Site icon Vistara News

Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!

money guide

ಬೆಂಗಳೂರು: ಅಕ್ಟೋಬರ್ 1ರಿಂದ ನಿಮ್ಮ ಹಣಕಾಸು ಸ್ಥಿತಿಗತಿಯ (Money Guide) ಮೇಲೆ ಪರಿಣಾಮ ಬೀರಬಲ್ಲ ಹಲವು ಸಂಗತಿಗಳು ವೈಯಕ್ತಿಕ ಹಣಕಾಸು (Personal Finance) ವಲಯದಲ್ಲಿ ನಡೆಯಲಿವೆ. ಹೀಗಾಗಿ ಅಕ್ಟೋಬರ್‌ 1ರ ಮೊದಲೇ ಇವುಗಳನ್ನು ನೀವು ಅಪ್‌ಡೇಟ್‌ ಮಾಡಿಕೊಳ್ಳಬೇಕಾದೀತು.

ಆಧಾರ್ ಕಾರ್ಡ್ (Aadhar card) ವಿವರ ಬದಲಾವಣೆ, ಮ್ಯೂಚುವಲ್ ಫಂಡ್ (Mutual fund), ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ರೂ. 2000 ನೋಟುಗಳ ಬದಲಾವಣೆ, ಮತ್ತು ಜನನ ಪ್ರಮಾಣಪತ್ರ ಕಡ್ಡಾಯ- ಈ 6 ದೊಡ್ಡ ಬದಲಾವಣೆಗಳು ಅಕ್ಟೋಬರ್ 1ರಿಂದ ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರಲಿವೆ. ಇವುಗಳ ವಿವರ ಕೆಳಗಿದೆ.

1) ಮ್ಯೂಚುಯಲ್ ಫಂಡ್‌ಗಳಿಗೆ ನಾಮಿನಿ

ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುಯಲ್ ಫಂಡ್ ಫೋಲಿಯೊಗಳಿಗೆ (ಜಂಟಿ ಹೆಸರು ಹೊಂದಿರುವುದನ್ನೂ ಸೇರಿಸಿ) ನಾಮನಿರ್ದೇಶಿತರನ್ನು (ನಾಮಿನಿ) ಸೇರಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಎಂದು ನಿಗದಿಪಡಿಸಲಾಗಿದೆ. ವಿಫಲವಾದರೆ ಫೋಲಿಯೊಗಳನ್ನು ಡೆಬಿಟ್‌ಗಳಿಗಾಗಿ ಫ್ರೀಜ್ ಮಾಡಲಾಗುತ್ತದೆ.

2) ಇತ್ತೀಚಿನ TCS ನಿಯಮಗಳು

ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಿಮ್ಮ ಸಾಗರೋತ್ತರ ವೆಚ್ಚಗಳು ರೂ. 7 ಲಕ್ಷವನ್ನು ಮೀರಿದರೆ, ನೀವು ಅಕ್ಟೋಬರ್ 1ರಿಂದ 20 ಪ್ರತಿಶತ TCSಗೆ ಒಳಪಡುತ್ತೀರಿ. ಆದರೆ ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ಅಂತಹ ವೆಚ್ಚಗಳನ್ನು ಮಾಡಿದರೆ TCS ಅನ್ನು 5 ಶೇಕಡ ವಿಧಿಸಲಾಗುತ್ತದೆ. ಸಾಗರೋತ್ತರ ಶಿಕ್ಷಣಕ್ಕಾಗಿ ಸಾಲ ಪಡೆಯುವವರಿಗೆ 7 ಲಕ್ಷದ ನಂತರದ ಮೊತ್ತಕ್ಕೆ ಕೇವಲ 0.5 ಶೇಕಡಾ ಹೆಚ್ಚುವರಿ TCS ದರ ವಿಧಿಸಲಾಗುತ್ತದೆ. ಕೇಂದ್ರವು 2023-24ರ ಬಜೆಟ್‌ನಲ್ಲಿ ಸಾಗರೋತ್ತರ ಪ್ರವಾಸ ಪ್ಯಾಕೇಜ್‌ ಮತ್ತು LRS ಅಡಿಯಲ್ಲಿ ರವಾನೆಯಾಗುವ ಹಣಕ್ಕೆ (ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶ ಹೊರತುಪಡಿಸಿ) TCS ದರಗಳನ್ನು ಪ್ರಸ್ತುತದ ಶೇಕಡಾ 5ರಿಂದ ಶೇಕಡಾ 20ಕ್ಕೆ ಹೆಚ್ಚಿಸಿದೆ.

3) ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ನಾಮನಿರ್ದೇಶನ

ಅಸ್ತಿತ್ವದಲ್ಲಿರುವ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ಫಲಾನುಭವಿಗಳನ್ನು ನಾಮನಿರ್ದೇಶನ ಮಾಡುವ ಗಡುವು ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತದೆ.

4) ಉಳಿತಾಯ ಖಾತೆಗೆ ಆಧಾರ್

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ಅಂಚೆ ಕಚೇರಿ ಠೇವಣಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಸೆಪ್ಟೆಂಬರ್ 30ರಂದು ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಈ ಹೂಡಿಕೆಗಳನ್ನು ಫ್ರೀಜ್ ಮಾಡಬಹುದು.

5) ರೂ. 2000 ಕರೆನ್ಸಿ ನೋಟುಗಳ ವಿನಿಮಯ

ನಿಮ್ಮಲ್ಲಿ ಕೆಲವರು ಇನ್ನೂ ರೂ. 2000 ನೋಟುಗಳನ್ನು ಹೊಂದಿದ್ದರೆ, 30 ಸೆಪ್ಟೆಂಬರ್ 2023ರೊಳಗೆ ಖಂಡಿತವಾಗಿಯೂ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ. ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30 ಅನ್ನು ಈ ನೋಟುಗಳನ್ನು ಬದಲಾಯಿಸಲು ಗಡುವು ಎಂದು ನಿಗದಿಪಡಿಸಿದೆ.

6) ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣ ಪತ್ರ ಕಡ್ಡಾಯ

ಹಣದ ವಿಷಯಗಳ ಹೊರತಾಗಿ, ಜನನ ಪ್ರಮಾಣಪತ್ರಗಳು ಮುಂದಿನ ತಿಂಗಳಿನಿಂದ ಆಧಾರ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ಒಂದೇ ದಾಖಲೆಯಾಗಿ ಮಾರ್ಪಟ್ಟಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1, 2023 ರಿಂದ ದೇಶದಲ್ಲಿ ಜಾರಿಗೆ ಬರಲಿದೆ.

ಇದನ್ನೂ ಓದಿ: Money Guide: ಅತ್ಯುತ್ತಮ ನಿವೃತ್ತ ಜೀವನಕ್ಕಾಗಿ ಟಾಪ್ 10 ಹಣ ಉಳಿತಾಯದ ಟಿಪ್ಸ್!

Exit mobile version