ಅರವತ್ತರ ದಶಕದಲ್ಲಿ ಸುಪ್ರೀಂ ಕೋರ್ಟಿನ ಎದುರು ನಮ್ಮ ದೇಶದ ಗಮನ ಸೆಳೆದ ಒಂದು ಕೇಸು ವಿಚಾರಣೆಗೆ ಬಂದಿತ್ತು. ಅದು ಕೇರಳ ಸರಕಾರ ವರ್ಸಸ್ ಕೇಶವಾನಂದ ಭಾರತೀ ಮೊಕದ್ದಮೆ. ಕಾವಿ ತೊಟ್ಟ ಸ್ವಾಮೀಜಿ ಒಬ್ಬರು ಪಾರ್ಟಿ ಆಗಿದ್ದ ಕಾರಣ ಆ ಕೇಸ್ ಸಂಚಲನ ಸೃಷ್ಟಿ ಮಾಡಿತ್ತು. ಆಟಾರ್ನಿ ಜನರಲ್ ಭಾರಿ ಜನಪ್ರಿಯ ಲಾಯರ್ ಆದ ಕಾರಣ ಮಾತಿನ ವರಸೆಯೂ ಜೋರಾಗಿಯೇ ಇತ್ತು. ನ್ಯಾಯಾಧೀಶರು ತಣ್ಣಗೆ ಕೂತು ಹಿಯರಿಂಗ್ ಆಲಿಸುತ್ತಿದ್ದರು.
ಮಾತಿನ ಬಿರುಸಿನಲ್ಲಿ ಅಟಾರ್ನಿ ಜನರಲ್ ಅವರು ಕೇರಳ ಸರಕಾರವನ್ನು ಡಿಫೆಂಡ್ ಮಾಡುತ್ತಾ “ಸಂಸತ್ತಿಗೆ ಯಾವುದೇ ಶಾಸನವನ್ನು ಮಾಡುವ ಅಧಿಕಾರ ಇದೆ. ಅದು ಪ್ರಶ್ನಾತೀತ” ಅಂದರು.
ಅದುವರೆಗೆ ಸುಮ್ಮನೆ ಕೇಳುತ್ತಿದ್ದ ನ್ಯಾಯಮೂರ್ತಿಗಳು ಈಗ ಸಿಡಿದು ನಿಂತರು. “ನಿಮ್ಮ ಪ್ರಕಾರ ಸಂಸತ್ತಿಗೆ ಶಾಸನವನ್ನು ಮಾಡುವ ಪೂರ್ಣ ಅಧಿಕಾರ ಇದೆ ಎಂದಾದರೆ ಈಗ ಇರುವ ಪ್ರಧಾನ ಮಂತ್ರಿಯನ್ನು ಪೂರ್ಣಕಾಲಿಕ ಪ್ರಧಾನಿ ಎಂದು ಘೋಷಣೆ ಮಾಡಲಿ. ಇನ್ನು ಚುನಾವಣೆ ಬೇಡ. ಸುಮ್ಮನೆ ಖರ್ಚು ವೆಚ್ಚ ಯಾಕೆ? ಈ ಒಂದು ಶಾಸನ ಸಂಸತ್ತು ಮಾಡಬಹುದಾ?” ಎಂದು ಕೇಳಿದಾಗ ಇಡೀ ಕೋರ್ಟು ಕಟ್ಟಡವೇ ನಡುಗಿದ ಅನುಭವ ಆಯಿತು! ಅಧಿಕಪ್ರಸಂಗಿ ಆಟಾರ್ನಿ ತಲೆತಗ್ಗಿಸಿ ನಿಂತರು.
ಹಾಗೆ ಸಿಡಿದ ನ್ಯಾಯಮೂರ್ತಿ ಬೇರೆ ಯಾರೂ ಅಲ್ಲ. ನನ್ನೂರು ಕಾರ್ಕಳದ ಕೌಡೂರಿನ ಜಸ್ಟೀಸ್ ಕೆ.ಎಸ್.ಹೆಗ್ಡೆ! ಸುಮಾರು ಆರು ವರ್ಷಗಳ ಅವಧಿಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಹೆಗ್ಡೆಯವರು ದಿಟ್ಟತನದ ತೀರ್ಪುಗಳಿಗೆ ಹೆಸರಾದವರು. ನ್ಯಾಯಾಧೀಶರು ಕಾನೂನು ಪರಿಣತರು ಆಗುವುದಕ್ಕಿಂತ ನ್ಯಾಯಪಕ್ಷಪಾತಿಗಳು ಆಗಿರಬೇಕೆಂದು ಅವರು ಪ್ರತಿಪಾದನೆ ಮಾಡಿದವರು. ಮುಂದೆ ಅವರಿಗಿಂತ ಜ್ಯೂನಿಯರ್ ಆಗಿದ್ದ ಜಸ್ಟೀಸ್ ಎ ಎನ್ ರೇ ಅವರಿಗೆ ಸುಪ್ರೀಂ ಕೋರ್ಟಿನ ಮುಖ್ಯ ಜಸ್ಟೀಸ್ ಆಗಿ ಪದೋನ್ನತಿ ನೀಡಿದಾಗ ಒಂದು ಕ್ಷಣ ಕೂಡ ಯೋಚನೆ ಮಾಡದೆ ತನ್ನ ಹುದ್ದೆಗೆ ರಾಜೀನಾಮೆಯನ್ನು ನೀಡಿ ಹೊರಬಂದವರು ಅವರು!
ಮುಂದೆ 1977ರಿಂದ ಮೂರುವರೆ ವರ್ಷ ಅವರು ಲೋಕಸಭೆಯ ಸ್ಪೀಕರ್ ಆಗಿ ನಿಷ್ಪಕ್ಷಪಾತಿಯಾಗಿ ಕಾರ್ಯ ನಿರ್ವಹಣೆ ಮಾಡಿದರು. ಅವರ ವಿರುದ್ಧ ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷವು ಸ್ಪರ್ಧಿಯನ್ನು ನಿಲ್ಲಿಸಿರಲಿಲ್ಲ. ಅಲ್ಲಿಯೂ ಅವರ ನಿಲುವು ನೇರ ಮತ್ತು ದಿಟ್ಟ ಆಗಿಯೇ ಇತ್ತು.
ಮುಂದೆ ರಾಜಕೀಯ ನಿವೃತ್ತಿ ಪಡೆದ ನಂತರ ಅವರು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮಕ್ಕೆ ಬಂದು ನೆಲೆ ನಿಂತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಅವರು ಸ್ಥಾಪನೆ ಮಾಡಿದ ನಿಟ್ಟೆ ಶಿಕ್ಷಣ ಸಂಸ್ಥೆಗಳು ಇಂದು ಬೃಹತ್ ವಿವಿಯಾಗಿ ಬೆಳೆದಿವೆ. ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಅವರ ಮಗ ಎನ್. ವಿನಯ ಹೆಗ್ಡೆ ಅವರು ಈ ವಿವಿಯ ಕುಲಾಧಿಪತಿ ಆಗಿ ವಿವಿಯನ್ನು ಮುನ್ನಡೆಸುತ್ತಿದ್ದಾರೆ. ಅವರ ಇನ್ನೊಬ್ಬ ಮಗ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ತನ್ನ ಅಪ್ಪನ ಹಾಗೆ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಆಗಿ ಶ್ರೇಷ್ಠವಾದ ಕೀರ್ತಿ ಸಂಪಾದನೆ ಮಾಡಿದರು ಮತ್ತು ಮುಂದೆ ಕರ್ನಾಟಕ ಸರಕಾರದ ವಿನಂತಿಯ ಮೇರೆಗೆ ಲೋಕಾಯುಕ್ತದ ನ್ಯಾಯಮೂರ್ತಿ ಆಗಿ ನಿಯುಕ್ತಿಗೊಂಡು ಭ್ರಷ್ಟರಿಗೆ ಸಿಂಹಸ್ವಪ್ನ ಆದರು.
ಇದನ್ನೂ ಓದಿ| ರಾಜ ಮಾರ್ಗ ಅಂಕಣ: ಶೇನ್ ವಾರ್ನ್ ಅಂದರೆ ಹೆದರುತ್ತಿದ್ದ ಸಚಿನ್ ತಿರುಗಿಬಿದ್ದಿದ್ದು ಹೇಗೆ?