Site icon Vistara News

ರಾಜ ಮಾರ್ಗ ಅಂಕಣ | ಜ್ಞಾನೇಶ್ವರ ಸಂತರು ನಾಯಿಯ ಹಿಂದೆ ಓಡಿದ್ದು ಯಾಕೆ?

santa jnaneshwar

ಮರಾಠಿಯ ಸಂತ ಜ್ಞಾನದೇವರು ಸಾವಿರಾರು ಅಭಂಗಗಳನ್ನು ಬರೆದವರು. ಅಭಂಗ ಎಂದರೆ ತುಂಡು ಆಗದ ಎಂದರ್ಥ. ತಮ್ಮ ಜ್ಞಾನೇಶ್ವರಿ ಎಂಬ ಗ್ರಂಥದಲ್ಲಿ ಜ್ಞಾನೇಶ್ವರರು ಮರಾಠಿ ಭಾಷೆಯಲ್ಲಿ ಪಂಡರಾಪುರದ ವಿಠ್ಠಲನ ಗೀತೆಗಳನ್ನು ಸುಂದರವಾಗಿ ಬರೆದಿದ್ದಾರೆ. ಅಂತಹ ಜ್ಞಾನೇಶ್ವರ ಸಂತರು ದೇವರನ್ನು ಪ್ರತ್ಯಕ್ಷವಾಗಿ ಕಂಡವರು ಎಂಬ ಪ್ರತೀತಿ ಮಹಾರಾಷ್ಟ್ರದಲ್ಲಿ ಇದೆ.

ಒಮ್ಮೆ ಏನಾಯಿತು ಎಂದರೆ ಜ್ಞಾನೇಶ್ವರ ಮಹಾರಾಜರು ಮನೆಯ ಜಗಲಿಯ ಮುಂದೆ ಕೂತು ತುಪ್ಪದ ಭರಣಿಯಲ್ಲಿ ರೊಟ್ಟಿ ಮುಳುಗಿಸಿ ತಿನ್ನುತ್ತಿದ್ದರು. ಎಲ್ಲಿಂದಲೋ ಒಂದು ನಾಯಿ ಓಡಿ ಬಂದು ಅವರ ಕೈಯ್ಯಲ್ಲಿ ಇದ್ದ ಅಷ್ಟೂ ರೊಟ್ಟಿಗಳನ್ನು ಕಿತ್ತುಕೊಂಡು ಓಡಿತು.

ಆಗ ಧಿಗ್ಗನೆ ಎದ್ದ ಜ್ಞಾನೇಶ್ವರರು ನಾಯಿಯ ಹಿಂದೆ ಓಟ ಆರಂಭ ಮಾಡಿದರು. ಅವರ ಕೈಯ್ಯಲ್ಲಿ ತುಪ್ಪದ ಭರಣಿ ಇತ್ತು. ಅವರು ಗಟ್ಟಿಯಾಗಿ “ಶುನಕ ಮಹಾರಾಜ, ರೊಟ್ಟಿಯನ್ನು ಹಾಗೇ ತಿನ್ನಬೇಡ. ಗಂಟಲಲ್ಲಿ ಸಿಕ್ಕಿಹಾಕಿ ಉಸಿರು ನಿಂತೀತು! ತುಪ್ಪದ ಭರಣಿ ನನ್ನ ಕೈಯ್ಯಲ್ಲಿ ಇದೆ. ನಾನೇ ತುಪ್ಪದಲ್ಲಿ ಮುಳುಗಿಸಿ ಕೊಡುತ್ತೇನೆ. ಆಮೇಲೆ ತಿನ್ನುವಂತೆ!” ಎಂದು ಓಡತೊಡಗಿದರು. ಕೊನೆಗೂ ಆ ನಾಯಿಯನ್ನು ಹಿಡಿದು, ಅದನ್ನು ಒಲಿಸಿ ಅದಕ್ಕೆ ತುಪ್ಪದಲ್ಲಿ ಮುಳುಗಿಸಿದ ರೊಟ್ಟಿಯನ್ನು ಕೊಡುವತನಕ ಅವರಿಗೆ ಸಮಾಧಾನ ಆಗಲಿಲ್ಲ!

ಹೀಗೆ ಒಂದು ನಾಯಿಯಲ್ಲಿ ಕೂಡ ದೇವರನ್ನು ಕಾಣುವ ಅವರ ಭಾವನೆಗಳು ಅವರನ್ನು ದೇವರ ಬಳಿಗೆ ಕರೆದುಕೊಂಡು ಹೋದವು!

ರಾಜ ಮಾರ್ಗ ಅಂಕಣ: ಪಂಚೆ, ಕೋಲು, ಕನ್ನಡಕ ಎಲ್ಲವೂ ಗಾಂಧೀಜಿಯವರ ಹೋರಾಟದ ಅಸ್ತ್ರಗಳೇ!

Exit mobile version