Site icon Vistara News

Motivational story | ಅರ್ಹತೆ ಎಂದರೆ ಶಿಕ್ಷಣ, ಮ್ಯಾನೇಜ್ಮೆಂಟ್ ಅಷ್ಟೆ ಅಲ್ಲ.. ಬೇರೇನೋ ಇದೆ!

temple

ಕೃಷ್ಣ ಭಟ್‌ ಅಳದಂಗಡಿ | Motivational story

ಅದೊಂದು ಊರು. ಅಲ್ಲೊಬ್ಬ ಶ್ರೀಮಂತ. ಅವನು ಗ್ರಾಮದ ಮಧ್ಯ ಭಾಗದಲ್ಲಿ ಒಂದು ದೊಡ್ಡ ದೇವಾಲಯವನ್ನು ಕಟ್ಟಿದ. ದೇವಾಲಯ ತುಂಬ ಭವ್ಯವಾಗಿತ್ತು. ಜನ ಭಕ್ತಿಯಿಂದಲೂ, ಸೌಂದರ್ಯ ಸವಿಯುವ ಆಸೆಯಿಂದಲೂ ಅಲ್ಲಿಗೆ ಬರುತ್ತಿದ್ದರು. ಬಲುಬೇಗನೆ ದೇಗುಲದ ವಿಷಯ ಪಕ್ಕದ ಊರುಗಳಿಗೆಲ್ಲ ಹರಡಿತು. ಜನ ಬರುವುದು ಹೆಚ್ಚಿತು.

ಶ್ರೀಮಂತ ವ್ಯಕ್ತಿ ಭಕ್ತಿಯಿಂದ ದೇವಸ್ಥಾನವೇನೋ ಕಟ್ಟಿಸಿದ್ದರು. ಆದರೆ, ಅದು ಬೆಳೆಯುತ್ತಿದ್ದಂತೆಯೇ ನಿರ್ವಹಣೆ ಮಾಡುವುದು ಕಷ್ಟವಾಗಲಾರಂಭಿಸಿತು. ಅದಕ್ಕೆ ಒಬ್ಬ ಆಡಳಿತಾಧಿಕಾರಿಯನ್ನು ನೇಮಿಸೋಣ ಎಂದು ತೀರ್ಮಾನಿಸಿದರು. “ʻದೇವಸ್ಥಾನಕ್ಕೆ ಆಡಳಿತಾಧಿಕಾರಿ ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನೂ ನೀಡಿದರು.

ಇದನ್ನು ನೋಡಿದ ಕೂಡಲೇ ಅವರ ಸಂಬಂಧಿಕರು, ಆತ್ಮೀಯರೆಲ್ಲ ಮುಗಿಬಿದ್ದರು. ನಾವು ನೋಡ್ಕೊಳ್ತೇವೆ ಎಂದರು. ಅದೆಷ್ಟೋ ಮಂದಿ ಉನ್ನತ ಶಿಕ್ಷಣ ಪಡೆದವರು ತಾವು ಸಿದ್ಧ ಎಂದರು. ಹಲವರು ಅರ್ಜಿ ಹಾಕಿದರು, ಕೆಲವರು ಪ್ರಭಾವ ಬೀರಿದರು. ದೇವಸ್ಥಾನಕ್ಕೆ ಸಾಕಷ್ಟು ಆದಾಯವಿದ್ದುದರಿಂದ ಆಡಳಿತಾಧಿಕಾರಿ ಹುದ್ದೆಗೆ ಭಾರಿ ಡಿಮ್ಯಾಂಡ್ ಇತ್ತು.

ಆದರೆ, ಶ್ರೀಮಂತ ವ್ಯಕ್ತಿಗೆ `ʻಒಬ್ಬ ಅರ್ಹ ವ್ಯಕ್ತಿಯ ಕೈಗೆ ಅಧಿಕಾರ ನೀಡಬೇಕು’ ಎಂಬ ಆಸೆ ಇತ್ತು. ಪ್ರಭಾವ ಬೀರಿದವರು, ಅರ್ಜಿ ಸಲ್ಲಿಸಿದವರಿಗೆ ಅವರು ಹೇಳಿದ್ದು ಅದೇ ಮಾತು: ಅರ್ಹರನ್ನು ಹುಡುಕುತ್ತಿದ್ದೇನೆ ಅಂತ.

ಎಷ್ಟೇ ಹುಡುಕಾಟ ನಡೆಸಿದರೂ ಶ್ರೀಮಂತ ವ್ಯಕ್ತಿಯ ಆಸೆಯಂತೆ ಅರ್ಹರು ಸಿಗಲಿಲ್ಲ. ಹೆಚ್ಚಿನವರಿಗೆ ದೇವಾಲಯದ ದೊಡ್ಡ ಮೊತ್ತದ ಕಾಣಿಕೆ ಮೇಲೆ ಕಣ್ಣಿದ್ದರೆ ಕೆಲವರಿಗೆ ಅಧಿಕಾರದ ಆಸೆ ಇರುವುದು ಕಂಡಿತು. ಕೆಲವರಿಗಂತೂ ಒಳ್ಳೆಯ ವೇತನ ಸಿಗಬಹುದು ಎನ್ನುವ ನಿರೀಕ್ಷೆ.

ಅದೊಂದು ದಿನ ಅವರು ದೇವಸ್ಥಾನದ ಹೊರಭಾಗದ ಕಟ್ಟೆಯಲ್ಲಿ ಕೂತಿದ್ದರು. ಆಗ ಒಬ್ಬ ವ್ಯಕ್ತಿ ದೇವರ ದರ್ಶನ ಮಾಡಿ ಹೊರಗೆ ಹೋಗುತ್ತಿದ್ದ. ಅವನನ್ನು ಕರೆದರು. `ʻನೀನು ಆಡಳಿತಾಧಿಕಾರಿ ಆಗ್ತೀಯಾ?’ ಎಂದು ಕೇಳಿದರು.

ಅವನು ತಬ್ಬಿಬ್ಬಾಗಿ ಹೋದ. ಅವನ ಶರ್ಟು ಹಳತಾಗಿತ್ತು, ಧೋತ್ರ ಕಳೆ ಕಳೆದುಕೊಂಡಿತ್ತು. ಅವನು ಹೇಳಿದ: ಏನು ಹೇಳುತ್ತೀರಿ ಸ್ವಾಮಿ… ನಾನು ಹೆಚ್ಚು ತಿಳುವಳಿಕೆ ಇಲ್ಲದ, ಹೆಚ್ಚು ಅಕ್ಷರ ಜ್ಞಾನ ಇಲ್ಲದ ವ್ಯಕ್ತಿ ನನ್ನ ಹತ್ರ ಈ ರೀತಿ ಕೇಳ್ತೀರಲ್ಲಾ?

ಆಗ ಶ್ರೀಮಂತ ವ್ಯಕ್ತಿ ನಗುತ್ತಾ ಹೇಳಿದರು: ನನಗೆ ಈ ದೇವಸ್ಥಾನ ಮ್ಯಾನೇಜ್ ಮಾಡ್ಲಿಕೆ ಭಾರಿ ವಿದ್ಯಾವಂತ ಬೇಕು ಅಂತೇನಿಲ್ಲ. ʻಒಬ್ಬ `ಅರ್ಹ ವ್ಯಕ್ತಿ’ಗೆ ಅದನ್ನು ವಹಿಸಬೇಕು ಎನ್ನುವುದಷ್ಟೇ ನನ್ನ ಆಸೆ.

ಬಡ ವ್ಯಕ್ತಿಗೆ ಇನ್ನಷ್ಟು ಆಶ್ಚರ್ಯ. `ʻಅಲ್ಲಾ ಸ್ವಾಮಿ.. ನನ್ನಂಥ ಬಡವನಲ್ಲಿ ನಿಮಗೆ ಏನು ಅರ್ಹತೆ ಕಂಡಿತು?’ ಎಂದು ಕೇಳಿದ.

ಅದಕ್ಕೆ ಶ್ರೀಮಂತ ಹೇಳಿದ: `ʻನಾನು ಆಡಳಿತಾಧಿಕಾರಿಯನ್ನು ಹುಡುಕ್ತಾ ಇರುವುದು ಇವತ್ತು ಹೊಸತೇನೂ ಅಲ್ಲ. ತುಂಬ ದಿನದಿಂದ ನೋಡ್ತಾ ಇದ್ದೇನೆ. ನಿನ್ನನ್ನು ಕೂಡಾ ಗಮನಿಸಿದ್ದೇನೆ. ಪ್ರತಿ ದಿನ ದೇವಸ್ಥಾನಕ್ಕೆ ಬರುವ ನಿನ್ನೆ ಶ್ರದ್ಧೆ, ಸಮಯದ ಪರಿಪಾಲನೆ, ದೇವರ ಮೇಲಿನ ಭಕ್ತಿಯನ್ನು ನೋಡಿದ್ದೇನೆ. ದೇವಸ್ಥಾನದ ಅಂಗಣದಲ್ಲಿ ಬಿದ್ದಿರುವ ಕಸ, ಕಡ್ಡಿಗಳನ್ನು ಎತ್ತಿಕೊಂಡು ಹೋಗಿ ದೂರ ಎಸೆಯುವ ನಿನ್ನ ತಾಳ್ಮೆ, ಭಕ್ತರಿಗೆ ಮಾರ್ಗದರ್ಶನ ಮಾಡುವುದು, ಹಿರಿಯರು ಬಂದಾಗ ಕೈಹಿಡಿದುಕೊಂಡು ಮೆಟ್ಟಿಲು ದಾಟಿಸುವುದು ಎಲ್ಲವನ್ನೂ ನೋಡಿರುವೆ. ಇವತ್ತು ನೀನೇನು ಮಾಡಿದೆ ಅಂತಾನೂ ನೆನಪು ಮಾಡಿಕೋ.. ಆ ಬದಿಯಲ್ಲಿ ಒಂದು ಕಲ್ಲು ಎದ್ದುಬಂದಿತ್ತು.. ಅದನ್ನು ನೀನೇ ಪಿಕಾಶಿ ತಂದು ಎಬ್ಬಿಸಿ ಮತ್ತೆ ಸರಿಯಾಗಿ ಜೋಡಿಸಿದೆ ಅಲ್ವಾ?’

ಬಡ ವ್ಯಕ್ತಿ ನೆನಪಿಸಿಕೊಂಡು `ʻಓ ಹೌದು’ ಎಂದ.

ಶ್ರೀಮಂತ ಮುಂದುವರಿಸಿದ: ನಿಜ ಹೇಳಬೇಕು ಎಂದರೆ ಆ ಕಲ್ಲನ್ನು ಅಲ್ಲಿ ಕಿತ್ತಿಟ್ಟಿದ್ದು ನಾನೇ. ಅದೆಷ್ಟೋ ಮಂದಿ ಆ ಕಲ್ಲನ್ನು ಎಡವಿ ಬಿದ್ದರು. ಆದರೆ, ಸುಮ್ಮನೆ ಎದ್ದು ಹೋದರು. ಕೆಲವರು ಎಡವಿ ಬೀಳುವುದನ್ನು ನೋಡಿಯೂ ಸುಮ್ಮನಿದ್ದರು. ನೀನು ಎಡವಿ ಬೀಳಲೂ ಇಲ್ಲ, ಬಿದ್ದಿದ್ದನ್ನು ನೋಡಲೂ ಇಲ್ಲ. ಆದರೂ ಗಮನಿಸಿ ಸರಿ ಮಾಡಿದೆ.

ಅದಕ್ಕೆ ಬಡ ವ್ಯಕ್ತಿ: ಇದರಲ್ಲಿ ಏನಿದೆ ಸ್ವಾಮಿ. ನಾನೊಬ್ಬ ಕೂಲಿ ಕಾರ್ಮಿಕ. ಈ ತರದ ಕೆಲಸ ಮಾಡುತ್ತೇನೆ ಅಲ್ವಾ? ಕಂಡಿತು ಮಾಡಿದೆ. ಅದು ನನ್ನ ಕರ್ತವ್ಯ ಅನಿಸಿತು.

ಶ್ರೀಮಂತ ವ್ಯಕ್ತಿ ಚಪ್ಪಾಳೆ ತಟ್ಟುತ್ತಾ ಹೇಳಿದ: ಈ ದೇವಸ್ಥಾನದ ಆಡಳಿತಾಧಿಕಾರಿಯಾಗಲು ನೀನೇ ಅರ್ಹ ಅಂತ ನನಗೆ ಅನಿಸಿದ್ದು ಇದೇ ಕಾರಣಕ್ಕೆ. ನೀನು ಯಾರ ಮೇಲೂ ಕಂಪ್ಲೇಂಟ್ ಮಾಡಲಿಲ್ಲ. ಯಾರದ್ದೋ ಗಮನ ಸೆಳೆದು ದೊಡ್ಡ ಜನ ಆಗಲು ಪ್ರಯತ್ನಿಸಲಿಲ್ಲ. ಇದು ನಿನ್ನ ಕರ್ತವ್ಯ ಎನ್ನುವ ಹಾಗೆ ಮಾಡಿದೆ. ಇದೇ ಶ್ರದ್ಧೆಯನ್ನೇ ನಾನು `ʻಅರ್ಹತೆ’ ಎಂದು ಭಾವಿಸಿದ್ದು. ನನಗೆ ವಿದ್ಯಾವಂತರೇ ಆಗಬೇಕು ಅಂತ ಇರಲಿಲ್ಲ, ತಿಳಿದವರೇ ಆಗಬೇಕಿರಲಿಲ್ಲ. ದೇವಸ್ಥಾನಕ್ಕೆ, ಭಕ್ತರಿಗೆ ಒಳಿತನ್ನು ಯೋಚಿಸುವವರು ಬೇಕಿತ್ತು. ಉಳಿದ ಕೆಲಸಕ್ಕೆ ಜನ ಮಾಡಿಕೊಳ್ಳಬಹುದು.

ಇದನ್ನೂ ಓದಿ| Motivational story| ಹಬ್ಬದೂಟ ಬಡಿಸಲು ಬೇಕಿರುವುದು ದುಡ್ಡಲ್ಲ! ಮತ್ತೇನು?

Exit mobile version