Site icon Vistara News

Motivational story: ಶತಮೂರ್ಖ ಅಂತ ಚೀಟಿ ಬರೆದವರೇ ಮೂರ್ಖರಾದರು!

student writing

ಕೃಷ್ಣ ಭಟ್‌ ಅಳದಂಗಡಿ-Motivational story

ಅದೊಂದು ಹೈಸ್ಕೂಲ್‌ನ ಕ್ಲಾಸ್‌ ರೂಂ. ಒಬ್ಬ ಕಿಲಾಡಿ ಹುಡುಗ ಇದ್ದ. ಅವನು ಒಂದು ಪೇಪರ್‌ನಲ್ಲಿ ನಾನು ಶತಮೂರ್ಖ ಅಂತ ಬರೆದು ಎದುರು ಬೆಂಚಿನ ಹುಡುಗನ ಬೆನ್ನಿಗೆ ಅಂಟಿಸಿದ. ಪಾಪ, ಆ ಹುಡುಗ ಏನನ್ನೋ ಓದುತ್ತಾ ಬ್ಯುಸಿಯಾಗಿ ಇದ್ದುದರಿಂದ ಈ ತರ ಅಂಟಿಸಿದ್ದು ಅವನಿಗೆ ಗೊತ್ತಾಗಲೇ ಇಲ್ಲ.

ಹುಡುಗನ ಬೆನ್ನಿನಲ್ಲಿರುವ ಈ ಚೀಟಿಯನ್ನು ಕ್ಲಾಸಿನಲ್ಲಿರುವ ಇತರ ಹುಡುಗ, ಹುಡುಗಿಯರು ನೋಡಿದರು. ಮುಸಿ ಮುಸಿ ನಕ್ಕರು. ಕೆಲವರು ಅವನಿಗೆ ಹೇಳೋಣ ಅಂದುಕೊಂಡರು. ಆದರೆ, ಅದನ್ನು ಅಂಟಿಸಿದ ಹುಡುಗ ಸನ್ನೆಯ ಮೂಲಕವೇ.. ಬೇಡ ಬೇಡ ಅಂದರು. ಈ ಚೀಟಿ ಎಲ್ಲರಿಗೂ ಒಂದು ತಮಾಷೆಯ ಸಂಗತಿ ಆಯಿತು. ಎಲ್ಲರೂ ಸನ್ನೆಗಳ ಮೂಲಕ ನೋಡು ಅಂತ ಹೇಳುತ್ತಾ ತಮಾಷೆ ನೋಡುತ್ತಿದ್ದರು. ಎದುರು ಬೆಂಚಿನ ಕೆಲವರು ಸುಮ್ಮನೆ ಹಿಂದೆ ಬಂದು ಚೀಟಿ ಅಂಟಿಸಿದ್ದನ್ನು ನೋಡಿ ನಕ್ಕು ಮೋಜು ಮಾಡಿದರು. ಇನ್ನು ಕೆಲವರು ಸುಮ್ಮನೆ ಆ ಹುಡುಗನನ್ನು ಮಾತನಾಡಿಸುವ ನೆಪದಲ್ಲಿ ಬಂದು ಬೆನ್ನು ತಟ್ಟಿ ಹೋಗುತ್ತಿದ್ದರು. ಆಗಾಗ ಕೆಲವರು ಮೂರ್ಖ ಅಂತ ಜೋರಾಗಿ ಹೇಳುತ್ತಾ ನಗುತ್ತಿದ್ದರು. ಈ ಹುಡುಗನೂ ಅವರ ಜತೆ ಸೇರಿ ನಗುತ್ತಿದ್ದ. ಅವನಿಗೆ ಇವರೆಲ್ಲ ತನ್ನ ವಿಷಯದಲ್ಲಿ ನಗುತ್ತಿದ್ದಾರೆ ಎಂದು ಗೊತ್ತಾಗಲೇ ಇಲ್ಲ. ಅವನು ಒಮ್ಮೆ ಕ್ಲಾಸ್‌ ನಿಂದ ಹೊರಗೆ ಟಾಯ್ಲೆಟ್‌ವರೆಗೆ ಹೋಗಿ ಬಂದ. ಹೊರಹೋಗುವ ಸಂದರ್ಭದಲ್ಲಿ ಕ್ಲಾಸಿನಲ್ಲಿ ಜೋರಾದ ಕೇಕೆ, ಚಪ್ಪಾಳೆ. ಟಾಯ್ಲೆಟ್‌ನಲ್ಲೂ ಕೆಲವರು ಮುಸಿಮುಸಿ ನಕ್ಕರು. ಪಾಪ, ಆ ಹುಡುಗನಿಗೆ ಏನೋ ಅವಾಂತರ ನಡೆದಿದೆ ಎಂದು ಅರಿವಾಗಲೂ ಇಲ್ಲ.

ಆವತ್ತು ಕೊನೆಯ ಪೀರಿಯೆಡ್‌ ಗಣಿತ ಇತ್ತು. ಗಣಿತ ಮೇಸ್ಟ್ರು ಬಂದರು. ಆವತ್ತು ಮಕ್ಕಳ ಮುಖದಲ್ಲೆಲ್ಲಾ  ಏನೋ ಖುಷಿ ಇರುವುದನ್ನು ಗಮನಿಸಿದರು. ಏನು ಇವತ್ತು ವಿಶೇಷ ಅಂದರು. ನಥಿಂಗ್‌ ಸರ್‌ ಅಂತ ಮಕ್ಕಳೆಲ್ಲ ಹೇಳಿದರು.

ಆವತ್ತು ಗಣಿತ ಮೇಸ್ಟ್ರು ಒಂದು ಕಠಿಣವಾದ ಲೆಕ್ಕವನ್ನು ಕೊಟ್ಟರು. ಬೋರ್ಡ್‌ನಲ್ಲಿ ಅದನ್ನು ಬರೆದು ಇದನ್ನು ಯಾರು ಸಾಲ್ವ್‌ ಮಾಡ್ತೀರಿ ಅಂತ ಕೇಳಿದರು. ಎಲ್ಲರೂ ಒಂದಷ್ಟು ಹೊತ್ತು ಯೋಚಿಸಿದರು. ಆದರೆ, ಯಾರಿಗೂ ಅದು ಅರ್ಥವಾಗಲಿಲ್ಲ. ಅಷ್ಟು ಹೊತ್ತಿಗೆ ಬೆನ್ನಿಗೆ ಚೀಟಿ ಅಂಟಿಸಿಕೊಂಡಿದ್ದ ಹುಡುಗ ಎದ್ದು ನಿಂತು ʻನಾನು ಟ್ರೈ ಮಾಡ್ತೀನಿ ಸರ್‌ʼ ಅಂದ. ಅವನು ಎದ್ದು ಬೋರ್ಡ್‌ ಕಡೆಗೆ ಹೋಗುತ್ತಿದ್ದಂತೆಯೇ ಮಕ್ಕಳೆಲ್ಲ ಜೋರಾಗಿ ಹೋ ಅಂದರು. ಈಗಲೂ ಅವನಿಗೆ ಇವರೆಲ್ಲ ತಮಾಷೆ ಮಾಡುತ್ತಿದ್ದಾರೆ ಎಂದು ಅನಿಸಲಿಲ್ಲ. ಎಲ್ಲರೂ ತನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ ಅಂದುಕೊಂಡ ಹುಡುಗ.

ಹುಡುಗ ಬೋರ್ಡ್‌ ಕಡೆಗೆ ತಿರುಗಿ ನಿಂತು ಪ್ರಾಬ್ಲಮ್‌ ಸಾಲ್ವ್‌ ಮಾಡಲು ಶುರು ಮಾಡುತ್ತಿದ್ದಂತೆಯೇ ಶಿಕ್ಷಕರಿಗೆ ಬೆನ್ನಿನ ಮೇಲಿನ ಚೀಟಿ ಕಂಡಿತು. ಅವರೂ ಮಾತನಾಡಲಿಲ್ಲ. ಕೆಲವೇ ನಿಮಿಷದಲ್ಲಿ ಹುಡುಗ ಪ್ರಾಬ್ಲಮ್‌ ಸಾಲ್ವ್‌ ಮಾಡಿ.. ಸೀಮೆ ಸುಣ್ಣವನ್ನು ಟೇಬಲ್‌ ಮೇಲಿಟ್ಟ.

ಶಿಕ್ಷಕರು ಹುಡುಗನ ಬೆನ್ನು ತಟ್ಟುವ ನೆಪದಲ್ಲಿ ಬೆನ್ನಿಗೆ ಕೈಹಾಕಿ ಶತಮೂರ್ಖ ಎಂದು ಬರೆದ ಚೀಟಿಯನ್ನು ಕಿತ್ತು ಹಾಕಿದರು. ಬಳಿಕ ಕ್ಲಾಸನ್ನು ಉದ್ದೇಶಿಸಿ ಹೇಳಿದರು: ನಾನು ನಿಮಗೊಂದು ವಿಷಯ ಹೇಳಬೇಕು.. ಜನ ನಮ್ಮ ಹಿಂದೆ ನಿಂತು ಏನೇನೋ ಲೇಬಲ್‌ಗಳನ್ನು ಅಂಟಿಸಿ ಗೇಲಿ ಮಾಡುತ್ತಾರೆ. ಕೆಲವರು ಮೂರ್ಖ ಅಂತಾರೆ, ಕೆಲವರು ಶಾಣ್ಯಾ ಅಂತಾರೆ, ದಡ್ಡ ಅಂತಾರೆ, ಅವರವರ ಮನಸಿಗೆ ತೋಚಿದ ಹಾಗೆ ನಮಗೆ ಲೇಬಲ್‌ ಹಚ್ತಾರೆ. ಅದು ಅವರವರ ಮನಸಿನ ಆಲೋಚನೆಗಳಿಗೆ ಬಿಟ್ಟಿದ್ದು. ಆದರೆ, ನಾವು ಅದರ ಬಗ್ಗೆ ಯೋಚನೆ ಮಾಡಬಾರದು. ಇದೆಲ್ಲವನ್ನೂ ಮಾಡುವುದು ನಮ್ಮ ಬೆಳವಣಿಗೆಯನ್ನು ನೋಡಲಾಗದ ಹತಾಶೆಯಿಂದ. ನಾವು ಅವರ ಹತಾಶ ಪ್ರಯತ್ನಗಳಿಗೆ ಬಲಿ ಬೀಳಬಾರದು. ಅವೆಲ್ಲವನ್ನೂ ನಿರ್ಲಕ್ಷಿಸಿ ಸಾಗಬೇಕು. ಆಗ ಗೇಲಿ ಮಾಡಿದವರೆಲ್ಲ ಮೂಕರಾಗ್ತಾರೆ..

ಇಡೀ ಕ್ಲಾಸ್‌ನಲ್ಲಿ ಒಂದು ಕ್ಷಣ ಮೌನ. ಆಮೇಲೆ ಎಲ್ಲರೂ ಚಪ್ಪಾಳೆ ತಟ್ಟಿದರು. ಮೇಸ್ಟ್ರು ಮತ್ತೊಮ್ಮೆ ಹುಡುಗನ ಬೆನ್ನು ತಟ್ಟಿದರು.

ಇದನ್ನೂ ಓದಿ: Motivational story: ಅಪ್ಪನ ಆಸೆಯಂತೆಯೇ ಅವಳು ಡಾಕ್ಟರ್‌ ಆಗಿ ಮರಳಿದ್ದಳು.. ಆದರೆ..
ಇದನ್ನೂ ಓದಿ: Motivational story: ಒಳ್ಳೆಯತನ ದೌರ್ಬಲ್ಯ ಅಲ್ಲ, ಅದು ತಾಕತ್ತು ಅಂತ ಸದಾಶಿವ..

Exit mobile version