Site icon Vistara News

Kargil Vijay Divas | ನಾನು ಶಕುಂತಲಾ ಅಜಿತ್‌ ಭಂಡಾರ್ಕರ್: ಸೈನಿಕನ ಪತ್ನಿ ಮತ್ತು ಸೈನಿಕರ ಅಮ್ಮ!

Shakunthala Bhandarkar

ನಾನು ಶಕುಂತಲಾ. ನನ್ನ ಪೋಷಕರಿಗೆ ಒಬ್ಬಳೇ ಮಗಳು. ನಾನು ಪ್ರೀತಿಸಿ ಮದುವೆ ಆದದ್ದು ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರನ್ನು. ಅಪ್ಪನಿಗೆ ಸೈನಿಕರ ಬಗ್ಗೆ ತುಂಬಾ ಗೌರವ ಇತ್ತು. ನಾನು ನನ್ನ ಪ್ರೀತಿಯ ಬಗ್ಗೆ ಅವರಲ್ಲಿ ಹೇಳಿದಾಗ ಎರಡನೇ ಮಾತನ್ನು ಹೇಳದೇ ಮದುವೆ ಮಾಡಿ ಕೊಟ್ಟರು (1990). ಅಜಿತ್ ಭಂಡಾರ್ಕರ್ ಬೆಂಗಳೂರಿನವರು.‌ ನಾನು ಸೈನಿಕನ ಪತ್ನಿ ಎನ್ನುವ ಹೆಮ್ಮೆ ನನಗೆ!

ಗಂಡ ನನ್ನನ್ನು ಸ್ವಾವಲಂಬಿಯಾಗಿ ಮಾಡಿದರು
ಅಜಿತ್ ನನಗೆ ತುಂಬಾ ಪ್ರೀತಿಯನ್ನು ಕೊಟ್ಟರು. ನನ್ನನ್ನು ಸ್ವಾವಲಂಬಿಯನ್ನಾಗಿ ಮಾಡಿದರು. ನಾನು B.Ed ಮುಗಿಸಿ ಶಿಕ್ಷಕಿಯಾಗಲು ಅವರೇ ನನಗೆ ಸ್ಫೂರ್ತಿಯನ್ನು ತುಂಬಿದರು. ನಿರ್ಭಯ್ ಮತ್ತು ಅಕ್ಷಯ್ ನನ್ನ ಮತ್ತು ಅಜಿತ್ ಅವರ ಪ್ರೀತಿಯ ಬಳ್ಳಿಯ ಎರಡು ಚಂದವಾದ ಮೊಗ್ಗುಗಳು. ಇಬ್ಬರೂ ಅಪ್ಪನಂತೆ ಬುದ್ಧಿವಂತರು.

ಅಪೂರ್ವ ಪ್ರೀತಿಯನ್ನು ಮೊಗೆದು ತುಂಬಿದ ಗಂಡ
ಅಜಿತ್ ಪೂನಾ, ಇಂದೋರ್, ಸಿಕ್ಕಿಂ, ದೆಹಲಿ, ಜಮ್ಮು ಮತ್ತು ಕಾಶ್ಮೀರಗಳಲ್ಲಿ ಸೇವೆ ಸಲ್ಲಿಸುತ್ತಾ ಇದ್ದರೂ ರಜೆ ದೊರೆತ ಕೂಡಲೇ ಮನೆಗೆ ಓಡಿ ಬರುತ್ತಿದ್ದರು. ಮಕ್ಕಳನ್ನು ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡೋರು. ನನ್ನನ್ನು ಮತ್ತು ಮಕ್ಕಳನ್ನು ಎದುರು ಕೂರಿಸಿ ಸೈನ್ಯದ ವೀರಾವೇಶದ ಕಥೆಗಳನ್ನು ರಸವತ್ತಾಗಿ ಹೇಳೋರು. ಆಗೆಲ್ಲ ನನಗೆ ಅವರ ಬಗ್ಗೆ ಹೆಮ್ಮೆ ಮತ್ತು ಗೌರವ ಇಮ್ಮಡಿ ಆಗುತ್ತಿತ್ತು.

ಕಾರ್ಗಿಲ್ ಯುದ್ಧ ಆರಂಭ ಆಗಿಯೇ ಬಿಟ್ಟಿತು!
1999ರ ಕಾರ್ಗಿಲ್ ಯುದ್ಧ ಆರಂಭವಾದಾಗ ಅಜಿತ್ ಆಪರೇಶನ್ ರಕ್ಷಕ್ ಮತ್ತು ಆಪರೇಶನ್ ವಿಜಯ್ ತಂಡದ ಸದಸ್ಯರಾಗಿ ಆಯ್ಕೆಯಾದರು. ಕಾರ್ಗಿಲ್ ಯುದ್ಧವು ತೀವ್ರವಾಗಿ ನಡೆಯುತ್ತಿದ್ದಾಗ ನಾನು ಅವರ ಬಗ್ಗೆ ದೇವರಲ್ಲಿ ದಿನವೂ ಪ್ರಾರ್ಥನೆ ಮಾಡುತ್ತಿದ್ದೆ. ಅಕ್ಟೋಬರ್ 29ರಂದು ಸಂಜೆ ನನಗೆ ಕರೆ ಮಾಡಿ ಐದು ನಿಮಿಷ ಮಾತನಾಡಿದ್ದರು. ತನ್ನ ಮಕ್ಕಳ ಜೊತೆಗೂ ಮಾತಾಡಿದ್ದರು. ತನ್ನ ಮಾತನ್ನು ಮುಗಿಸುವಾಗ ಯಾವಾಗಲೂ ‘ಜೈ ಹಿಂದ್’ ಅಂತಾನೆ ಮುಗಿಸೋರು. ಅಂದು ಕೂಡ ಹೇಳಿದರು!

ಮರುದಿನ ಬೆಳಿಗ್ಗೆ ಸಿಡಿಲು ಬಡಿದಿತ್ತು!
ಆದರೆ ಮರುದಿನ ಬೆಳಗ್ಗೆ ನಾವು ಕಣ್ಣು ತೆರೆಯುವ ಮೊದಲೇ ಶಾಕಿಂಗ್ ನ್ಯೂಸ್ ಹೊತ್ತುಕೊಂಡು ಒಬ್ಬ ಸೈನಿಕನು ನಮ್ಮ ಮನೆಬಾಗಿಲಿಗೆ ಬಂದಿದ್ದ. ” ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಪಾಕಿಸ್ತಾನದ ಸೈನಿಕರೊಂದಿಗೆ ಹೋರಾಡುತ್ತ ಹುತಾತ್ಮರಾದರು!” ಎಂಬ ಸುದ್ದಿ ಬಂದಿತ್ತು. ನಾನು ಪಾತಾಳಕ್ಕೆ ಕುಸಿದು ಕುಳಿತೆ. ಹಿಂದಿನ ದಿನವಷ್ಟೆ ಕರೆ ಮಾಡಿ ಮಾತಾಡಿದ್ದ ಗಂಡ ಇನ್ನು ಮರಳಿ ಬರುವುದೇ ಇಲ್ಲ ಅಂದರೆ ನಂಬೋದು ಹೇಗೆ?

ಅಳು ನುಂಗಿ ನಗುವ ಪ್ರಯತ್ನ ಮಾಡಲೇ ಬೇಕಿತ್ತು!
ಮಕ್ಕಳು ಇನ್ನೂ ತುಂಬಾ ಚಿಕ್ಕವರು. ಒಂದೆರಡು ದಿನಗಳಲ್ಲಿ ಅಜಿತ್ ಅವರ ಪಾರ್ಥಿವ ಶರೀರವು ಅವರ ಹುಟ್ಟೂರಾದ ಬೆಂಗಳೂರಿಗೆ ಬಂದಾಗ ನಾನು ಇನ್ನೂ ಆಘಾತದಿಂದ ಹೊರ ಬಂದಿರಲಿಲ್ಲ. ತ್ರಿವರ್ಣ ಧ್ವಜವನ್ನು ಹೊದ್ದು ಮಲಗಿದ್ದ ನನ್ನ ಅಜಿತ್ ನಮ್ಮನ್ನೆಲ್ಲ ಬಿಟ್ಟು ಹೋಗಿಬಿಟ್ಟರು. ಅವರು ನನ್ನನ್ನು ಸ್ವಾವಲಂಬಿಯಾಗು ಅಂತ ಯಾವಾಗಲೂ ಹೇಳುತ್ತಿದ್ದದ್ದು ಯಾಕೆ? ಎಂದು ನನಗೆ ಅರ್ಥ ಆಗತೊಡಗಿತು.

ಶಿಕ್ಷಕಿಯಾಗಿ ಶಾಲೆಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದೆ. ನನ್ನ ಇಬ್ಬರು ಮಕ್ಕಳು ತುಂಬಾ ಸಣ್ಣವರು. ಅವರಿಗೆ ತುಂಬಾ ವರ್ಷ ಅಪ್ಪ ಹುತಾತ್ಮರಾದ ವಿಷಯ ಹೇಳಲೇ ಇಲ್ಲ. ನನ್ನ ಅಜಿತ್ ನನ್ನ ಹೃದಯದ ಒಳಗಿದ್ದು ನನ್ನನ್ನು ಶಕ್ತಿಶಾಲಿಯಾಗಿ ಮುನ್ನಡೆಸುತ್ತಿದ್ದರು. 2000ರಲ್ಲಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ಬಂದಾಗ ಹೆಮ್ಮೆಯಿಂದ ಹೋಗಿ ಸ್ವೀಕರಿಸಿದೆ. ನಾನು ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೆ. ಹುತಾತ್ಮ ಯೋಧರ ಕುಟುಂಬಗಳ ಬಗ್ಗೆ ಸೇವೆ ಸಲ್ಲಿಸುತ್ತಾ ಬಂದಿರುವ “ವಸಂತ ರತ್ನ” ಎಂಬ ಫೌಂಡೇಶನ್ ಜೊತೆಗೆ ಆಗಲೇ ಕೈಜೋಡಿಸಿದ್ದೆ. ನನ್ನ ಶಾಲೆಯ ಪುಟ್ಟ ಮಕ್ಕಳಿಗೆ ರಾಷ್ಟ್ರಪ್ರೇಮದ ಕಥೆಗಳನ್ನು ಹೇಳುತ್ತಿದ್ದೆ.

ಸೇನೆ ಸೇರಿದ ಇಬ್ಬರು ಮಕ್ಕಳ ಜತೆ ಶಕುಂತಲಾ ಭಂಡಾರ್ಕರ್

ನನ್ನ ದೊಡ್ಡ ಮಗ ನಿರ್ಭಯ್ ನನ್ನನ್ನು ಬೆಚ್ಚಿ ಬೀಳಿಸಿದ!
ಒಂದು ದಿನ ಬೆಳಿಗ್ಗೆ ನನ್ನ ದೊಡ್ಡ ಮಗ ನಿರ್ಭಯ್ ನನ್ನ ಹತ್ತಿರ ಕೂತು “ಅಮ್ಮಾ, ನಾನು ಸೈನ್ಯಕ್ಕೆ ಸೇರಲೇ?” ಅಂದ! ಆಗ ಮನಸ್ಸು ಒಂದು ಕ್ಷಣ ವಿಚಲಿತ ಆಯಿತು. ಅವನಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ರಾತ್ರಿ ನನ್ನ ಕನಸಲ್ಲಿ ಅಜಿತ್ ಬಂದು “ಜೈ ಹಿಂದ್” ಹೇಳಿದಾಗ ಮನಸ್ಸು ಕಠಿಣ ನಿರ್ಧಾರಕ್ಕೆ ಬಂದಿತು. ದೊಡ್ಡ ಮಗನನ್ನು ತುಂಬಾ ಪ್ರೀತಿಯಿಂದ ಸೇನಾ ಶಾಲೆಗೆ ಕಳುಹಿಸಿಕೊಟ್ಟೆ. ಅವನು ತನ್ನ ಸೇನಾ ತರಬೇತಿಯನ್ನು ಮುಗಿಸಿ ಕ್ಯಾಪ್ಟನ್ ನಿರ್ಭಯ್ ಭಂಡಾರ್ಕರ್ ಆಗಿ ಮನೆಗೆ ಬಂದಾಗ ಸೆಲ್ಯೂಟ್ ಹೊಡೆದು “ಜೈ ಹಿಂದ್” ಹೇಳಿದೆ!

ಎರಡನೇ ಮಗನೂ ಅದೇ ದಾರಿ ಹಿಡಿದ!
ಕೆಲವೇ ದಿನಗಳಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನನ್ನ ಎರಡನೇ ಮಗ ಅಕ್ಷಯ್ ಅದೇ ಮಾತನ್ನು ಹೇಳಿದ. ನನ್ನ ಹೃದಯದಲ್ಲಿ ಅಜಿತ್ ಜೀವಂತವಾಗಿ ಇರುವಾಗ ನಾನು ಹೇಗೆ ಬೇಡ ಮಗ ಅನ್ನಲಿ! ಅವನು ನೇವಿಯ ತರಬೇತಿ ಮುಗಿಸಿ ಸಬ್ ಲೆಫ್ಟಿನೆಂಟ್ ಅಕ್ಷಯ್ ಭಂಡಾರ್ಕರ್ ಆಗಿ ಮನೆಗೆ ಹಿಂದಿರುಗಿದ. ನಾವು ಮೂರೂ ಜನ ಅಜಿತ್ ಅವರ ಫೋಟೊದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಾಗ ನನಗೆ ರೋಮಾಂಚನ! ನನ್ನ ಇಬ್ಬರು ಗಂಡು ಮಕ್ಕಳನ್ನು ಕೂಡ ಸೈನ್ಯಕ್ಕೆ ಸಮರ್ಪಣೆ ಮಾಡಿದ ಹೆಮ್ಮೆ! ಅಜಿತ್ ಬಿಟ್ಟು ಹೋಗಿದ್ದ ಅಪೂರ್ಣವಾದ ಕನಸನ್ನು ನನಸು ಮಾಡಿದ ಧನ್ಯತೆ! ಜೈ ಹಿಂದ್!

-ರಾಜೇಂದ್ರ ಭಟ್ ಕೆ. ಲೇಖಕರು ಹೈಸ್ಕೂಲ್‌ ಶಿಕ್ಷಕರು ಮತ್ತು ಜೇಸಿ ಅಂತಾರಾಷ್ಟ್ರೀಯ ತರಬೇತುದಾರರು

Exit mobile version