ಕೃಷ್ಣ ಭಟ್ ಅಳದಂಗಡಿ- motivational story
ಅದೊಂದು ಪುಟ್ಟ ಪಟ್ಟಣ. ಅಲ್ಲೊಂದು ಪೆಟ್ ಶಾಪ್ ಇತ್ತು. ಪೆಟ್ ಶಾಪ್ ಎಂದರೆ ಮುದ್ದಾದ ನಾಯಿ ಮರಿಗಳನ್ನು ಮಾರಾಟ ಮಾಡುವ ಅಂಗಡಿ.
ಒಮ್ಮೆ ಒಬ್ಬ ಬಾಲಕ ಒಂದು ನಾಯಿ ಮರಿ ತಗೊಬೇಕು ಅಂತ ಆ ಅಂಗಡಿಗೆ ಬಂದ. ಬಂದವನೇ ಮಾಲೀಕನಲ್ಲಿ ಕೇಳಿದ: ನಂಗೊಂದು ನಾಯಿ ಮರಿ ಬೇಕು, ಎಷ್ಟು ದುಡ್ಡಾಗ್ತದೆ?
ಅಂಗಡಿಯವ ಹೇಳಿದ: ಈಗ ಇರುವ ಮರಿಗಳಿಗೆ 200ರಿಂದ 1000 ರೂ. ಆಗ್ತದೆ.
ಹುಡುಗ ಹೇಳಿದ: ಹೌದಾ? ನನ್ನ ಹತ್ರ 100 ರೂ. ಮಾತ್ರ ಇರುವುದು. ಉಳಿದ ಹಣ ಆಮೇಲೆ ಕೊಟ್ರೆ ಆದೀತಾ? ಅದಕ್ಕಿಂತ ಮೊದಲು ನಾನೊಮ್ಮೆ ನಾಯಿ ಮರಿಗಳನ್ನು ನೋಡಬಹುದಾ?
ನಾಯಿ ಮರಿಗಳನ್ನು ಕುರಿತು ಹುಡುಗನಿಗೆ ಇರುವ ಪ್ರೀತಿಯನ್ನು ಗಮನಿಸಿದ ಅಂಗಡಿಯವನು: ಆಯ್ತು… ಬಾಕಿ ದುಡ್ಡು ಆಮೇಲೂ ಕೊಡುವಿಯಂತೆ.. ಮರಿಗಳನ್ನು ನೋಡು ಅಂತ ಹೇಳಿ ಆರು ಪಪ್ಪಿಗಳನ್ನು ಗೂಡಿನಿಂದ ಹೊರಗೆ ಬಿಟ್ಟ.
ಗೂಡಿನಿಂದ ಹೊರಗೆ ಬರುತ್ತಿದ್ದಂತೆಯೇ ಮರಿಗಳು ಪುಟಪುಟನೆ ಓಡಲಾರಂಭಿಸಿದವು. ಕೋಣೆಯಲ್ಲೆಲ್ಲ ಅವುಗಳದೇ ಗೌಜಿ. ಆದರೆ ಒಂದು ಮರಿ ಮಾತ್ರ ಹಿಂದೆ ಬೀಳ್ತಾ ಇತ್ತು. ಕಾಲೆಳೆದು ನಡೀತಾ ಇತ್ತು.
ಹುಡುಗ ಹೇಳಿದ: ಸ್ವಲ್ಪ ಡಲ್ ಆಗಿರೋ ಬಣ್ಣದ, ನಡೆಯಲು ಕಷ್ಟಪಡುತ್ತಿರುವ ಮರಿ ಇದ್ಯಲ್ವಾ? ಅದು ನಂಗೆ ಬೇಕು.
ಮಾಲೀಕ ಅಂದ: ಓ ಅದಾ… ಅದರ ಕಾಲಿನ ಪಾದ ಊನ ಆಗಿದೆ, ಗಂಟಿನಲ್ಲೂ ಸಮಸ್ಯೆ ಇದೆ. ಓಡುದು, ನಡಿಯೋದು ಕಷ್ಟ. ನಿಂಗೆ ನಿಜಕ್ಕೂ ಅದೇ ಇಷ್ಟ ಆಯ್ತು ಅಂದ್ರೆ ಫ್ರೀಯಾಗಿ ತಗೊಂಡು ಹೋಗು. ಆದ್ರೆ ಮತ್ತೊಮ್ಮೆ ಯೋಚನೆ ಮಾಡು. ಅದಕ್ಕೆ ನಡೆಯೋಕೇ ಕಷ್ಟ ಆಗ್ತಿದೆ.
ಹುಡುಗ ಹೇಳಿದ: ಪರವಾಗಿಲ್ಲ ಅಂಕಲ್… ನೀವು ಅದನ್ನು ಫ್ರೀ ಆಗಿ ಕೊಡಬೇಕಿಲ್ಲ.. ಈಗ ನೂರು ರೂಪಾಯಿ ಕೊಟ್ಟಿರ್ತೇನೆ. ಉಳಿದ ಹಣ ಇನ್ನೊಮ್ಮೆ ಕೊಟ್ಟೇ ಕೊಡ್ತೇನೆ. ನಂಗೆ ಅದೇ ಇರ್ಲಿ.
ಮಾಲೀಕ ಮತ್ತೆ ಹೇಳಿದ: ಅಲ್ಲ ಕಣೋ, ಪೂರ್ತಿ ದುಡ್ಡು ಕೊಡ್ತೇನೆ ಅಂತೀಯಾ? ಮತ್ಯಾಕೆ ಕುಂಟು ನಾಯಿಯನ್ನು ತಗೊಂಡು ಹೋಗ್ತೀಯಾ? ಇಷ್ಟು ಮುದ್ದಾಗಿ ಪುಟಪುಟಾಂತ ಓಡಾಡೋ ನಾಯಿಗಳಿವೆಯಲ್ಲಾ… ಅದನ್ನೇ ತಗೋ. ಇದನ್ನು ನಾನು ಯಾರಿಗಾದ್ರೂ ಉಚಿತವಾಗಿ ಕೊಡ್ತೇನೆ… ಇಲ್ಲಂದ್ರೆ ದಾರಿಯಲ್ಲಿ ಬಿಡ್ತೇನೆ.
ಹುಡುಗ ಹೇಳಿದ: ಇಲ್ಲ ಅಂಕಲ್. ನಂಗೆ ಅದೇ ಇರ್ಲಿ. ಕಾಲು ಹಿಡ್ಕೊಂಡು ಏನಾಗ್ಬೇಕು. ಮನೆಯೊಳಗೆ ಆಡಿಕೊಂಡಿದ್ರೆ ಸಾಕಲ್ವಾ? ಅದೇನು ರೇಸ್ ಗೆ ಹೋಗ್ಬೇಕಾ? ಅದಕಿಂತಲೂ ಹೆಚ್ಚಾಗಿ ಅದನ್ನು ನಾನು ಬಿಟ್ರೆ ಬೇರೆ ಯಾರು ತಗೋತಾರೆ ಅಂಕಲ್. ನೀವು ಬೇರೆ ಮಾರ್ಗದಲ್ಲಿ ಬಿಡ್ತೇನೆ ಅಂತೀರಿ.
ಹುಡುಗನ ಮಾತು ಮಾಲೀಕನಿಗೆ ತುಂಬ ಇಷ್ಟ ಆಯ್ತು. ಅವನು ಕೇಳಿದ: ಅದ್ಸರಿ.. ಎಲ್ಲ ಮಕ್ಕಳೂ ಒಳ್ಳೆ ಮರೀನೇ ಬೇಕು ಅಂತ ಹಠ ಮಾಡ್ತಾರೆ. ನಿಂಗ್ಯಾಕೆ ಈ ಮರಿ ಇಷ್ಟ ಆಯ್ತು?
ಹುಡುಗ ತಾನು ಹಾಕಿದ ಪ್ಯಾಂಟನ್ನು ಸ್ವಲ್ಪ ಮೇಲಕ್ಕೇರಿಸಿ ಹೇಳಿದ: ಅಂಕಲ್ ನಾನು ಕೂಡಾ ಅದರಂತೆಯೇ ಕಾಲು ಮುರಿದ ಮರಿ ಅಂಕಲ್. ಅದರ ನೋವನ್ನು ನಾನೇ ಅರ್ಥ ಮಾಡಿಕೊಳ್ಳದೆ ಇದ್ದರೆ ಹೇಗೆ?
ಮೊಣಕಾಲಿಂದ ಕೆಳಗಡೆ ಕೃತಕ ಕಾಲು ಹೊಂದಿದ್ದ ಬಾಲಕನನ್ನು ಮಾಲೀಕ ಬಾಚಿ ತಬ್ಬಿಕೊಂಡ.
ಇದನ್ನೂ ಓಡಿ: Motivational story: ಬಡತನ ತೋರಿಸಲು ಹೋದರೆ ಮಗನಿಗೆ ಕಂಡದ್ದು ಶ್ರೀಮಂತಿಕೆ!