Site icon Vistara News

Motivational story: ಆವತ್ತು ಆ ಹೋಟೆಲಿನಲ್ಲಿ ಕೊಟ್ಟಿದ್ದು ಬರೀ ಮಸಾಲೆ ದೋಸೆ ಆಗಿರಲಿಲ್ಲ!

masala dosa

ಕೃಷ್ಣ ಭಟ್‌ ಅಳದಂಗಡಿ- Motivational story

ಆವತ್ತು ವಿಶ್ವನಾಥ ರಾಯರ ಹೋಟೆಲ್‌ಗೆ ಫೋನ್‌ ಬಂದಿತ್ತು. ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳು ಹೋಟೆಲ್‌ಗೆ  ಉಪಾಹಾರ ಸೇವಿಸಲು ಬರುತ್ತಾರೆ ಅಂತ. ವಿಶ್ವನಾಥ ರಾಯರಿಗೆ ಅಳುಕು. ಹೊಸ ಜಿಲ್ಲಾಧಿಕಾರಿಯಂತೆ. ಹೆಸರೇನೋ ಮೇಘನಾ ಗೋಪಾಲ್‌ ಅಂತ ಇತ್ತು. ಇಲ್ಲೇ ಫಸ್ಟ್‌ ಅಪಾಯಿಂಟ್‌ಮೆಂಟ್‌ ಅಂತೆ. ಡಿಸಿ ಆದ ಮೊದಲ ನೇಮಕದಲ್ಲಿ ಕೆಲವರು ತುಂಬ ಆ್ಯಕ್ಟಿವ್‌ ಆಗಿರ್ತಾರೆ. ವಿಪರೀತ ಉತ್ಸಾಹದಲ್ಲಿ ಎಲ್ಲದರಲ್ಲೂ ತಪ್ಪು ಕಾಣುತ್ತದೆ. ಇನ್ನು ನಮ್ಮ ಹೋಟೆಲ್‌ಗೆ ಯಾಕೆ ಬರ್ತಾರೋ, ಏನೇನು ತಪ್ಪು ಕಂಡುಹಿಡೀತಾರೋ, ಸಾಲದ್ದಕ್ಕೆ ಕಟ್ಟಡ ನಿಗದಿತ ನಕ್ಷೆಗಿಂತ ಎರಡು ಅಡಿ ಹೊರಗಿದೆ. ಆಗಾಗ ಕೆಲವು ಅಧಿಕಾರಿಗಳು ಇದನ್ನು ನೆಪ ಮಾಡಿಕೊಂಡು ದುಡ್ಡು ಕಿತ್ತುಕೊಂಡು ಹೋಗುತ್ತಾರೆ. ಹೋಟೆಲ್‌ನಲ್ಲಿ ಮಕ್ಕಳು ಕೆಲಸಕ್ಕೆ ಬೇರೆ ಇದ್ದಾರೆ. ಅವರೇನೋ ಜೀವನಕ್ಕೆ ದಾರಿ ಬೇಕು ಅಂತ ಬಂದಿದ್ದಾರೆ. ಆದರೆ, ಅಧಿಕಾರಿಗಳು ಬಾಲ ಕಾರ್ಮಿಕರು ಅಂತ ಕೇಸು ಹಾಕ್ತಾರೇನೋ.. ಅಂತ ನಾನಾ ಕೋನಗಳಲ್ಲಿ ಯೋಚಿಸಿ ಸ್ವಲ್ಪ ಕಂಗಾಲಾದರು.

ಆದರೂ ಬಂದಿದ್ದನ್ನು ಎದುರಿಸೋದು, ನಾವೇನೂ ಯಾರ ತಲೆಯೂ ಒಡೆದಿಲ್ಲ. ಸಿಟಿಯಲ್ಲಿ ಒಳ್ಳೆ ಹೋಟೆಲ್‌ ನಮ್ಮದೆ. ದರ ಏನೂ ಜಾಸ್ತಿ ಇಟ್ಟಿಲ್ಲ.. ಹಾಗಾಗಿ ಹೆದರೋದ್ಯಾಕೆ ಎಂದು ಸಮಾಧಾನ ಮಾಡಿಕೊಂಡರು ವಿಶ್ವನಾಥ ರಾಯರು. ಸಿಬ್ಬಂದಿಗೆಲ್ಲ ಹೇಳಿ ಹೋಟೆಲ್‌ಗೆ ಒಂದಿಷ್ಟು ಅಲಂಕಾರ ಮಾಡಿಸಿದರು. ಏನೇ ಆದರೂ ಒಮ್ಮೆ ಬಂದು ಹೋಗ್ಲಿ, ಆಮೇಲೆ ಕಿರಿಕಿರಿ ಇರುವುದಿಲ್ಲ ಎಂದುಕೊಂಡು ನಿರಾಳರಾದರು.

ಸಂಜೆ ಆಯಿತು. ಜಿಲ್ಲಾಧಿಕಾರಿಗಳ ಕಾರು ಬಂತು. ಅವರ ಜತೆಗೆ ತುಂಬಾ ಜನ ಬರಬಹುದು ಎಂದುಕೊಂಡಿದ್ದರು ವಿಶ್ವನಾಥ ರಾಯರು. ಆದರೆ, ಬಂದಿದ್ದು ಅವರೊಬ್ಬರೇ. ಸೀರೆಯುಟ್ಟುಕೊಂಡಿದ್ದ, ಮುಖದ ಮೇಲೆ ಆತ್ಮವಿಶ್ವಾಸ ತುಂಬಿಕೊಂಡಿದ್ದ ಹೆಣ್ಮಗಳನ್ನು ಬೊಕ್ಕೆ ಕೊಟ್ಟು ಸ್ವಾಗತಿಸಿದರು ವಿಶ್ವನಾಥ ರಾಯರು. ಆಕೆಯನ್ನು ಸ್ಪೆಷಲ್‌ ರೂಮಿಗೆ ಕರೆದುಕೊಂಡು ಹೋಗಲು ಸಿದ್ಧರಾದರು ರಾಯರು. ಆದರೆ, ಜಿಲ್ಲಾಧಿಕಾರಿ ಮಾತ್ರ ʻಬೇಡ, ನಾನು ಆ ಟೇಬಲ್‌ನಲ್ಲಿ ಕೂರ್ತೇನೆʼ ಎಂದು ಹಳೆಯದೊಂದು ಟೇಬಲ್‌ ತೋರಿಸಿದರು. ಆಕೆಯನ್ನು ಅಲ್ಲೇ ಕರೆದೊಯ್ದರು ರಾಯರು.

ಅಲ್ಲಿ ಹೋಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಮೇಘನಾ ಗೋಪಾಲ್‌ ಒಮ್ಮಿಂದೊಮ್ಮೆಗೇ ವಿಶ್ವನಾಥ ರಾಯರ ಕಾಲಿಗೆ ಬಿದ್ದರು. ರಾಯರಿಗೆ ಏನು ಮಾಡಬೇಕು ಎಂದು ತೋಚಲಿಲ್ಲ. ಅಯ್ಯೋ ಯಾಕೆ ಮೇಡಂ ಅಂತೆಲ್ಲ ಹೇಳುತ್ತಾ ಮಾರು ದೂರ ನಿಂತರು.

ಅಷ್ಟು ಹೊತ್ತಿಗೆ ಮೇಘನಾ ಗೋಪಾಲ್‌ ʻಶಂಕ್ರಣ್ಣ ಅವರು ಇಲ್ವಾʼ ಎಂದು ಕೇಳಿದರು. ʻನಿಮಗೆ ಶಂಕರಣ್ಣ ಗೊತ್ತಾ.. ಇಲ್ಲೇ ಹೊರಗಿದ್ದಾರೆ..ʼ ಎಂದು ಹುಡುಗರು ಶಂಕರಣ್ಣನನ್ನು ಕರೆದುಕೊಂಡು ಬಂದರು. ಅವರ ಕಾಲಿಗೂ ನಮಸ್ಕರಿಸಿದರು ಮೇಘನಾ ಗೋಪಾಲ್‌.

ʻನೀವು ಈ ಜಿಲ್ಲೆಯ ಜಿಲ್ಲಾಧಿಕಾರಿ ಮೇಡಂ.. ಹೀಗೆಲ್ಲ ನಮಗ್ಯಾಕಮ್ಮಾ ಕಾಲಿಗೆ ಬೀಳ್ತೀರಾ” ಎಂದು ಇಬ್ಬರೂ ಏಕಕಾಲದಲ್ಲಿ ಹೇಳಿದರು.

ʻʻಇಲ್ಲ ಸರ್‌.. ನಾನು ಈಗ ಜಿಲ್ಲಾಧಿಕಾರಿ ಆಗಿರಬಹುದು. ಆದರೆ, ನಾನು ಈ ಮಟ್ಟಕ್ಕೆ ಏರಲು ನೀವು ಕಾರಣ.. ಹಾಗಾಗಿ ನಿಮ್ಮ ಆಶೀರ್ವಾದ ಕೇಳಿದ್ದೇನೆ ಅಷ್ಟೆ..ʼʼ ಎಂದರು ಮೇಘನಾ ಗೋಪಾಲ್‌.

ವಿಶ್ವನಾಥ ರಾಯರು ಮತ್ತು ಸಪ್ಲೈಯರ್‌ ಶಂಕ್ರಣ್ಣ ಮುಖಮುಖ ನೋಡಿಕೊಂಡರು.

ಆಗ ಜಿಲ್ಲಾಧಿಕಾರಿ ಮೇಘನಾ ಗೋಪಾಲ್‌ ಮುಂದುವರಿಸುತ್ತಾ ಹೇಳಿದರು: ಸರ್‌, ನಾನು ಹದಿಮೂರು ವರ್ಷದ ಹಿಂದೆ ಇದೇ ಹೋಟೆಲ್‌ಗೆ ಬಂದಿದ್ದೆ ಸರ್‌. ನಾನಾಗ ಏಳನೇ ತರಗತಿಯಲ್ಲಿದ್ದೆ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ್ರೆ ಸಿಟಿಗೆ ಕರೆದುಕೊಂಡು ಹೋಗಿ ದೊಡ್ಡ ಹೋಟೆಲ್‌ನಲ್ಲಿ ಮಸಾಲೆ ದೋಸೆ ಕೊಡಿಸ್ತೇನೆ ಅಂತ ಮಾತು ಕೊಟಿದ್ದರು. ಹಾಗೇ ನಾನು ಮಾರ್ಕ್ಸ್‌ ಪಡೆದಿದ್ದೆ. ನನ್ನನ್ನು ಅಪ್ಪ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ನಾವು ಕೂತಿದ್ದು ಇದೇ ಟೇಬಲ್‌ ಸರ್‌. ಆದರೆ, ಅದೇ ಟೈಮಲ್ಲಿ ಇಲ್ಲಿಗೆ ದೋಸೆಗೆ ಐದು ರೂಪಾಯಿ ಜಾಸ್ತಿ ಮಾಡಿದ್ರಿ. ಮಸಾಲೆ ದೋಸೆ ತಿಂದ್ರೆ ಮನೆಗೆ ಹೊಗುವುದಕ್ಕೆ ಬಸ್‌ಗೆ ದುಡ್ಡು ಸಾಲದೆ ನಡೆದುಕೊಂಡು ಹೋಗಬೇಕಿತ್ತು. ಹಾಗಾಗಿ, ನಾನೇ ಅಪ್ಪನಿಗೆ ಹೇಳಿದೆ.. ಅಪ್ಪಾ ಇನ್ನೊಮ್ಮೆ ಬರೋಣ ಅಂತ. ಆಗ ಒಬ್ರು ಸಪ್ಲೈಯರ್‌ ಏನಾಯ್ತು ಅಂತ ಕೇಳಿದ್ರು.. ಅಪ್ಪ ವಿಷಯ ತಿಳಿಸಿದರು. ಆಗ ಸಪ್ಲೈಯರ್‌ ನಿಮ್ಮ ಬಳಿಗೆ ಬಂದು ವಿಷಯ ತಿಳಿಸಿದರು. ನಂತರ ನಮ್ಮನ್ನು ಕುಳಿತುಕೊಳ್ಳುವಂತೆ ಹೇಳಿ, ನನಗೂ ನಮ್ಮಪ್ಪಂಗೂ ಮಸಾಲೆ ದೋಸೆ ಕೊಡಿಸಿದರು. ಸಾಲದ್ದಕ್ಕೆ ಮನೆಗೆ ಹೋಗುವಾಗ ಒಂದು ಸ್ವೀಟ್‌ ಪೊಟ್ಟಣವನ್ನೂ ಕೊಟ್ರು. ಆವತ್ತಿನ ದಿನವನ್ನು ನಾನು ಯಾವತ್ತೂ ಮರೆಯಲ್ಲ ಸರ್‌. ನಿಮ್ಮಂಥವರ ಆಶೀರ್ವಾದ ಬೇಕು ಅಂತ ಮತ್ತೆ ಬಂದೆ ಸರ್‌.

ಮೇಘನಾ ಗೋಪಾಲ್‌ ಅಷ್ಟು ಹೇಳಿದರೂ ವಿಶ್ವನಾಥ ರಾಯರಿಗೆ ಯಾವುದೂ ನೆನಪಿಗೆ ಬರಲಿಲ್ಲ. ಶಂಕ್ರಣ್ಣನಿಗೆ ನಿನಗೆ ನೆನಪಗ್ತಿದೆಯೇನೋ ಎಂದು ಕೇಳಿದರು. ಇಲ್ಲಣ್ಣ ಎಂದರು ಶಂಕ್ರಣ್ಣ.

ಆಗ ಮೇಘನಾ ಗೋಪಾಲ್‌ ಮತ್ತೆ ಹೇಳಿದರು: ನಿಮಗೆ ಇದೆಲ್ಲ ಹೆಂಗೆ ನೆನಪಿರ್ತದೆ ಸರ್..‌ ಅದೆಷ್ಟು ಜನರಿಗೆ ಈ ತರ ಸಹಾಯ ಮಾಡಿದ್ದೀರೋ ಏನೋ.. ನೆನಪು ಇಟ್ಕೊಬೇಕಾಗಿರೋದು ನಾವು.. ಆವತ್ತು ನಿಮ್ಮ ಒಳ್ಳೆತನ, ಬಡವರಲ್ಲಿ ಧೈರ್ಯ ತುಂಬೋ ರೀತಿ ನೋಡಿ ನಾನೂ ಮುಂದೆ ಇದೇ ತರ ಜನರಿಗೆ ಸಹಾಯ ಮಾಡಬೇಕು ಅಂತ ತೀರ್ಮಾನ ಮಾಡಿದೆ. ನಾನು ಐಎಎಸ್‌ ಮಾಡುವುದಕ್ಕೆ ನೀವೇ ಸ್ಫೂರ್ತಿಯಾದಿರಿ.

ಮಸಾಲೆ ದೋಸೆ ತಿಂದು ಮೇಘನಾ ಗೋಪಾಲ್‌ ಹೊರಟಾಗ ಹೋಟೆಲ್‌ನಲ್ಲಿದ್ದ ಅಷ್ಟೂ ಮಂದಿ ಎದ್ದು ನಿಂತು ಚಪ್ಪಾಳೆ ಹೊಡೆದರು. ಸಿಬ್ಬಂದಿಗಳೆಲ್ಲ ಸಾಲುಗಟ್ಟಿ ನಿಂತರು. ಅವರು ಚಪ್ಪಾಳೆ ತಟ್ಟಿದ್ದು ಮೇಘನಾ ಗೋಪಾಲ್‌ ಅವರಿಗೋ? ವಿಶ್ವನಾಥ ರಾಯರಿಗೋ, ಶಂಕ್ರಣ್ಣಂಗೋ ಅಂತ ಅಲ್ಲೇ ಇದ್ದ ಇನ್ನೊಬ್ಬ ಹುಡುಗಿ ತಲೆ ಕೆಡಿಸಿಕೊಂಡಳು. ಕೊನೆಗೆ ತಾನೂ ಹೋಗಿ ವಿಶ್ವನಾಥ ರಾಯರ ಕಾಲಿಗೆ ಬಿದ್ದು ʻಆಶೀರ್ವಾದ ಮಾಡಿ ಅಂಕಲ್‌ʼ ಎಂದಳು. ರಾಯರು ಕಣ್ಣುಜ್ಜಿಕೊಂಡರು. ಶಂಕ್ರಣ್ಣ ಅಲ್ಲೇ ಗೋಡೆಗೆ ಒರಗಿ ನಿಂತಿದ್ದರು.

ಇದನ್ನೂ ಓದಿ| Motivational story: ಒಳ್ಳೆಯತನ ದೌರ್ಬಲ್ಯ ಅಲ್ಲ, ಅದು ತಾಕತ್ತು ಅಂತ ಸದಾಶಿವ..
ಇದನ್ನೂ ಓದಿ| motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!

Exit mobile version