Site icon Vistara News

Motivational Story: ಸೋಲಿನ ಭಯದಲ್ಲೇ ಇದ್ದ ಅವನಿಗೆ ಕೇಶವ ಮೂರ್ತಿ ಹೇಳಿದ ಗೆಲುವಿನ ಮಂತ್ರ

fear of failure

ಪ್ರಮೋದ ಹೆಗಡೆ, Motivational Story
ಒಬ್ಬ ಯುವಕ ತನ್ನ ಜೀವನದಲ್ಲಿ ಸತತವಾಗಿ ಸೋಲನ್ನೇ ಕಂಡಿದ್ದ. ಆತನಿಗೆ ಚಿಕ್ಕ ವಯಸ್ಸಿನಿಂದಲೂ ಗೆಲುವಿನ ಅನುಭವ ಹೇಗಿರುತ್ತದೆ ಎಂದು ತಿಳಿದೇ ಇರಲಿಲ್ಲ. ಹಾಗಂತ ಅವನಿಗೆ ಗೆಲ್ಲುವ ಸಾಮರ್ಥ್ಯವಿಲ್ಲ ಎಂದಲ್ಲ! ಆತ ನಿಜಕ್ಕೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿರುವವನು. ಆದರೆ, ಸೋಲುವ ಭಯ ಅವನನ್ನು ಗೆಲ್ಲಲು ಬಿಡುತ್ತಿರಲಿಲ್ಲ.

ತನ್ನ ಜೀವನದ ಅತ್ಯಂತ ಮುಖ್ಯವಾದ ಘಟ್ಟದಲ್ಲಿದ್ದ. ತನ್ನ ಕನಸಿನಂತೆ ಐಎಎಸ್‌ ಅಧಿಕಾರಿಯಾಗಲು ಪರೀಕ್ಷೆಯನ್ನು ಕಟ್ಟಿದ್ದ. ಆ ಪರೀಕ್ಷೆಯ ದಿನ ಸಮೀಪಿಸಿತ್ತು. ಆತ ಓದುತ್ತಿದ್ದ. ಶ್ರಮ ಪಡುತ್ತಿದ್ದ. ಆದರೆ ಪರೀಕ್ಷೆಯಲ್ಲಿ ಪಾಸ್‌ ಆಗದಿದ್ದರೆ ಎಂಬ ಭಯದಿಂದ ಓದುತ್ತಿದ್ದ. ಅವನ ಚಿಂತೆ ಆತನ ಮುಖದಲ್ಲಿ ಎದ್ದು ಕಾಣುತ್ತಿದ್ದನ್ನು ಕೇಶವಮೂರ್ತಿಯವರು ಗಮನಿಸಿದ್ದರು. ಕೇಶವಮೂರ್ತಿ ಎಂದರೆ ಆ ಯುವಕನ ಮೆಂಟರ್.‌

ಆ ಯುವಕನಿಗೆ ಧೈರ್ಯ ತುಂಬಲು ಕೇಶವಮೂರ್ತಿಯವರು ಒಂದು ಜೆನ್‌ ಕಥೆ ಹೇಳಿದರು:
ಆತ ಒಬ್ಬ ಕುಸ್ತಿ ಪಟು. ಬಲಾಢ್ಯನಾಗೇನೋ ಇದ್ದ, ಆದರೆ ಎಲ್ಲರೆದುರಿಗೆ ಬಹಳ ಬಲಹೀನ ಕುಸ್ತಿ ಪಟುವಂತೆ ವರ್ತಿಸುತ್ತಿದ್ದ. ನಿಜ ಹೇಳಬೇಕೆಂದರೆ ಇಬ್ಬಿಬ್ಬರು ಎದುರಾಳಿಗಳನ್ನು ಒಮ್ಮೆಲೇ ಸೋಲಿಸುವ ತಾಕತ್ತು ಅವನಲ್ಲಿತ್ತು. ತನ್ನ ಮೇಲಿನ ಅಪನಂಬಿಕೆಯಿಂದಾಗಿ ಪದೇಪದೆ ಸೋಲುತ್ತಿದ್ದ.

ಒಮ್ಮೆ ಜೆನ್ ಗುರುವೊಬ್ಬ ಆ ಊರಿನಲ್ಲಿ ತಂಗಿದ್ದ, ಅವನ ಬಳಿ ಬಂದ ಕುಸ್ತಿಪಟು ತನ್ನ ತೊಳಲಾಟವನ್ನು ತೋಡಿಕೊಂಡು ಪರಿಹರಿಸುವಂತೆ ಬೇಡಿಕೊಂಡ. ಗುರುವಿಗೆ ಅವನಲ್ಲಿದ್ದ ಸಾಮರ್ಥ್ಯದ ಮತ್ತು ಬಲಹೀನತೆಗಳ ಅರಿವಾಗಲು ಬಹಳ ಸಮಯವೇನೂ ಬೇಕಾಗಲಿಲ್ಲ. ಆತನೊಳಗೆ ಅತ್ಮವಿಶ್ವಾಸ ತುಂಬುವುದೇ ಪರಿಹಾರವಾಗಿ ಕಾಣಿಸಿತು.

“ನೀನು ಇವತ್ತು ರಾತ್ರಿ ಪೂರ್ತಿ ಇದೇ ಮಂದಿರದಲ್ಲಿ ಕೂತು ಧ್ಯಾನ ಮಾಡು. ಯಾವ ಕಾರಣಕ್ಕೂ ಕಣ್ಣು ತೆರೆಯಬೇಡ. ನಿನ್ನ ಏಕಾಗ್ರತೆ ತೀಕ್ಷ್ಣವಾದ ಸಮಯದಲ್ಲಿ ಸಮುದ್ರದ ಅಲೆಗಳು ನಿನ್ನತ್ತ ಬರುವುದು ನಿನಗೆ ಕೇಳಿಸುತ್ತದೆ. ಧೃತಿಗೆಡಬೇಡ, ಧ್ಯಾನದಿಂದ ವಿಚಲಿತನಾಗಬೇಡ. ಅವು ನಿನ್ನನ್ನು ಬಲು ಜೋರಾಗಿ ಅಪ್ಪಳಿಸುತ್ತವೆ. ಆಗಲೂ ನೀನು ಕಣ್ಣು ತೆರೆಯಬೇಡ. ಇಡೀ ಮಂದಿರವೇ ಕೊಚ್ಚಿಹೋಗುತ್ತಿರುವುದು ನಿನಗೆ ಭಾಸವಾಗುತ್ತಿರುತ್ತದೆ. ಆದರೆ ನೀನು ಮಾತ್ರ ಸ್ಥಿರವಾಗಿ ಕೂತೇ ಇರು. ನಿನ್ನ ಶಕ್ತಿಯನ್ನೆಲ್ಲ ಪ್ರಯೋಗಿಸಿ ಆ ಅಲೆಗಳಿಗೆ ಮೈಯೊಡ್ಡು. ಬೆಳಗ್ಗೆ ಬಂದು ಕಾಣುತ್ತೇನೆ.’ ಹೀಗೆಂದು ಹೇಳಿ ಗುರು ನಿದ್ರೆಗೆ ಹೊರಟರು.

ತುಂಬಾ ಹೊತ್ತು ಏಕಾಗ್ರತೆಗೆ ಕಾದಾಡಿದ ನಂತರ ದೂರದಲ್ಲಿ ಅಲೆಗಳು ಬರುತ್ತಿರುವ ಸದ್ದು ಆತನಿಗೆ ಕೇಳಿಸಿತು. ಕಣ್ಣು ತೆರೆಯಲಿಲ್ಲ. ಮತ್ತಷ್ಟು ಹತ್ತಿರ ಬಂದವು, ಸದ್ದು ಜೋರಾಯಿತು. ಆಗಲೂ ಧೃತಿಗೆಡಲಿಲ್ಲ. ಅಲೆಗಳು ಅಪ್ಪಳಿಸಿಯೇ ಬಿಟ್ಟವು. ಶಕ್ತಿಯನ್ನೆಲ್ಲ ಬಳಸಿ ಗಟ್ಟಿಯಾಗಿ ಕುಳಿತ. ಗುರು ಹೇಳಿದಂತೆ ಎಲ್ಲವೂ ನಡೆಯಿತು. ಗುರು ಹೇಳಿದಂತೆ ಎಲ್ಲವನ್ನೂ ಆತ ಪಾಲಿಸಿದ.

ಬೆಳಗ್ಗೆ ಗುರು ಒಂದು ನೋಡಿದ, ಆ ಕುಸ್ತಿ ಪಟು ಇನ್ನೂ ಧ್ಯಾನದಲ್ಲಿ ಇದ್ದ. ಮುಖದಲ್ಲಿ ನಿರಾಳತೆ, ಖುಷಿಯ ಗೆರೆಗಳು ಕಂಡುಬರುತ್ತಿದ್ದವು. ‘ಇನ್ನು ಸಾಕು, ಮೇಲಕ್ಕೆ ಎದ್ದೇಳು’ ಗುರು ಹೇಳಿದ ಮಾತಿಗೆ ಆತ ಧ್ಯಾನದಿಂದ ಹೊರಬಂದು ಕಣ್ಣು ತೆರೆದ. ಎಲ್ಲವೂ ಇದ್ದಂತೆಯೇ ಇತ್ತು, ರಾತ್ರಿ ಅಲೆಗಳ ವಿರುದ್ಧ ಸೆಣಸಾಡಿದ ಮೈ ಭಾರ, ಜಗ್ಗದೇ ಕೂತು ಗೆದ್ದ ಉಲ್ಲಾಸ ಇತ್ತಾದರೂ, ಅಲೆ ಬಂದು ಕೊಚ್ಚಿ ಹೋದ ಯಾವ ಅವಘಡವೂ ಅಲ್ಲಿ ಸಂಭವಿಸಿರಲಿಲ್ಲ!

ಆತ ಮಾತನಾಡುವುದಕ್ಕೂ ಮುಂಚೆಯೇ ಗುರು ಹೇಳಿದ ‘ನೀನಿನ್ನು ವಿಶ್ವದ ಮಹಾನ್ ಕುಸ್ತಿಪಟು ಆಗುತ್ತೀಯಾ ಹೋಗು. ರಕ್ಕಸ ಅಲೆಗಳನ್ನೆಲ್ಲ ನೀನೆಷ್ಟು ಗಟ್ಟಿತನ, ದೃಢತೆಯಿಂದ, ಎದುರಿಸಿದೆಯೋ ಅದೇ ರೀತಿ ಎದುರಾಳಿಗಳನ್ನೂ ಎದುರಿಸು. ಅಲೆಗಳನ್ನೇ ಗೆದ್ದವನಿಗೆ ಮನುಷ್ಯರನ್ನು ಗೆಲ್ಲುವುದು ಕಷ್ಟವೇ?’

ಕುಸ್ತಿ ಪಟುವಿಗೆ ತನ್ನೊಳಗಿನ ಸಾಮರ್ಥ್ಯದ ಅರಿವಾಗಿತ್ತು. ಗೆಲ್ಲಲು ಇರಬೇಕಾದ ಮನಸ್ಥಿತಿ, ಬದ್ಧತೆಗಳ ಪರಿಚಯವೂ ಆತನಿಗಾಗಿತ್ತು. ಮುಂದೆ ಗುರು ಹೇಳಿದಂತೆ ಅವನೊಬ್ಬ ಮಹಾನ್‌ ಕುಸ್ತಿಪಟುವೇ ಆದ.

ಕೇಶವಮೂರ್ತಿ ಕಥೆ ಹೇಳಿ ಮುಗಿಸಿದರು. ಈ ಕಥೆಯನ್ನು ಕೇಳಿದ ಯುವಕ ಏನೂ ಮಾತನಾಡಲಿಲ್ಲ. ಅಲ್ಲಿ ಮೌನ ಮಾತ್ರವೇ ಇತ್ತು.‌ ಆತನ ಮನಸ್ಸನ್ನು ಅರಿತು ಸಮಾಧಾನ ಮಾಡಿ ಧೈರ್ಯ ತುಂಬಿದ ಮೆಂಟರ್‌ ಕೇಶವ ಮೂರ್ತಿಯವರ ಕಾಲಿಗೆ ಬಿದ್ದು, ನಮಸ್ಕರಿಸಿ ಎದ್ದು ಹೊರಟ. ಮತ್ತೆ ಕೇಶವಮೂರ್ತಿಯವರ ಬಳಿ ಬಂದಿದ್ದು ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಬಂದಮೇಲೆ….. ಸ್ವೀಟ್‌ ಡಬ್ಬಿಯೊಂದಿಗೆ.

ಇದನ್ನೂ ಓದಿ: Motivational story: ಸೋಲಿನ ಕೊನೆ ಮನೆಯಲ್ಲೂ ಗೆಲ್ಲಿಸುವ ಶಕ್ತಿಯೊಂದು ಇರ್ತದಲ್ವಾ?

Exit mobile version