Site icon Vistara News

Motivational Story: ವಾಹನಗಳಲ್ಲಿ ಬ್ರೇಕ್ ಇರುವುದು ನಿಲ್ಲಿಸುವುದಕ್ಕಲ್ಲ!

break

ಅದು ಪಿಯುಸಿಯ ಒಂದು ಕ್ಲಾಸ್. ಭೌತಶಾಸ್ತ್ರ ಉಪನ್ಯಾಸಕರಾದ ಪವನ್ ಪ್ರಸಾದ್ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದರು: ನಮ್ಮ ಕಾರುಗಳಲ್ಲಿ ಬ್ರೇಕ್‍ಗಳು ಯಾಕಿರ್ತವೆ ಅಂತ ಹೇಳಿನೋಡೋಣ.

ಎಲ್ಲ ಮಕ್ಕಳಿಗೆ ವಿಚಿತ್ರ ಅನಿಸಿತು.. ಇದೆಂಥ ಪ್ರಶ್ನೆ ಅಂತ. ಒಬ್ಬ ವಿದ್ಯಾರ್ಥಿ ಕೂಡಲೇ ಎದ್ದು ನಿಂತು ಹೇಳಿದ: ಸರ್ ಬ್ರೇಕುಗಳಿರುವುದು ಕಾರನ್ನು ನಿಲ್ಲಿಸಲು.

ಇನ್ನೊಬ್ಬ ಹೇಳಿದ: ಕಾರಿನ ವೇಗವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು.

ವಿನುತಾ ಹೇಳಿದಳು: ಅಪಘಾತ ಆಗುವುದನ್ನು ತಪ್ಪಿಸಲಿಕ್ಕೆ.. ಡಿಕ್ಕಿ ಹೊಡೆಯೋದು ತಪ್ಪುತ್ತದೆ.

ಹೀಗೆ ವಿದ್ಯಾರ್ಥಿಗಳು ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಎಲ್ಲರ ಉತ್ತರಗಳೂ ಬಹುತೇಕ ಒಂದೇ ರೀತಿ ಇದ್ದವು.

ಆಗ ಪ್ರಸಾದ್ ತಾವೇ ಉತ್ತರ ನೀಡಲು ಮುಂದಾದರು. ʻನೀವೆಲ್ಲ ಸರಿಯಾದ ಉತ್ತರಗಳನ್ನೇ ನೀಡಿದ್ದೀರಿ. ನಿಮ್ಮ ಯೋಚನಾ ಶಕ್ತಿ ನನಗೆ ಖುಷಿಯಾಯಿತು. ಆದರೆ, ಇದಕ್ಕಿಂತಲೂ ಮಿಗಿಲಾದ ದೊಡ್ಡ ಕಾರಣವೊಂದಿದೆ’-ಎಂದು ಹೇಳಿದಾಗ ವಿದ್ಯಾರ್ಥಿಗಳಿಗೆ ಅಚ್ಚರಿ. ಇನ್ನೇನಿರುತ್ತದೆ ಅಂತ.

ಬ್ರೇಕ್ ಇರುವುದು ಕಾರನ್ನು ಅತ್ಯಂತ ವೇಗವಾಗಿ ಓಡಿಸಲಿಕ್ಕೆ!: ಹೀಗೆಂದು ಪವನ್ ಪ್ರಸಾದ್ ಹೇಳಿದಾಗ ವಿದ್ಯಾರ್ಥಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು. ಕ್ಲಾಸಿನಲ್ಲಿ ಒಂದು ಗಾಢ ಮೌನ. ಯಾಕೆಂದರೆ, ಯಾರು ಕೂಡಾ ಈ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ವೇಗವಾಗಿ ಹೋಗಲು ಬೇಕಿರುವುದು ಎಕ್ಸಿಲೇಟರ್ ಅಲ್ವಾ? ಬ್ರೇಕ್ ಹೇಗಾಗ್ತದೆ ಎಂಬ ಪ್ರಶ್ನೆ ಅವರೆಲ್ಲರನ್ನೂ ಕಾಡಿತು.

ಪ್ರಸಾದ್ ತಾವೇ ಉತ್ತರಿಸಲು ಶುರು ಮಾಡಿದರು.

ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಕಾರಿಗೆ ಬ್ರೇಕೇ ಇಲ್ಲ ಅಂತಿದ್ರೆ ನೀವು ಕಾರನ್ನು ಎಷ್ಟು ವೇಗವಾಗಿ ಓಡಿಸುತ್ತೀರಿ? ಬ್ರೇಕ್ ಫೇಲ್ ಆಗಿರೋ ಕಾರು ಕೊಡ್ತೇನೆ ಅಂತಿಟ್ಕೊಳ್ಳಿ.

ವೇಗ ಬಿಡಿ, ಒಂದು ಮೀಟರ್ ಮುಂದೆ ಕೂಡಾ ಹೋಗುವುದಿಲ್ಲ ಅಲ್ವೇ? ಒಂದು ಕಾರನ್ನು ವೇಗವಾಗಿ ಓಡಿಸಲು ನಮಗೆ ಧೈರ್ಯ ನೀಡುವುದು ಅದಕ್ಕೊಂದು ಬ್ರೇಕ್ ಇದೆ ಎನ್ನುವ ನಂಬಿಕೆ ಅಲ್ವೇ? ಏನೇ ಆದರೂ ಬ್ರೇಕ್ ಇದೆ ಎನ್ನುವ ನಂಬಿಕೆಯಿಂದ ಅಲ್ಲವೇ ಕಾರನ್ನು 100, 200 ಕಿ.ಮೀ. ವೇಗದಲ್ಲಿ ಓಡಿಸುವುದು?

ಪ್ರಸಾದ್ ಮುಂದುವರಿಸಿದರು. ನಮ್ಮ ಬದುಕಿನಲ್ಲೂ ಅಷ್ಟೆ ಕೆಲವೊಂದು ಬ್ರೇಕ್‍ಗಳಿರ್ತವೆ. ಹೆತ್ತವರು, ಶಿಕ್ಷಕರು, ಸ್ನೇಹಿತರು ಎಲ್ಲರೂ ನಮ್ಮನ್ನು ಪ್ರಶ್ನೆ ಮಾಡ್ತಾರೆ. ಎಲ್ಲಿ ಹೋಗ್ತಾ ಇದ್ದೀಯಾ, ಏನ್ಮಾಡ್ತಾ ಇದೀಯಾ, ಮುಂದೇನು ಮಾಡ್ತೀಯಾ ಅಂತೆಲ್ಲ. ಇದೆಲ್ಲ ನಮಗೆ ಕಿರಿಕಿರಿ ಅನಿಸ್ತಾ ಇರ್ತದೆ. ಇದೆಲ್ಲ ನಮಗೆ ಅಡೆತಡೆ ಎಂದೇ ನಾವು ಭಾವಿಸುತ್ತೇವೆ.

ಆದರೆ, ಇವೇ ಪ್ರಶ್ನೆಗಳು ನಾವು ಹೋಗ್ತಾ ಇರುವ ದಾರಿ ಸರಿ ಇದೆಯಾ? ಎಷ್ಟು ವೇಗವಾಗಿ ಹೋಗ್ತಾ ಇದೇವೆ (ಹೋಮ್ ವರ್ಕ್ ಕಂಪ್ಲೀಟ್ ಆಯ್ತಾ?), ದಾರಿ ತಪ್ಪಿದ್ದೇವಾ ಎನ್ನುವುದನ್ನು ಅವಲೋಕನ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತವೆ.

ನಾವು ಬ್ರೇಕ್ ಅಂದುಕೊಂಡಿದ್ದು ನಿಜದಲ್ಲಿ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತಾ ಇರುತ್ತದೆ. ತಪ್ಪಿದ್ದರೆ ಸರಿ ಮಾಡಿಕೊಳ್ಳಲು ಅವಕಾಶ ಕೊಡುತ್ತದೆ. ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಎಲ್ಲೂ ಆಕ್ಸಿಡೆಂಟ್ ಆಗದಂತೆ ನೋಡಿಕೊಳ್ಳುತ್ತದೆ.

ಅಂತ ಹೇಳಿ ಪ್ರಸಾದ್ ಮಕ್ಕಳ ಮುಖ ನೋಡಿದರು. ಹೌದಲ್ವಾ ಅನ್ನುವ ಅಚ್ಚರಿ ಮಕ್ಕಳ ಮುಖದಲ್ಲಿತ್ತು.

ಇದನ್ನೂ ಓದಿ| Motivational Story | ಅಪ್ಪ, ಅಮ್ಮನ ಕೈಯನ್ನು ಯಾವತ್ತಾದ್ರೂ ನೋಡಿದಿರಾ?

Exit mobile version