ಕೃಷ್ಣ ಭಟ್ ಅಳದಂಗಡಿ- motivational story
ಒಬ್ಬ ಯುವಕನಿಗೆ ಬದುಕೇ ಬೇಸರವಾಗಿತ್ತು. ಯಾವುದರಲ್ಲೂ ಆಸಕ್ತಿ ಇಲ್ಲ. ಒಂಥರಾ ಖಿನ್ನತೆ. ಮನೆಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ. ಸ್ನೇಹಿತರ ಜತೆಗೆ ಬೆರೆಯುವುದು ಕೂಡಾ ಬೇಡ ಅನಿಸುತ್ತಿತ್ತು. ಒಂದು ದಿನ ಆ ಊರಿಗೆ ಒಬ್ಬ ಗುರುಗಳು ಬಂದಿದ್ದಾರೆ ಎನ್ನುವ ಸುದ್ದಿ ಅವನಿಗೆ ಗೊತ್ತಾಯಿತು. ತನ್ನ ಸಮಸ್ಯೆಗೆ ಅವರ ಬಳಿ ಏನಾದರೂ ಪರಿಹಾರ ಇರಬಹುದಾ ಎಂದು ಯೋಚಿಸಿದ.
ಯುವಕ ಗುರುಗಳ ಬಳಿಗೆ ಹೋಗಿ, ʻʻಜೀವನದಲ್ಲಿ ನನಗೆ ಹಲವಾರು ಸಮಸ್ಯೆಗಳಿವೆ. ಹಾಗಾಗಿ ಸದಾ ಬೇಸರದಲ್ಲಿ ಕಾಲ ಕಳೆಯುತ್ತಿದ್ದೇನೆ. ನಾನು ಎಲ್ಲರ ಹಾಗೆ ಸಂತೋಷವಾಗಿರೋದು ಹೇಗೆ? ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿʼʼ ಎಂದು ಕೇಳಿದ.
ಗುರುಗಳು ಯುವಕ ಹೇಳಿದ್ದೆಲ್ಲವನ್ನೂ ಗಮನವಿಟ್ಟು ಕೇಳಿದರು. ಆದರೆ, ಏನೂ ಉತ್ತರ ನೀಡದೆ ಎದ್ದು ಒಳಗೆ ನಡೆದರು. ಯುವಕನಿಗೆ ಗೊಂದಲವಾಯಿತು. ʻʻನಾನೇನೋ ಇವರಾದರೂ ಪರಿಹಾರ ಹೇಳುತ್ತಾರೆ ಎಂದು ಇಲ್ಲಿಗೆ ಬಂದರೆ ಏನೂ ಹೇಳದೆ ಒಳಗೆ ಹೋಗಿಬಿಟ್ಟರಲ್ಲʼʼ ಅಂತ ಮನಸ್ಸಿನೊಳಗೇ ಹೇಳಿಕೊಂಡ. ಅಷ್ಟು ಹೊತ್ತಿಗೆ ಗುರುಗಳು ಹೊರಗೆ ಬಂದರು. ಅವರ ಒಂದು ಕೈಯಲ್ಲಿ ಒಂದು ಲೋಟ ನೀರು ಮತ್ತು ಒಂದು ಉಪ್ಪಿನ ಡಬ್ಬಿ ಇತ್ತು.
ʻʻಹುಡುಗಾ.. ಈ ಡಬ್ಬಿಯಿಂದ ಒಂದು ಮುಷ್ಟಿ ಉಪ್ಪು ತೆಗೆದು ಲೋಟದಲ್ಲಿರುವ ನೀರಿಗೆ ಹಾಕುʼʼ ಎಂದರು. ಯುವಕ ಹಾಗೇ ಮಾಡಿದ… ಉಪ್ಪು ಹಾಗೇ ನೀರಲ್ಲಿ ಕರಗಿತು. ಆ ಗುರುಗಳು ʻಅದನ್ನು ಕುಡಿʼ ಅಂದ್ರು. ಯವಕನಿಗೆ ಏನಪ್ಪಾ ಇದು ಅನಿಸಿತು.. ಆದರೆ, ಅಡ್ಡ ಮಾತು ಹೇಳಲಾಗದೆ ಒಂದು ಸಿಪ್ ಕುಡಿದ. ಅದಕ್ಕಿಂತ ಜಾಸ್ತಿ ಕುಡಿಯಲು ಆಗಲೇ ಇಲ್ಲ.
ಮುಖ ಸೊಟ್ಟಗೆ ಮಾಡಿದ ಯುವಕನಲ್ಲಿ ಗುರುಗಳು ಕೇಳಿದರು: ಹೇಗಿತ್ತಪ್ಪಾ ನೀರು?
ಹುಡುಗ ಹೇಳಿದ: ಕುಡಿಯಲು ಸಾಧ್ಯವೇ ಇಲ್ಲ ಗುರುಗಳೇ.. ಅಷ್ಟು ಉಪ್ಪಾಗಿದೆ.
ಗುರುಗಳು ನಕ್ಕು ಹೇಳಿದರು: ಆಯ್ತು ಬಿಡು.. ಈಗ ಒಂದು ಮುಷ್ಟಿ ಉಪ್ಪು ಹಿಡಿದುಕೊಂಡು ನನ್ನ ಜತೆಗೆ ಬಾ……
ಗುರುಗಳು ಯುವಕನನ್ನು ಒಂದು ಕೊಳದ ಬಳಿಗೆ ಕರೆದುಕೊಂಡು ಹೋದರು. ಕೈಯಲ್ಲಿರುವ ಉಪ್ಪನ್ನು ಕೊಳಕ್ಕೆ ಹಾಕು ಎಂದರು. ಹುಡುಗ ಹಾಕಿದ. ಈಗ ಒಂದು ಬೊಗಸೆ ನೀರು ಎತ್ತಿ ಕುಡಿ ಅಂದರು. ಯುವಕ ಕುಡಿದ.
ಗುರುಗಳು ʻಹೇಗಿದೆಯಪ್ಪಾ ನೀರುʼ ಎಂದು ಕೇಳಿದರು.
ಆಗ ಹುಡುಗ: ಚೆನ್ನಾಗಿದೆ ಗುರುಗಳೇ..
ಗುರುಗಳು ಕೇಳಿದರು: ಉಪ್ಪುಪ್ಪಾಗಿ ಏನಾದ್ರೂ ಇತ್ತಾ?
ಇಲ್ಲ ಗುರುಗಳೇ.. ಚೆನ್ನಾಗೇ ಇತ್ತು: ಎಂದ ಯುವಕ.
ಗುರುಗಳು ಕೊಳದ ಪಕ್ಕದಲ್ಲಿ ಯುವಕನನ್ನು ತನ್ನ ಜತೆ ಕೂರಿಸಿಕೊಂಡರು. ಅವನ ಕೈ ಹಿಡಿದುಕೊಂಡು ಹೇಳಿದರು: ಹುಡುಗಾ.. ಬದುಕಿನಲ್ಲಿ ನೋವು ಅನ್ನುವುದು ಉಪ್ಪಿದ್ದ ಹಾಗೆ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಉಪ್ಪಿನ ಪ್ರಮಾಣವೂ ಒಂದೇ ಇರುತ್ತದೆ. ಆದರೆ, ನಾವು ಅದನ್ನು ಯಾವುದಕ್ಕೆ ಹಾಕುತ್ತೇವೆ ಅನ್ನುವುದರ ಮೇಲೆ ಅದರ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ.
ಉಪ್ಪು ಇದೆ ಅಂತ ಅದನ್ನಷ್ಟೇ ತಿನ್ನುತ್ತಾ ಕಹಿಯೇ ಆಗುತ್ತದೆ. ಸ್ವಲ್ಪ ಉಪ್ಪನ್ನು ಸಾರಿಗೆ ಹಾಕು, ಸ್ವಲ್ಪ ಸಾಂಬಾರಿಗೆ, ಸ್ವಲ್ಪ ಮಜ್ಜಿಗೆಗೆ, ಇನ್ನು ಸ್ವಲ್ಪ ಚಟ್ನಿಗೆ ಹಾಕು. ಎಲ್ಲವೂ ಎಷ್ಟೊಂದು ರುಚಿ ಅನಿಸ್ತದೆ ನೀನೇ ನೋಡು.
ಅಂದ್ರೆ ನೀನು ನೋವು, ಬೇಸರ ಅಂತ ಮೂಲೆಯಲ್ಲಿ ಕೂತರೆ ಅಲ್ಲೇ ನರಳುತ್ತಾ ಇರ್ತೀಯಾ…. ಹೊರಗಡೆ ವಿಶಾಲವಾದ ಜಗತ್ತಿದೆ.. ಈ ಕೊಳದ ಹಾಗೆ.. ಅದರ ಜತೆಗೆ ಬೆರೆತು ನೋಡು.. ನೋವು ಕೂಡಾ ಖುಷಿಯಾಗಿ ಬದಲಾಗುತ್ತದೆ.
ಗುರುಗಳ ಕಾಲಿಗೆ ನಮಸ್ಕರಿಸಿ ಹೊರಟ ಯುವಕನಿಗೆ ನೆನಪಾಯಿತು.. ಓ ಇವತ್ತು ತಂಗಿಯ ಬರ್ತ್ ಡೇ ಅಲ್ವಾ?
ಇದನ್ನೂ ಓದಿ | Motivational story: ಮೂರ್ಖನಾಗಿದ್ದು ಯಾರು? ಅವನಾ? ಇವನಾ?
ಇದನ್ನೂ ಓದಿ| Motivational story: ಆವತ್ತು ಆ ಹೋಟೆಲಿನಲ್ಲಿ ಕೊಟ್ಟಿದ್ದು ಬರೀ ಮಸಾಲೆ ದೋಸೆ ಆಗಿರಲಿಲ್ಲ!