ಕೃಷ್ಣ ಭಟ್ ಅಳದಂಗಡಿ-Motivational story
ಅದೊಂದು ಊರು. ಅಲ್ಲಿ ಸದಾಶಿವ ಎನ್ನುವ ಒಬ್ಬ ವ್ಯಕ್ತಿ ಇದ್ದ. ಅವನು ಯಾವಾಗಲೂ ನಗುನಗುತ್ತಾ ಸಂತೋಷದಿಂದಲೇ ಇರುತ್ತಿದ್ದ. ಪ್ರತಿಯೊಬ್ಬರ ಬಗ್ಗೆಯೂ ಪ್ರೀತಿಯಿಂದ ಮಾತನಾಡುತ್ತಿದ್ದ. ಇತರರನ್ನು ಪ್ರೋತ್ಸಾಹಿಸುವ ಮಾತುಗಳನ್ನು ಆಡುತ್ತಿದ್ದ. ಯಾರೇ ಅವನನ್ನು ಭೇಟಿಯಾದರೂ, ಮರಳಿ ಬರುವ ಹೊತ್ತಿಗೆ ಉಲ್ಲಸಿತರಾಗಿ ಮರಳುತ್ತಿದ್ದರು. ಮನಸ್ಸಲ್ಲಿ ಏನೋ ಉತ್ಸಾಹ.
ಇದನ್ನೆಲ್ಲ ನೋಡುತ್ತಿದ್ದ ಪಕ್ಕದ ಮನೆಯ ವಿಶ್ವನಾಥನಿಗೆ ಯಾವಾಗಲೂ ಆಶ್ಚರ್ಯ. ಎಷ್ಟು ಜನ ಬಂದರೂ ಈ ಮನುಷ್ಯ ಅಷ್ಟೇ ಆರಾಮದಿಂದ ಮಾತನಾಡುತ್ತಾನೆ, ಯಾರಿಗೂ ಬೈದಿಲ್ಲ. ಯಾರ ಜತೆಗೂ ಜಗಳ ಮಾಡಿಲ್ಲ. ಇಷ್ಟು ಶಾಂತವಾಗಿ ಇರುವುದು ಹೇಗೆ ಸಾಧ್ಯ? ಇನ್ನೊಬ್ಬರ ಮಾತುಗಳನ್ನು ಇಷ್ಟು ಸಹನೆಯಿಂದ ಕೇಳುವುದು ಹೇಗೆ ಸಾಧ್ಯ? ಯಾರ ಜತೆಗೂ ಜಗಳ ಮಾಡದಿರುವುದು ಹೇಗೆ ಸಾಧ್ಯ? ಎಂಬೆಲ್ಲ ಪ್ರಶ್ನೆಗಳು ಮೂಡಿದ್ದವು. ಹಲವು ಸಾರಿ ಕೇಳಬೇಕು ಅನಿಸಿದರೂ ಕೇಳಲು ಆಗಿರಲಿಲ್ಲ.
ಕೊನೆಗೊಂದು ದಿನ ಕೇಳಿಯೇ ಬಿಟ್ಟ. ಅಲ್ಲ ಸದಾಶಿವಣ್ಣ, ನಾನು ತುಂಬ ಜನರನ್ನು ನೋಡಿದ್ದೇನೆ. ಹೆಚ್ಚಿನವರು ಸ್ವಾರ್ಥಿಗಳೇ ಆಗಿರ್ತಾರೆ. ತಮ್ಮ ಕೆಲಸ ಆಗಬೇಕು ಎಂದರೆ ಎಷ್ಟು ಹಿತವಾಗಿ ಬೇಕಾದರೂ ಮಾತನಾಡುತ್ತಾರೆ. ಆದರೆ, ಕೆಲಸ ಆದ ಮೇಲೆ ದರ್ಪ ಮುಂದುವರಿಸುತ್ತಾರೆ. ಇನ್ನು ಕೆಲವರು ಕೃತಕವಾಗಿ ನಗುತ್ತಾರೆ. ನೀನು ಮಾತ್ರ ಎಲ್ಲರ ಜತೆಗೂ, ಎಷ್ಟೇ ಅವಸರದಲ್ಲಿದ್ದರೂ ಒಂದೇ ರೀತಿಯಲ್ಲಿ ವರ್ತನೆ ಮಾಡ್ತೀಯಲ್ಲಾ.. ಯಾರಿಗೂ ಸಿಡುಕಿದ್ದೂ ನೋಡಿಲ್ಲ. ಇದು ಹೇಗೆ ಸಾಧ್ಯ?
ಅದಕ್ಕೆ ಸದಾಶಿವ ನಗುತ್ತಾ ಹೇಳಿದ: ಇದರಲ್ಲೇನಿದೆ ವಿಶ್ವನಾಥಣ್ಣ.. ಎಲ್ಲರೂ ನನ್ನ ಹಾಗೇ ಅಂತ ಭಾವಿಸಿದರೆ ಸಾಕು ಅಷ್ಟೆ ಎಂದ.
ವಿಶ್ವನಾಥನಿಗೆ ಅರ್ಥ ಆಗಲಿಲ್ಲ.
ಸದಾಶಿವ ಮುಂದುವರಿಸಿದ: ವಿಶ್ವನಾಥಣ್ಣ.. ನೀನೀಗ ಬಂದು ನನ್ನ ಬಳಿ ಬಂದು ಒಳ್ಳೆಯ ಮಾತುಗಳನ್ನು ಆಡಿದ್ರೆ ನಂಗೆ ಖುಷಿಯಾಗಲ್ವಾ? ಅದೇ ರೀತಿ ನಾನೂ ಇನ್ನೊಬ್ಬರ ಜತೆ ಒಳ್ಳೆಯ ಮಾತುಗಳನ್ನು ಆಡ್ಬೇಕು ಅಂತ ನಾನು ಅಂದುಕೊಳ್ತೇನೆ. ನಂಗೆ ಯಾರಾದ್ರೂ ಬೈದರೆ ಬೇಜಾರಾಗಲ್ವಾ? ಹಾಗಾಗಿ ನಾನು ಇನ್ನೊಬ್ಬರಿಗೆ ಬೇಜಾರಾಗುವಂತೆ ನಡೆದುಕೊಳ್ಳಬಾರದು ಅಂದುಕೊಳ್ತೇನೆ. ನಾನು ಯಾರ ಬಳಿಗೋ ಮಾತನಾಡಲೆಂದು ಹೋದಾಗ ಅವರು ನಿರ್ಲಕ್ಷ್ಯ ಮಾಡಿದರೆ ನನಗೆ ಬೇಜಾರಾಗಲ್ವಾ? ಆ ತರ ನನ್ನ ಬಳಿ ಬರುವ ಯಾರಿಗೂ ಬೇಜಾರಾಗಬಾರದು ಅಂದುಕೊಳ್ಳುತ್ತೇನೆ. ನನ್ನ ಬಗ್ಗೆ ಯಾರಾದರೂ ಒಳ್ಳೆಯ ಮಾತು ಹೇಳಿದ್ರೆ ನಂಗೆ ಖುಷಿ ಆಗ್ತದೆ.. ಹಾಗಾಗಿ ನಾನೂ ಇನ್ನೊಬ್ಬರ ಬಗ್ಗೆ ಒಳ್ಳೆಯ ಮಾತೇ ಆಡಬೇಕು ಅಂದುಕೊಳ್ತೇನೆ.. ಯಾರೋ ಸಣ್ಣ ತಪ್ಪು ಮಾಡಿದರು ಅಂದಾಗ ಬೈಬೇಕು ಅನಿಸಲ್ಲ, ನಾನೂ ಮಾಡಿದ ತಪ್ಪುಗಳು ನೆನಪಾಗ್ತವೆ. ಇಷ್ಟೇ ವಿಷಯ ವಿಶ್ವನಾಥಣ್ಣ. ಇದರಿಂದ ನಾನು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಆದರೆ, ಪಡೆದುಕೊಳ್ಳುವಂಥದ್ದು ತುಂಬಾ ಇದೆ.
ಆದರೆ, ಇದು ತುಂಬ ಕಷ್ಟ ಅಲ್ವಾ ಸದಾಶಿವಣ್ಣ.. ಯಾಕೆಂದರೆ, ಜನ ನಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆಯಲ್ವಾ?: ವಿಶ್ವನಾಥ ಮತ್ತೆ ಕೇಳಿದ.
ಸದಾಶಿವ ಹೇಳಿದ: ಜನ ತಪ್ಪು ತಿಳ್ಕೊಂಡಿದ್ದಾರೆ ವಿಶ್ವನಾಥಣ್ಣ.. ನಮ್ಮ ಬಳಿ ಬರೋರೆಲ್ಲ ಏನೋ ಲಾಭದ ಆಸೆಯಿಂದ ಬರ್ತಾರೆ, ನಮ್ಮ ಸಮಯ ಹಾಳು ಮಾಡೋಕೆ ಬರ್ತಾರೆ, ಕಿರಿಕಿರಿ ಮಾಡಲು ಬರ್ತಾರೆ ಅಂದ್ಕೊಡಿರ್ತಾರೆ.. ನಿಜವಾಗಿ ಹಾಗೇನೂ ಇರುವುದಿಲ್ಲ. ನಾಲ್ಕು ಒಳ್ಳೆಯ ಮಾತು ಆಡ್ಬೇಕು, ಕೇಳ್ಬೇಕು, ಸುಖ ದುಃಖ ಹಂಚ್ಕೊಬೇಕು ಅನ್ನೋ ಆಸೆ ಎಲ್ಲರಿಗೂ ಇರ್ತದೆ.. ಅದಕ್ಕಾಗಿ ಬರ್ತಾರೆ. ಬಂದವರಿಗೆಲ್ಲ ನಾವು ಉಪದೇಶ ಮಾಡ್ಬೇಕು ಅಂತೇನಿಲ್ಲ. ಸುಮ್ನೆ ಕೇಳಿಸಿಕೊಂಡ್ರೆ ಸಾಕಾಗ್ತದೆ ಅಷ್ಟೆ.
ವಿಶ್ವನಾಥನಿಗೆ ಇನ್ನೊಂದು ಸಂಶಯ ಬಂತು. ʻಅಲ್ಲಾ ಸದಾಶಿವಣ್ಣ.. ಒಳ್ಳೆಯತನ ಅನ್ನೋದೂ ದೌರ್ಬಲ್ಯ ಅಂತಾರಲ್ಲ.. ಅಸಹಾಯಕತೆ ಅಂತಾರಲ್ವಾ? ಜಗಳ ಮಾಡೋಕೂ ಧೈರ್ಯ ಬೇಕು ಅಂತಾರಲ್ಲಾ…
ಸದಾಶಿವ ತುಂಬ ತಾಳ್ಮೆಯಿಂದ ಹೇಳಿದ: ಹೌದು ವಿಶ್ವನಾಥಣ್ಣ.. ಕೆಲವೊಂದು ಸಲ ನಾವು ತಗ್ಗಿ ಬಗ್ಗಿ ನಡೆಯೋದು ಅಸಹಾಯಕತೆಯಿಂದಲೇ. ಇನ್ನೊಬ್ಬರನ್ನು ಎದುರಿಸಲು ಸಾಧ್ಯವಾಗದೆ ಇರುವುದರಿಂದ. ಜಗಳ ಆಡಲೂ ನಮಗೆ ಧೈರ್ಯ ಇಲ್ಲದೆ ಇರುವುದರಿಂದ. ಆದರೆ, ನಮ್ಮಲ್ಲಿ ಎಲ್ಲ ಶಕ್ತಿ ಇದ್ದೂ ತಗ್ಗಿ ಬಗ್ಗಿ ನಡೀಯೋದಿದೆಯಲ್ಲ.. ಅದು ನಿಜವಾದ ಸಾಮರ್ಥ್ಯ ವಿಶ್ವನಾಥಣ್ಣ. ಒಬ್ಬನಿಗೆ ಬೈದು ಹೇಳಬಹುದಾದ ಪೊಸಿಷನ್, ಪವರ್ ಎಲ್ಲ ಇದ್ರೂ ಹತ್ತಿರ ಕರೆದು ಬೆನ್ನು ತಟ್ಟಿ ಏನೋ ಹೇಳ್ತೇವಲ್ಲ.. ಅದು ನಮ್ಮ ಶಕ್ತಿ. ನೀವು ಹೇಳಿದ್ರಲ್ಲ.. ಜಗಳ ಮಾಡೋಕೂ ಧೈರ್ಯ ಬೇಕು ಅಂತ.. ಅದು ಸರೀನೇ ಇರಬಹುದು. ಆದರೆ, ಜಗಳ ಮಾಡಲೇಬೇಕಾದ ಸನ್ನಿವೇಶವನ್ನೂ ನಿಭಾಯಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿ ಇಬ್ಬರೂ ಗೆಲ್ಲುವಂತೆ ನೋಡಿಕೊಳ್ಳಲು ಅಗಾಧವಾದ ಮನೋಬಲ ಬೇಕು ವಿಶ್ವನಾಥಣ್ಣ.
ವಿಶ್ವನಾಥ ಸದಾಶಿವನನ್ನು ತಬ್ಬಿಕೊಂಡು ಹೇಳಿದ… ನಿನ್ನಲ್ಲಿರುವ ಈ ಶಕ್ತಿಯಲ್ಲಿ ನನಗೊಂದು ಸ್ವಲ್ಪ ಕೊಡಬಹುದಾ ಸದಾಶಿವಣ್ಣ.
ಇದನ್ನೂ ಓದಿ| motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!
ಇದನ್ನೂ ಓದಿ| Motivational story: ಕಿಟಕಿ ಆಚೆಗೆ ಇದ್ದದ್ದು ಕತ್ತಲೆ! ಆದರೆ, ಇವರಿಗೆ ಬೆಳಕು ತುಂಬಿತ್ತು!