಿಗೆ 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಈ ಕ್ಷೇತ್ರ ದೇಶದ ಗಮನ ಸೆಳೆದಿದೆ.


ಶಶಿ ತರೂರ್ ನಾಲ್ಕನೇ ಬಾರಿ ಸ್ಪರ್ಧೆ

ತಿರುವನಂತಪುರಂ ಕ್ಷೇತ್ರವನ್ನು 2009ರಿಂದಲೇ ತಮ್ಮದಾಗಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಈ ಬಾರಿ ನಾಲ್ಕನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.
ವಿಶ್ವಸಂಸ್ಥೆ ಮಾಜಿ ರಾಜತಾಂತ್ರಿಕ ತರೂರ್ ಅವರು ಕೇರಳದ ಅತ್ಯಂತ ಜನಪ್ರಿಯ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು. 2022ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಅವರ ಗೌರವಕ್ಕೆ ಧಕ್ಕೆಯಾಗಿತ್ತು. ಆ ಬಳಿಕ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ನಿಧನದ ಬಳಿಕ ಅವರು ಮತ್ತೆ ವಿವಾದಕ್ಕೆ ಸಿಲುಕಿದ್ದರು. ಇಷ್ಟಾಗಿಯೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿ 2009ರಿಂದ ಸಂಸದನಾಗಿರುವ ಅವರು ಎಲ್ಲರಿಗೂ ಚಿರಪರಿಚಿತರು. ಹೀಗಾಗಿ ಅವರಿಗಿದು ಈ ಬಾರಿಯ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗಬಹುದು ಎನ್ನುವ ನಿರೀಕ್ಷೆ ಇದೆ.


ರಾಜೀವ್ ಚಂದ್ರಶೇಖರ್‌ಗೆ ಸವಾಲು

ಕೇರಳದಲ್ಲಿ ಒಮ್ಮೆಯೂ ಖಾತೆ ತೆರೆಯದ ಬಿಜೆಪಿ ಈ ಬಾರಿ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕೆ ಇಳಿಸಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ರಾಷ್ಟ್ರ ಮಟ್ಟದ ಪ್ರಮುಖ ನಾಯಕರು ಸ್ಪರ್ಧೆಗೆ ಇಳಿದಿರುವುದರಿಂದ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ಚಂದ್ರಶೇಖರ್ ಅವರಿಗೆ ಇಲ್ಲಿನ ಮತದಾರರು ಪರಿಚಿತರಾಗಿರುವುದು ಕಡಿಮೆ. ಹೀಗಾಗಿ ಮತದಾರರ ಮನ ಗೆಲ್ಲುವ ಪ್ರಯತ್ನವನ್ನು ಅವರು ಕಳೆದ ಹಲವು ತಿಂಗಳುಗಳಿಂದ ಮಾಡುತ್ತಿದ್ದಾರೆ. ಅಲ್ಲದೇ ಇಬ್ಬರು ಪ್ರಮುಖ ನಾಯಕರು ಇವರ ವಿರುದ್ಧ ಸ್ಪರ್ಧಿಸುತ್ತಿರುವುದರಿಂದ ಅವರಿಗೆ ಈ ಕ್ಷೇತ್ರ ಗೆಲ್ಲುವುದು ಸವಾಲಾಗಿ ಪರಿಣಮಿಸಿದೆ.

ಜೊತೆಗೆ ಸ್ಥಳೀಯ ಬಿಜೆಪಿ ನಾಯಕರು ಇಲ್ಲಿನ ಟಿಕೆಟ್ ಪಡೆಯುವ ಹಂಬಲದಲ್ಲಿದ್ದರು. ಆದರೆ ರಾಜೀವ್ ಅವರಿಗೆ ಟಿಕೆಟ್ ನೀಡಿದ್ದು ಸ್ಥಳೀಯ ನಾಯಕರಿಗೆ ಬೇಸರವನ್ನೂ ಉಂಟು ಮಾಡಿದೆ. ಈ ಎಲ್ಲ ಸವಾಲುಗಳು ಅವರ ಗೆಲುವಿನ ಮೇಲೆ ಪರಿಣಾಮ ಬೀರುವುದೇ ಎಂಬುದನ್ನು ಕಾದು ನೋಡಬೇಕಿದೆ.

ಒಮ್ಮೆಯೂ ಗೆದ್ದಿಲ್ಲ ಬಿಜೆಪಿ

ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ಜಿಲ್ಲೆಯ ನೇಮಮ್‌ನಿಂದ 2016ರಲ್ಲಿ ಓ ರಾಜಗೋಪಾಲ್ ಅವರು ಗೆದ್ದಿರುವುದು ಪಕ್ಷದ ದಾಖಲೆಯಾಗಿದೆ.

ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕುಮ್ಮನಂ ರಾಜಶೇಖರನ್ ಅವರು ಶೇ. 31.3ರಷ್ಟು ಮತಗಳನ್ನು ಪಡೆದಿದ್ದರು. ಇದು ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಡೆದ ಮತಗಳಲ್ಲಿ ಅತ್ಯಧಿಕವಾಗಿದೆ.

ಟಿಕೆಟ್ ಘೋಷಣೆ ವಿಳಂಬ

ತಿರುವನಂತಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಭಾಗವಹಿಸಿದ್ದರು. ಆದರೂ ಚಂದ್ರಶೇಖರ್‌ ಅವರಿಗೆ ಟಿಕೆಟ್‌ ನಿರ್ಧರಿಸುವಲ್ಲಿ ಬಿಜೆಪಿಯು ವಿಳಂಬ ನೀತಿ ಅನುಸರಿಸಿತ್ತು. ಇದರೊಂದಿಗೆ ಅವರಿಗೆ ಸ್ಥಳೀಯ ಬಿಜೆಪಿ ಘಟಕದ ಬೆಂಬಲದ ಕೊರತೆಯೂ ಎದುರಾಗಿದೆ. ಇದು ಅವರ ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಮುಖ ನಾಯಕರಿಗೆ ಪೈಪೋಟಿ

ಸಿಪಿಎಂ ನೇತೃತ್ವದ ಎಲ್‌ಡಿಎಫ್ ನಿಂದ 2005ರಲ್ಲಿ ಗೆದ್ದಿದ್ದ ಸಿಪಿಐ ನಾಯಕ ಪನ್ಯನ್ ರವೀಂದ್ರನ್ ಅವರು ಈ ಬಾರಿ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿರುವ ರವೀಂದ್ರನ್ ಅವರು ತರೂರ್ ಮತ್ತು ಚಂದ್ರಶೇಖರ್ ಇಬ್ಬರಿಗೂ ಪೈಪೋಟಿ ನೀಡಲಿದ್ದಾರೆ. ಹಿಂದುಳಿದ ಸಮುದಾಯದವರಾಗಿರುವ ರವೀಂದ್ರನ್ ಗೆಲುವಿನ ನಗೆ ಬೀರಿ ಎಲ್ಲರಿಗೂ ಅಚ್ಚರಿ ಮೂಡಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೂ ಪಕ್ಷ ಅಭ್ಯರ್ಥಿಯನ್ನು ಘೋಷಿಸುವ ಮೊದಲು ಇನ್ನು ಮುಂದೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರವೀಂದ್ರನ್ ನೀಡಿದ್ದ ಹೇಳಿಕೆ ಅವರಿಗೆ ತಿರುಗುಬಾಣವಾದರೂ ಅಚ್ಚರಿ ಇಲ್ಲ!

Exit mobile version