ಕೃಷ್ಣ ಭಟ್ ಅಳದಂಗಡಿ, motivational story
ಒಬ್ಬ ಮಹಿಳೆ ಒಂದು ದಿನ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದರು. ಮಕ್ಕಳು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ಅಲ್ಲಿನ ಡಾಕ್ಟರ್ ಬೆಂಗಳೂರಿನ ದೊಡ್ಡ ಆಸ್ಪತ್ರೆಗೆ ಹೋಗಬೇಕು, ಇದನ್ನು ದೊಡ್ಡ ಸರ್ಜನ್ ಅವರೇ ನೋಡಬೇಕು.. ಕೂಡಲೇ ಹೋಗಿ ಅಂದರು.
ಮೊದಲೇ ಮಧ್ಯಮ ವರ್ಗದ ಕುಟುಂಬ. ದೊಡ್ಡಾಸ್ಪತ್ರೆ ಬೇರೆ. ದುಡ್ಡೆಷ್ಟಾಗ್ತದೋ ಅನ್ನೋ ಅಳುಕಿನಿಂದಲೇ ಕರೆದುಕೊಂಡು ಹೋದರು. ಆಸ್ಪತ್ರೆಯಿಂದ ಅತ್ಯಂತ ಜನಪ್ರಿಯ ನ್ಯೂರೊಲಜಿಸ್ಟ್ ಡಾ. ರಮೇಶ್ ಅವರಿಗೆ ಕರೆ ಹೋಯಿತು. ಕೂಡಲೇ ಅವರು ಧಾವಿಸಿ ಬಂದರು. ಕೇಸ್ ಶೀಟ್‍ನಲ್ಲಿ ಹೆಸರು ನೋಡಿದರು: ನಿರ್ಮಲಾ, ಬಸವನಗುಡಿ..
ಡಾಕ್ಟರ್ ರಮೇಶ್ ಗೆ ಈ ಹೆಸರು ಎಲ್ಲೋ ಕೇಳಿದ್ದೇನೆ ಅನಿಸಿತು. ಯೋಚಿಸಿದಾಗ ನೆನಪಾಯಿತು. ಪರಿಸ್ಥಿತಿ ಗಮನಿಸಿದರು. ಮೆದುಳಿನಲ್ಲಿ ಗಡ್ಡೆಯಾಗಿದೆ. ತುಂಬಾ ಕಾಂಪ್ಲಿಕೇಟೆಡ್ ಕೇಸು. ಆದರೆ, ಏನೇ ಆದರೂ ನನ್ನ ಎಲ್ಲ ಜ್ಞಾನವನ್ನು ಪಣಕ್ಕಿಟ್ಟು ರಕ್ಷಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಆಪರೇಷನ್ ಮಾಡಿದರು, ಪ್ರತಿ ದಿನವೂ ಹೋಗಿ ನೋಡಿದರು.
ಆವತ್ತು ಬಿಲ್ ಬರುವ ದಿನ. ನಿರ್ಮಲಾ ಅಮ್ಮನ ಮನೆಯವರು ಡಾಕ್ಟರ್ ಹತ್ರ ಬಂದು ಸ್ವಲ್ಪ ಕಡಿಮೆ ಮಾಡಿಕೊಡಿ. ದೊಡ್ಡ ಬಿಲ್ ಆಗಿದೆ ಅಂದರು.
ಡಾ. ರಮೇಶ್ ಬಿಲ್‍ನ್ನು ತನಗೊಮ್ಮೆ ತೋರಿಸಿ ಎಂದು ಫೈನಾನ್ಸ್ ಡಿಪಾರ್ಟ್‍ಮೆಂಟ್‍ಗೆ ತಿಳಿಸಿದರು. ಕೊನೆಗೆ ಬಿಲ್ ಬಂತು. ನೋಡಿದರೆ ಎಲ್ಲವನ್ನೂ ಡಾ. ರಮೇಶ್ ತುಂಬಿದ್ದರು. ಅದರ ಕೊನೆಯಲ್ಲಿ ಬರೆದಿದ್ದರು.. ಈ ಬಿಲ್ಲಿನ ಮೊತ್ತ ನೀವು ಕೊಟ್ಟ ಒಂದು ಲೋಟ ಹಾಲಿಗೆ ಸರಿಗಟ್ಟದಮ್ಮಾ.. ಇತಿ, ಡಾ. ರಮೇಶ್.
ಇದನ್ನು ನೋಡಿ ಇಡೀ ವಾರ್ಡ್ ದಂಗಾಯಿತು. ಎಲ್ಲ ನರ್ಸ್ ಗಳು ಬೆಡ್‍ನ ಕಡೆಗೆ ಬಂದರು. ನಿರ್ಮಲಾ ಅಮ್ಮನಿಗೂ ಅಚ್ಚರಿ.
ಅಷ್ಟು ಹೊತ್ತಿಗೆ ಡಾ. ರಮೇಶ್ ಅಲ್ಲಿಗೆ ನಡೆದುಬಂದರು. ಒಂದು ಕಥೆ ಹೇಳಿದರು.
ಸುಮಾರು 15 ವರ್ಷದ ಹಿಂದೆ ನಾನು ಮೆಡಿಕಲ್ ಕಲಿಯೋದಕ್ಕೆ ಬೆಂಗಳೂರಿಗೆ ಬಂದಿದ್ದೆ. ಮನೆಯಲ್ಲಿ ತುಂಬ ಕಷ್ಟವಿತ್ತು. ಮೆರಿಟ್ ಸೀಟೇನೋ ಸಿಕ್ಕಿತು. ಉಳಿದ ಹಣ ಹೇಗೆ ಹೊಂದಿಸುವುದು? ನಾನು ಪ್ರತಿ ಭಾನುವಾರ ಮನೆ ಮನೆಗೆ ಹೋಗಿ ಏನೇನೋ ವಸ್ತುಗಳನ್ನು ಮಾರ್ತಾ ಇದ್ದೆ. ಆವತ್ತೊಂದು ದಿನ ಬೆಳಗ್ಗೆ ಏನೂ ತಿಂದಿರಲಿಲ್ಲ. ಬಿಸಿಲಿಗೆ ನಡೆದು ಬಸವಳಿದು ಹೋಗಿದ್ದೆ. ಕುಡಿಯೋಕೆ ನೀರೂ ಸಿಗಲಿಲ್ಲ. ಬವಳಿ ಬಂದಂದಾಯಿತು. ಕೂಡಲೇ ಪಕ್ಕದಲ್ಲಿದ್ದ ಮನೆಯೊಂದರ ಬಾಗಿಲು ಬಡಿದೆ. ಆಗ ಒಬ್ಬ ಮಹಿಳೆ ಹೊರಗೆ ಬಂದರು. ಸ್ವಲ್ಪ ನೀರು ಕೊಡಿ ಅಂತ ಕೇಳಿದೆ. ನೀರು ತಂದುಕೊಟ್ಟರು. ಕುಸಿದು ಕುಳಿತ ನನಗೆ ಒಂದಿಷ್ಟು ಗಾಳಿ ಹಾಕಿದರು. ಅಷ್ಟೇ ಅಲ್ಲ.. ಒಳಗೆ ಹೋಗಿ ಒಂದು ಗ್ಲಾಸು ಹಾಲು ತಂದುಕೊಟ್ಟರು. ಸುಧಾರಿಸಿಕೊಂಡು ಹೋಗು ಎಂದರು.
ಆ ತಾಯಿಯ ಮುಖವನ್ನೊಮ್ಮೆ ನೋಡಿದೆ… ಆ ಬಳಿಕ ಆ ಮುಖವನ್ನು ನೋಡಿದ್ದು ಇಲ್ಲೇ. ಆ ಹಾಲಿನ ಋಣವನ್ನು ಈ ರೀತಿಯಾಗಿಯಾದರೂ ತೀರಿಸಲು ಸಾಧ್ಯವಾಯಿತಲ್ಲಾ ಎನ್ನುವ ಕೃತಾರ್ಥತೆ ನನ್ನದು ಅಂತ ಕಾಲು ಮುಟ್ಟಿದರು. ನಿರ್ಮಲಾ ಅಮ್ಮನಿಗೆ ಏನು ಹೇಳಬೇಕು ಎಂದೇ ತೋಚಲಿಲ್ಲ… ಮಗಾ ಅಂತ ಬಾಚಿ ತಬ್ಬಿಕೊಂಡರು. ಡಾಕ್ಟರ್ ಕೋಟಿನ ಹೆಗಲು ಒದ್ದೆ ಒದ್ದೆ.
ಇದನ್ನೂ ಓದಿ| Motivational Story | ಅಪ್ಪ, ಅಮ್ಮನ ಕೈಯನ್ನು ಯಾವತ್ತಾದ್ರೂ ನೋಡಿದಿರಾ?