Site icon Vistara News

Lok Sabha Election 2024: ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು

Lok sabha Election 2024

ಕೋಲಾರ/ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಬಿರುಸಿನ ಮತದಾನ ನಡೆಯುತ್ತಿದ್ದು, ದುಬೈನಿಂದ ಬಂದು ಕೋಲಾರದ ನಿವಾಸಿಯೊಬ್ಬರು ಮತದಾನ ಮಾಡಿದ್ದಾರೆ. ಕೋಲಾರ ನಿವಾಸಿ ಅಬ್ದುಲ್ ಸುಬಾನ್ ಎಂಬುವವರು ಬ್ಯುಸಿನೆಸ್‌ಗೆಂದು ದುಬೈಗೆ ತೆರಳಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲೆಂದು ದುಬೈನಿಂದ ಬಂದಿದ್ದರು. ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದರು.

ಇತ್ತ ಮಂಗಳೂರಿನ ಉಳಾಯಿಬೆಟ್ಟುವಿನ ಜೀವಿತ ಎಂಬುವವರು ದುಬೈನಿಂದ ಬಂದು ಮತದಾನ ಮಾಡಿದ್ದರು. ನಮ್ಮ ಮತ ನಮ್ಮ ಹಕ್ಕು ಎನ್ನುವ ದೃಷ್ಟಿಯಿಂದ ಮತದಾನ ಮಾಡಲು ಬಂದಿದ್ದಾಗಿ ಜೀವಿತ ತಿಳಿಸಿದರು.

ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಗರದ ನಿವಾಸಿಯಾಗಿರುವ ಲಿಖಿತ ಅವರು ಫಿಲಿಫೈನ್ಸ್‌ನಿಂದ ಬಂದು ಮತದಾನ ಮಾಡಿದರು. ಫಿಲಿಫೈನ್ಸ್‌ನಲ್ಲಿ ಎಂಬಿಬಿಎಸ್‌ (MBBS) ಓದುತ್ತಿರುವ ಲಿಖಿತ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದಿದ್ದರು. ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯಲ್ಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತದಾನ ಮಾಡಿದರು. ಪ್ರತಿ ಬಾರಿ ತಪ್ಪದೆ ಬಂದು ಮತದಾನ ಮಾಡುತ್ತಿರುವುದಾಗಿ ಲಿಖಿತ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

ಉಡುಪಿಯಿಂದ ತುಮಕೂರಿಗೆ ಬಂದು ಮತ ಹಾಕಿದ ನ್ಯಾಯಾಧೀಶ

ನ್ಯಾಯಾಧೀಶ ಜೀತು ಆರ್.ಎಸ್ ಅವರು ಉಡುಪಿಯಿಂದ ತುಮಕೂರಿಗೆ ಬಂದು ಮತ ಹಾಕಿದರು. ತುಮಕೂರು ಗ್ರಾಮಾಂತರದ ಕೆ.ಪಾಲಸಂದ್ರದಲ್ಲಿರುವ ಮತಗಟ್ಟೆ ಸಂಖ್ಯೆ 114ರಲ್ಲಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾಕಷ್ಟು ಜನ ಮಹಾನ್ ಪುರುಷರು ಹೋರಾಡಿದ್ದಾರೆ. ಮತದಾನ ಮಾಡುವ ಮೂಲಕ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನ ಸಂಭ್ರಮಿಸಬೇಕು. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಇಂತಹ ಪ್ರಾತಃಸ್ಮರಣೀಯರನ್ನು ಗೌರವಿಸಬೇಕು ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version