1999ರ ಮೇ ತಿಂಗಳಿನಲ್ಲಿ ಕಾರ್ಗಿಲ್ ಯುದ್ದದ ನಿರ್ಧಾರ ಆದಾಗ ಎಲ್ಲ ಸೈನಿಕರಿಗೂ ʻಎಲ್ಲಿದ್ದರೂ ಬನ್ನಿʼ ಎಂಬ ಆದೇಶ ನೀಡಲಾಗಿತ್ತು. ಆಗ ಭಾರತೀಯ ಸೇನೆ ಬಹುತೇಕ ರಜೆಯ ಮೂಡಿನಲ್ಲಿ ಇತ್ತು. ಕ್ಯಾಪ್ಟನ್ ವಿಕ್ರಂ ಬಾತ್ರಾ ಕೂಡ ರಜೆಯಲ್ಲಿ ಊರಿಗೆ ಬಂದು ಅಮ್ಮನ ಮುಂದೆ ಕೂತಿದ್ದರು. ಅವರ ಅಮ್ಮ ಒಬ್ಬರು ಶಿಕ್ಷಕಿ ಆಗಿದ್ದರು. ಅವರದ್ದು ಹಿಮಾಚಲ ಪ್ರದೇಶದ ಒಂದು ಪುಟ್ಟ ಹಳ್ಳಿ. ತನ್ನ ಸ್ವಂತ ಇಚ್ಛೆಯಿಂದ ಮಗ ಕಂಬೈನ್ ಡಿಫೆನ್ಸ್ ಪರೀಕ್ಷೆ ಬರೆದು ಸೈನಿಕನಾಗಿ ಸೇರಿದ್ದ.
ಅಮ್ಮನಿಗೆ ಮಗ ಅಪರೂಪಕ್ಕೆ ಊರಿಗೆ ಬಂದಿದ್ದಾನೆ, ಸ್ವಲ್ಪ ದಿನ ಜೊತೆಗೆ ಇದ್ದರೆ ಚೆನ್ನಾಗಿತ್ತು ಅಂತ ಆಸೆ ಇತ್ತು. ಆದರೆ ಯುದ್ಧಕ್ಕೆ ಕರೆಬಂದಾಗ ಭಾರತೀಯ ಸೈನಿಕ ಹೊರಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಹಾಗೆ ಕ್ಯಾಪ್ಟನ್ ವಿಕ್ರಂ ಬಾತ್ರಾ ಹೊರಟು ನಿಂತಿದ್ದ ತನ್ನ ಎದೆಯನ್ನು ಕಲ್ಲು ಮಾಡಿಕೊಂಡು! ಅಮ್ಮನಿಗೆ ಕಣ್ಣೀರು ತಡೆದುಕೊಳ್ಳಲು ಆಗಲೇ ಇಲ್ಲ.
ಆಗ ಮಗ ಅಮ್ಮನಿಗೆ ಧೈರ್ಯ ತುಂಬುತ್ತಾ, “ಅಳಬೇಡ ಅಮ್ಮ. ನೀನು ವೀರ ಸೈನಿಕನ ತಾಯಿ. ನಾನು ಖಂಡಿತ ಹಿಂದೆ ಬರುತ್ತೇನೆ. ಯುದ್ಧವನ್ನು ಗೆದ್ದರೆ ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ. ಅಥವಾ ತ್ರಿವರ್ಣ ಧ್ವಜವನ್ನು ಹೊದ್ದು ಹಿಂದೆ ಬರುತ್ತೇನೆ!” ಅಮ್ಮನಿಗೆ ಎಷ್ಟು ಅರ್ಥ ಆಯಿತೋ ಗೊತ್ತಿಲ್ಲ. ಅವನಿಗೆ ಆರತಿ ಎತ್ತಿ ಆಶೀರ್ವಾದ ಮಾಡಿ ಕಳುಹಿಸಿದರು.
1999ರ ಮೇ ತಿಂಗಳಿನಲ್ಲಿ ಆರಂಭ ಆದ ಕಾರ್ಗಿಲ್ ಯುದ್ಧವು ಎರಡು ತಿಂಗಳ ಕಾಲ ಮುಂದುವರಿಯಿತು. ಅದರಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಿಗೆ ತುಂಬಾ ಕ್ಲಿಷ್ಟಕರವಾದ ಟಾಸ್ಕ್ ನೀಡಲಾಯಿತು. ಏಳು ಸಾವಿರ ಅಡಿ ಎತ್ತರದ ಹಿಮ ಪರ್ವತದ ಶಿಖರ (ಅದರ ಹೆಸರು ಪಾಯಿಂಟ್ 5140)ವನ್ನು ಆಕ್ರಮಿಸಿಕೊಂಡ ಪಾಕ್ ಸೈನಿಕರಿಂದ ಮತ್ತೆ ಭಾರತದ ವಶಕ್ಕೆ ಪಡೆಯುವ ಟಾಸ್ಕ್ ಅದು.
ಕ್ಯಾಪ್ಟನ್ ಬಾತ್ರಾ ಅವರು ತನ್ನ ಜೊತೆಗೆ ಇದ್ದ ಐದು ಸೈನಿಕರಿಗೆ ಧೈರ್ಯ ಹೇಳಿ ‘ಯೇ ದಿಲ್ ಮಾಂಗೇ ಮೋರ್’ ಎಂಬ ಘೋಷಣೆಯನ್ನು ಕೊಡುತ್ತಾರೆ. ಆ ಶಿಖರವನ್ನು ಮುಂಭಾಗದಿಂದ ಏರಿ ಅದನ್ನು ವಶ ಪಡಿಸಿಕೊಳ್ಳುತ್ತಾರೆ. ನಿರಂತರ ಬಾಂಬ್, ಗ್ರಾನೈಡ್ ಮತ್ತು ಕ್ಷಿಪಣಿ ದಾಳಿಗಳ ನಡುವೆ, ದುರ್ಗಮ ಹಾದಿಯಲ್ಲಿ ಸಾಗಿ ಆ ಶಿಖರವನ್ನು ಏರಿ ಅದನ್ನು ಗೆದ್ದದ್ದು ಅಸಾಮಾನ್ಯ ಸಾಹಸವೇ ಆಗಿತ್ತು.
ಅದನ್ನು ಮುಗಿಸಿ ಇನ್ನೊಂದು ಶಿಖರವನ್ನು (ಪಾಯಿಂಟ್ 4875) ವಶ ಮಾಡಲು ಹೊರಟಾಗ ಕ್ಷಿಪಣಿ ದಾಳಿಗೆ ತುತ್ತಾಗಿ ಕ್ಯಾಪ್ಟನ್ ವಿಕ್ರಂ ಬಾತ್ರಾ ತನ್ನ ಪ್ರಾಣವನ್ನು ಕಳೆದುಕೊಂಡರು. ಅವರಿಗೆ ಮರಣೋತ್ತರ ಆಗಿ ಓರ್ವ ಸೈನಿಕನಿಗೆ ನೀಡುವ ಪರಮೋಚ್ಛ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.
ಈ ರೀತಿ ಹುತಾತ್ಮರಾದ 527 ಭಾರತೀಯ ಸೈನಿಕರ ಬಲಿದಾನದ ಫಲವಾಗಿ ಭಾರತವು ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆ ಸೈನಿಕರ ಗೌರವದ ದಿನ ಇಂದು ಕಾರ್ಗಿಲ್ ವಿಜಯ ದಿವಸ್. ಆ ಮಹಾನ್ ಸೈನಿಕರಿಗೆ ನಮ್ಮ ಶೃದ್ಧಾಂಜಲಿ ಇರಲಿ.
ಇದನ್ನೂ ಓದಿ| ರಾಜಮಾರ್ಗ ಅಂಕಣ| ಮಧ್ಯ ರಾತ್ರಿ ಎದ್ದುಬಂದು ಎರಡು ಹಾಡು ಹಾಡಿದ್ದರು ಸುಬ್ಬುಲಕ್ಷ್ಮಿ, ಯಾಕೆಂದರೆ..