ಕೃಷ್ಣ ಭಟ್ ಅಳದಂಗಡಿ | Motivational story
ಅದೊಂದು ಬಹು ಜನಪ್ರಿಯ ಮಲ್ಟಿನ್ಯಾಷನಲ್ ಕಂಪನಿ. ಮಾರ್ಕೆಟ್ ಲೀಡರ್ ಆಗಿದ್ದರಿಂದ ಅದರಲ್ಲಿ ಕೆಲಸ ಮಾಡಬೇಕು ಎಂಬ ಹಂಬಲ ಸಹಜವಾಗಿಯೇ ತುಂಬಾ ಜನರಿಗೆ ಇತ್ತು. ಅದೊಂದು ಸಾರಿ ತನ್ನದೊಂದು ಹುದ್ದೆ ಭರ್ತಿಗೆ ಅದು ಜಾಹೀರಾತು ನೀಡಿತು. ಒಂದು ಹುದ್ದೆಗೆ ಹಲವಾರು ಜನ ಅರ್ಜಿ ಸಲ್ಲಿಸಿದ್ದರು.
ಆವತ್ತು ಸಂದರ್ಶನದ ದಿನ. ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಅವರೆಲ್ಲರನ್ನೂ ಹಾಲ್ ನಲ್ಲಿ ಕೂರಿಸಲಾಗಿತ್ತು. ಸಂದರ್ಶನ ಮಾಡುವವರು ಕ್ಯಾಬಿನ್ ನಲ್ಲಿ ಕೂತಿದ್ದರು.
ಕ್ಯಾಬಿನ್ ನಲ್ಲಿ ಕುಳಿತ ಸಂದರ್ಶಕರು ಕೇವಲ ಒಳಗೆ ಬಂದ ಅಭ್ಯರ್ಥಿಗಳನ್ನು ಮಾತ್ರವಲ್ಲ, ಹೊರಗೆ ಹಾಲ್ ನಲ್ಲಿ ಕುಳಿತ ಆಕಾಂಕ್ಷಿಗಳನ್ನೂ ಮಾನಿಟರ್ ಮಾಡುವಂತೆ ಸಿಸಿ ಕ್ಯಾಮೆರಾಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಸಂದರ್ಶಕರು ಗಮನಿಸುತ್ತಿದ್ದರು. ಹೆಚ್ಚಿನವರು ತುಂಬ ಆತಂಕದಲ್ಲಿದ್ದಂತೆ ಕಂಡಿತು. ಕೆಲವರು ಆಗಾಗ ಮುಖ ಒರೆಸಿಕೊಳ್ಳುತ್ತಿದ್ದರೆ, ಕೆಲವರು ಗಡಿಯಾರ ನೋಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಸಂದರ್ಶನ ಮುಗಿಸಿ ಬಂದವರಲ್ಲಿ ಏನೇನು ಕೇಳ್ತಾರೆ ಅಂತೆಲ್ಲ ವಿಚಾರಿಸ್ತಾ ಇದ್ರು. ಕೆಲವರು ಮತ್ತೆ ಮತ್ತೆ ಪುಸ್ತಕ ತೆರೆಯುತ್ತಿದ್ದರು.
ಆದರೆ ಅವರ ನಡುವೆ ಒಬ್ಬ ಮಾತ್ರ ಯಾವುದೇ ಗೊಂದಲವಿಲ್ಲದಂತೆ ನೇರವಾಗಿ, ತಾಳ್ಮೆಯಿಂದ ಕುಳಿತಿದ್ದ.
ಸ್ವಲ್ಪ ಹೊತ್ತಾದ ಮೇಲೆ ಅವನ ಪಾಳಿ ಬಂತು. ಒಳಗೆ ಹೋಗಿ ಸಂದರ್ಶಕರ ಮುಂದೆ ಕುಳಿತ.
ಸಂದರ್ಶಕರು ಕೇಳಿದರು: ಇಲ್ಲಿನ ಉದ್ಯೋಗ ಮತ್ತು ಅದರ ಜವಾಬ್ದಾರಿ ಬಗ್ಗೆ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ.
ಅಭ್ಯರ್ಥಿ ಹೇಳಿದ: ಹೌದು ಸರ್, ನಾನು ಆ್ಯಪಲ್ ಇಂಟಗ್ರೇಟೆಡ್ ಕಂಪನಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದೇನೆ. ಇಲ್ಲಿ ನಿಭಾಯಿಸಬೇಕಾದ ಜವಾವ್ದಾರಿ ತಿಳಿದಿದ್ದೇನೆ.
ಮುಂದೆ ಹಲವು ಪ್ರಶ್ನಾವಳಿಗಳು ನಡೆದವು. ಕೊನೆಗೆ ವೇತನದ ವಿಚಾರಕ್ಕೆ ಬಂತು.
ಸಂದರ್ಶಕರು: ಈ ಹುದ್ದೆಗೆ ವರ್ಷಕ್ಕೆ 6 ಲಕ್ಷ ರೂ. ಪ್ಯಾಕೇಜ್ ಅಂತ ನಾವು ಜಾಹೀರಾತಿನಲ್ಲಿ ತಿಳಿಸಿದ್ದೆವು. ಇದಕ್ಕೆ ನಿಮ್ಮ ಒಪ್ಪಿಗೆಯೇ?
ಅಭ್ಯರ್ಥಿ: ಇಲ್ಲ ಸರ್
ಸಂದರ್ಶಕರು: ಏನು? ಒಪ್ಪಿಗೆ ಇಲ್ವೇ? ಮತ್ಯಾಕೆ ಸಂದರ್ಶನಕ್ಕೆ ಬಂದಿರಿ!
ಅಭ್ಯರ್ಥಿ: ನನ್ನ ಮುಖ್ಯ ಉದ್ದೇಶ ಮಾರ್ಕೆಟ್ ನಲ್ಲಿ ನನ್ನ ಮೌಲ್ಯ ಎಷ್ಟು ಎಂದು ಗುರುತಿಸಿಕೊಳ್ಳುವುದು. ನಿಮ್ಮ ಕಂಪನಿ ನನ್ನ ಸಾಮರ್ಥ್ಯವನ್ನು ಗಮನಿಸಿ ವೇತನ ಕೊಡಬೇಕು ಎಂದು ಭಾವಿಸುತ್ತೇನೆ. ನಾನು ಈ ಕೆಲಸಕ್ಕೆ ಆಗಬಹುದು ಎಂದು ನೀವು ಭಾವಿಸುವಿರಾದರೆ ನಾನು ಕನಿಷ್ಠ 8 ಲಕ್ಷ ರೂ.ಗಳ ಪ್ಯಾಕೇಜ್ ನಿರೀಕ್ಷೆ ಮಾಡ್ತೇನೆ.
ಸಂದರ್ಶಕರು ಹೇಳಿದರು: ನೀವು ಎರಡು ಲಕ್ಷ ರೂ. ಹೆಚ್ಚು ಕೇಳುತ್ತಿದ್ದೀರಿ. ಇದು ತುಂಬ ದೊಡ್ಡ ಮೊತ್ತ.
ಅಭ್ಯರ್ಥಿ: ಸರ್ ನೀವು ಒಬ್ಬ ಎಕ್ಸಿಕ್ಯುಟಿವ್ ಗೆ ಇಷ್ಟು ಎಂದು ತೀರ್ಮಾನ ಮಾಡಿದ್ದೀರಿ. ನಾನು ನನ್ನೆಲ್ಲ ಪ್ಯಾಶನ್, ಸಾಮರ್ಥ್ಯ, ಇಚ್ಛಾಶಕ್ತಿಯನ್ನು ಬಳಸಿ ಕೆಲಸ ಮಾಡುತ್ತೇನೆ. ಇದರಿಂದ ನನ್ನ ಸಂಸ್ಥೆಗೆ ಹೆಚ್ಚಿನ ಲಾಭ ಆಗಲಿದೆ. ಆಗ ವರ್ಷಕ್ಕೆ ಎರಡು ಲಕ್ಷ ರೂ. ಹೆಚ್ಚುವರಿ ಕೊಡುವುದು ಹೊರೆ ಆಗಲಿಕ್ಕಿಲ್ಲ ಎನ್ನುವುದು ನನ್ನ ನಂಬಿಕೆ.
ಈ ಮಾತು ಕೇಳಿ ಸಂದರ್ಶಕರು ಮತ್ತು ಮ್ಯಾನೇಜ್ಮೆಂಟಿಗೆ ಖುಷಿ ಆಯಿತು. ಯಾರೂ ನಿಮ್ಮಷ್ಟು ಆತ್ಮವಿಶ್ವಾಸದಿಂದ ಮಾತನಾಡಿಲ್ಲ. ಉದ್ಯೋಗದ ಬಗ್ಗೆ ವಿಷನ್ ಇಟ್ಕೊಂಡು ಬಂದು ಮಾತನಾಡಿಲ್ಲ… ಸೋ ಯು ಆರ್ ಸೆಲೆಕ್ಟೆಡ್ ಅಂತ ಹೇಳಿದರು.
ಇದನ್ನೂ ಓದಿ| Motivational story | ಅರ್ಹತೆ ಎಂದರೆ ಶಿಕ್ಷಣ, ಮ್ಯಾನೇಜ್ಮೆಂಟ್ ಅಷ್ಟೆ ಅಲ್ಲ.. ಬೇರೇನೋ ಇದೆ!