ಕೃಷ್ಣ ಭಟ್ ಅಳದಂಗಡಿ-Motivational story
ಅದೊಂದು ಕಾರ್ಯಕ್ರಮ. ವಯಸ್ಸಾದ ವ್ಯಕ್ತಿಯೊಬ್ಬರು ಎದುರು ಸಾಲಿನಲ್ಲಿ ಕುಳಿತಿದ್ದರು. ಪಕ್ಕದಲ್ಲಿ ಬಂದು ಕುಳಿತ ಯುವಕ ʻʻನನ್ನ ನೆನಪಿದೆಯಾ ಸರ್ʼʼ ಅಂತ ಕೇಳಿದ. ಹಿರಿಯ ವ್ಯಕ್ತಿ ಮುಖ ನೋಡಿ ʻʻಇಲ್ವಲ್ಲ” ಅಂದರು. ʻನಾನು ನಿಮ್ಮ ಸ್ಟೂಡೆಂಟ್ ಸರ್ʼ ಅಂತ ಹೇಳಿಕೊಂಡ. ʻಈಗ ಏನ್ಮಾಡ್ತಾ ಇದ್ದೀʼ ಅಂತ ಕೇಳಿದರು. ʻನಾನು ಶಿಕ್ಷಕನಾಗಿದ್ದೇನೆʼ ಅಂದಾಗ ಹಿರಿಯರು ಖುಷಿಯಿಂದ ʻಓ… ನನ್ನ ಹಾಗೇʼ ಅಂದರು.
ಹೌದು ಸರ್. ನಿಜ ಅಂದ್ರೆ ನಾನು ಶಿಕ್ಷಕನಾಗಲು ನೀವೇ ಸ್ಫೂರ್ತಿ ಅಂತ ಯುವಕ ಹೇಳಿದ. ಹಿರಿಯರು ಮತ್ತಷ್ಟು ಖುಷಿಯಾದರು. ನಾನೇನಪ್ಪ ಮಾಡಿದೆ ಅಂತದ್ದು ಅಂತ ನಗುತ್ತಾ ಕೇಳಿದರು.
ಯುವಕ ಒಂದು ಕಥೆ ಹೇಳಿದ: ಶಾಲೆಯಲ್ಲಿದ್ದಾಗ ಅದೊಂದು ಸಾರಿ ಹುಡುಗನೊಬ್ಬ ವಾಚ್ ಕಟ್ಟಿಕೊಂಡು ಬಂದಿದ್ದ. ನಂಗೆ ಅದನ್ನು ನೋಡಿ ಆಸೆಯಾಗಿ ಕದ್ದು ಬಿಟ್ಟೆ.
ಹುಡುಗ ಕ್ಲಾಸ್ ಟೀಚರ್ ಮುಂದೆ ದೂರು ನೀಡಿದ. ಆ ಕ್ಲಾಸ್ ಟೀಚರ್ ನೀವಾಗಿದ್ದಿರಿ.
ನೀವು ತರಗತಿಗೆ ಬಂದು ಯಾರು ಕದ್ದಿದ್ದೀರೋ ವಾಪಸ್ ಕೊಡಿ ಅಂತ ಕೇಳಿದ್ರಿ. ಇಲ್ಲಿ ಆಗದಿದ್ದರೆ ಸ್ಟಾಫ್ ರೂಮಿಗೆ ತಂದು ಕೊಡಿ ಅಂದ್ರಿ. ಆದ್ರೆ ನಾನು ಕೊಡಲಿಲ್ಲ. ಕೊಡಲು ಧೈರ್ಯ ಬರಲಿಲ್ಲವೋ ಗೊತ್ತಿಲ್ಲ.
ಆಗ ನೀವು ತರಗತಿಯ ಎಲ್ಲ ಬಾಗಿಲು ಮುಚ್ಚಲು ಹೇಳಿದಿರಿ. ನಮ್ಮನ್ನೆಲ್ಲ ವೃತ್ತಾಕಾರವಾಗಿ ನಿಲ್ಲಿಸಿದಿರಿ. ಎಲ್ಲರ ಜೇಬು ತಪಾಸಣೆ ಮಾಡುವುದಾಗಿ ಹೇಳಿದಿರಿ.
ನಂಗೆ ಒಮ್ಮೆಗೆ ಭಯವಾಯಿತು. ಅಷ್ಟು ಹೊತ್ತಿಗೆ ನೀವೊಂದು ಮಾತು ಹೇಳಿದಿರಿ: ಎಲ್ಲರೂ ತಮ್ಮ ಕಣ್ಣು ಮುಚ್ಚಿಕೊಳ್ಳಿ ಅಂತ. ನಾನೂ ಮುಚ್ಚಿಕೊಂಡೆ.
ನೀವು ಒಂದು ಕಡೆಯಿಂದ ಜೇಬು ತಪಾಸಣೆ ಮಾಡುತ್ತಾ ಬಂದ್ರಿ. ನನ್ನ ಜೇಬಿಗೆ ಕೈ ಹಾಕಿದಾಗ ನಿಮಗೆ ವಾಚು ಸಿಕ್ಕಿತು. ಆದ್ರೆ ನೀವು ಅಲ್ಲೇ ನಿಲ್ಲದೆ ಎಲ್ಲರ ಜೇಬು ತಪಾಸಣೆ ಮುಂದುವರಿಸಿದಿರಿ. ಎಲ್ಲರ ಜೇಬು ತಡಕಾಡಿ ಕೊನೆಗೆ ವಾಚು ಸಿಕ್ಕಿತು ಎಂದಿರಿ.
ಆದರೆ, ಅದನ್ನು ನಾನು ಕದ್ದದ್ದು ಎಂದು ನೀವು ಘೋಷಿಸಲಿಲ್ಲ. ಯಾರು ಕದ್ದರು ಅಂತಾನೂ ಹೇಳಲಿಲ್ಲ. ನನ್ನನ್ನು ಕರೆದು ಬೈತೀರಿ ಅಂದುಕೊಂಡೆ ಬೈಯಲೂ ಇಲ್ಲ. ಉಪದೇಶವನ್ನೂ ಮಾಡಲಿಲ್ಲ.
ಅದು ನನ್ನ ಪಾಲಿನ ಅತ್ಯಂತ ಅಪಮಾನಕಾರಿ ದಿನ ಅಂತ ಭಾವಿಸಿದ್ದೆ. ಆವತ್ತು ನೀವು ನನ್ನ ಮಾನ ಉಳಿಸಿದಿರಿ ಸರ್.
ಆವತ್ತೇ ನಾನು ತೀರ್ಮಾನ ಮಾಡಿದೆ. ಯಾವತ್ತೂ ಕಳ್ಳನಾಗಬಾರದು, ದುಷ್ಟನಾಗಬಾರದು. ಒಳ್ಳೆಯ ಮೇಸ್ಟ್ರು ಆಗಬೇಕು ಅಂತ. ನಿಮ್ಮ ದಾರಿಯಲ್ಲೇ ಮಕ್ಕಳನ್ನು ಪೊರೆಯುತ್ತಿದ್ದೇನೆ ಸರ್.
+++++++++++++++++
ಮೇಸ್ಟ್ರಿಗೆ ಇನ್ನಷ್ಟು ಖುಷಿ ಆಯಿತು. ಯುವಕ ಮುಂದುವರಿದು ಕೇಳಿದ: ಸರ್ ನಿಮಗೆ ಆವತ್ತಿನ ಘಟನೆ ನೆನಪಿದೆಯಾ?
ಆಗ ಆ ಮೇಸ್ಟ್ರು ನೆನಪು ಮಾಡಿಕೊಳ್ಳುತ್ತಾ ಹೇಳಿದರು:
ಹೌದು.. ಆ ವಾಚು ಕದ್ದು ಹೋಗಿದ್ದು, ನಾನು ಎಲ್ಲರನ್ನೂ ವೃತ್ತಾಕಾರದಲ್ಲಿ ನಿಲ್ಲಿಸಿದ್ದು… ಎಲ್ಲರ ಜೇಬಿನಲ್ಲಿ ಹುಡುಕಿದ್ದು ನೆನಪಾಗ್ತಾ ಇದೆ..
ಆದರೆ ವಾಚು ಇದ್ದಿದ್ದು ನಿನ್ನ ಜೇಬಿನಲ್ಲಿ ಅಂತ ನೆನಪಿಲ್ಲ ಹುಡುಗಾ… ಯಾಕೆಂದರೆ ನಿಮ್ಮನ್ನೆಲ್ಲ ಕಣ್ಮುಚ್ಚುವಂತೆ ಹೇಳಿದ್ದ ನಾನು ಕೂಡಾ ಕಣ್ಮುಚ್ಚಿಕೊಂಡೇ ವಾಚಿಗಾಗಿ ತಡಕಾಡಿದ್ದೆ!
ಮೊದಲೇ ಆದರಾಭಿಮಾನದಿಂದ ತುಳುಕುತ್ತಿದ್ದ ಯುವಕ ಧಿಗ್ಗನೆದ್ದು ಮೇಸ್ಟ್ರನ್ನು ಬಾಚಿ ತಬ್ಬಿಕೊಂಡ. ಸರ್ ನಾನು ತಿಳಿದುಕೊಂಡುದಕ್ಕಿಂತಲೂ ತುಂಬ ಎತ್ತರದ ಸ್ಥಾನ ಸರ್ ನಿಮ್ಮದು ಅಂದ. ಮೇಸ್ಟ್ರ ಕಣ್ಣಲ್ಲೂ ಒಂದು ಹನಿ ಮೂಡಿತು.
ಇದನ್ನೂ ಓದಿ| motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!
ಇದನ್ನೂ ಓದಿ|Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ!