Site icon Vistara News

Lok Sabha Election 2024 : ಬೋಟ್‌ನಲ್ಲಿ ಬಂದು ವೋಟ್‌ ಮಾಡಿದ 150ಕ್ಕೂ ಮತದಾರರು

lok sabha election 2024

ಮಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಉಳಿಯ ದ್ವೀಪದ ಮತದಾರರು ಬೋಟ್‌ನಲ್ಲಿ ಬಂದು ವೋಟ್‌ ಮಾಡಿದ್ದಾರೆ. ಪಾವೂರು ಉಳಿಯ ದ್ವೀಪದ ಸುತ್ತ ನೇತ್ರಾವತಿ ನದಿ ಹರಿಯುತ್ತಿದ್ದು ಸಂಪರ್ಕ ಸೇತುವೆ ಇಲ್ಲದಿದ್ದರೂ ನೆಪಗಳನ್ನು ಹೇಳದೆ ತಮ್ಮ ಕರ್ತವ್ಯ ಮರೆಯದೆ ಹಕ್ಕು ಚಲಾಯಿಸಿದ್ದಾರೆ.

ಸಂಪರ್ಕ ಸೇತುವೆಯಿಲ್ಲದೆ ಹಲವು ವರ್ಷಗಳಿಂದ ಜನರು ಪರದಾಡುತ್ತಿದ್ದಾರೆ. ಸಂಪರ್ಕ ಸೇತುವೆಗಾಗಿ ಜನಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಇನ್ನೂ ಬೇಡಿಕೆ ಈಡೇರಿಸಿಲ್ಲ. ಆದರೂ ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ವಾಸಿಸುತ್ತಿರುವ 50 ಕ್ಕೂ ಹೆಚ್ಚು ಕುಟುಂಬಗಳು ಬೋಟ್ ಮೂಲಕ ಬಂದು ಮತ ಚಲಾಯಿಸಿದ್ದಾರೆ. 150ಕ್ಕೂ ಹೆಚ್ಚು ಮತದಾರರು ಬೋಟ್ ಮೂಲಕ ಬಂದು ಮತ ಚಲಾಯಿಸಿದ್ದಾರೆ.

lok sabha election 2024 15

ಇದನ್ನೂ ಓದಿ: Lok Sabha Election 2024: ಬುದ್ಧಿ ಇರೋರು ವೋಟ್‌ ಹಾಕ್ತಿದ್ದಾರೆ ಎಂದ ಕಿಚ್ಚ! ಉಳಿದ ತಾರೆಗಳು ಹೇಳಿದ್ದೇನು?

ದುಬೈ, ಫಿಲಿಫೈನ್ಸ್‌ನಿಂದ ಬಂದು ಹಕ್ಕು ಚಲಾಯಿಸಿದ ಮತದಾರರು

ಕೋಲಾರ/ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಬಿರುಸಿನ ಮತದಾನ ನಡೆಯುತ್ತಿದ್ದು, ದುಬೈನಿಂದ ಬಂದು ಕೋಲಾರದ ನಿವಾಸಿಯೊಬ್ಬರು ಮತದಾನ ಮಾಡಿದ್ದಾರೆ. ಕೋಲಾರ ನಿವಾಸಿ ಅಬ್ದುಲ್ ಸುಬಾನ್ ಎಂಬುವವರು ಬ್ಯುಸಿನೆಸ್‌ಗೆಂದು ದುಬೈಗೆ ತೆರಳಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲೆಂದು ದುಬೈನಿಂದ ಬಂದಿದ್ದರು. ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದರು.

ಇತ್ತ ಮಂಗಳೂರಿನ ಉಳಾಯಿಬೆಟ್ಟುವಿನ ಜೀವಿತ ಎಂಬುವವರು ದುಬೈನಿಂದ ಬಂದು ಮತದಾನ ಮಾಡಿದ್ದರು. ನಮ್ಮ ಮತ ನಮ್ಮ ಹಕ್ಕು ಎನ್ನುವ ದೃಷ್ಟಿಯಿಂದ ಮತದಾನ ಮಾಡಲು ಬಂದಿದ್ದಾಗಿ ಜೀವಿತ ತಿಳಿಸಿದರು.

ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಗರದ ನಿವಾಸಿಯಾಗಿರುವ ಲಿಖಿತ ಅವರು ಫಿಲಿಫೈನ್ಸ್‌ನಿಂದ ಬಂದು ಮತದಾನ ಮಾಡಿದರು. ಫಿಲಿಫೈನ್ಸ್‌ನಲ್ಲಿ ಎಂಬಿಬಿಎಸ್‌ (MBBS) ಓದುತ್ತಿರುವ ಲಿಖಿತ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದಿದ್ದರು. ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯಲ್ಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತದಾನ ಮಾಡಿದರು. ಪ್ರತಿ ಬಾರಿ ತಪ್ಪದೆ ಬಂದು ಮತದಾನ ಮಾಡುತ್ತಿರುವುದಾಗಿ ಲಿಖಿತ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಓಡೋಡಿ ಹೋದ ವರ; ವೋಟ್‌ ಹಾಕಿ ನಿರಾಳ

ಉಡುಪಿಯಿಂದ ತುಮಕೂರಿಗೆ ಬಂದು ಮತ ಹಾಕಿದ ನ್ಯಾಯಾಧೀಶ

ನ್ಯಾಯಾಧೀಶ ಜೀತು ಆರ್.ಎಸ್ ಅವರು ಉಡುಪಿಯಿಂದ ತುಮಕೂರಿಗೆ ಬಂದು ಮತ ಹಾಕಿದರು. ತುಮಕೂರು ಗ್ರಾಮಾಂತರದ ಕೆ.ಪಾಲಸಂದ್ರದಲ್ಲಿರುವ ಮತಗಟ್ಟೆ ಸಂಖ್ಯೆ 114ರಲ್ಲಿ ಹಕ್ಕು ಚಲಾಯಿಸಿದರು. ನಂತರ ಮಾತನಾಡಿದ ಅವರು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಸಾಕಷ್ಟು ಜನ ಮಹಾನ್ ಪುರುಷರು ಹೋರಾಡಿದ್ದಾರೆ. ಮತದಾನ ಮಾಡುವ ಮೂಲಕ ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನ ಸಂಭ್ರಮಿಸಬೇಕು. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಇಂತಹ ಪ್ರಾತಃಸ್ಮರಣೀಯರನ್ನು ಗೌರವಿಸಬೇಕು ಎಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version