2000ನೇ ಇಸವಿಯ ಸೂಪರ್ ಹಿಟ್ ಕನ್ನಡ ಸಿನಿಮಾ ಪ್ರೀತ್ಸೇ. ಉಪೇಂದ್ರ, ಶಿವರಾಜ್ ಕುಮಾರ್, ಸೊನಾಲಿ ಬೇಂದ್ರೆ ಅಭಿನಯಿಸಿದ ಜನಪ್ರಿಯ ಸಿನೆಮಾ ಅದು. ಹಿಂದಿಯ ಡರ್ ಸಿನೆಮಾದ ರಿಮೇಕ್. ಡಿ. ರಾಜೇಂದ್ರ ಬಾಬು ಆ ಸಿನೆಮಾದ ನಿರ್ದೇಶಕರು. ಸಾಹಿತ್ಯ ಬರೆದು ಸಂಗೀತ ಕೊಟ್ಟವರು ನಾದ ಬ್ರಹ್ಮ ಹಂಸಲೇಖ ಅವರು.
ಈ ಸಿನೆಮಾದ ಟೈಟಲ್ ಸಾಂಗ್ ಅದ್ಭುತವಾಗಿ ಬರಬೇಕೆಂದು ಹಂಸಲೇಖ ಆಸೆ ಪಟ್ಟರು. ಅದಕ್ಕಾಗಿ ಪ್ರೀತ್ಸೇ ಪ್ರೀತ್ಸೇ ಎಂಬ ಹಾಡು ಬರೆದು ರಾಗ ಸಂಯೋಜನೆ ಮಾಡಿದರು.
ಆಗಿನ ವ್ಯವಸ್ಥೆ ಹೇಗಿತ್ತು ಅಂದರೆ ಇಡೀ ಹಾಡನ್ನು ಬರೆದು, ರಾಗ ಸಂಯೋಜನೆ ಮಾಡಿ, ಅದಕ್ಕೆ ಹಿನ್ನೆಲೆ ಟ್ರ್ಯಾಕ್ ರೆಡಿ ಮಾಡಿ, ಹೆಚ್ಚು ಅನುಭವ ಇಲ್ಲದ ಯುವ ಗಾಯಕರಿಂದ ಒಮ್ಮೆ ಹಾಡಿಸುವುದು. ನಂತರ ಸೆಲೆಬ್ರಿಟಿ ಗಾಯಕರು ಬಂದು ಟ್ರ್ಯಾಕ್ ಸಿಂಗರ್ ಹಾಡಿದ್ದನ್ನು ಒಮ್ಮೆ ಮಾತ್ರ ಕೇಳಿ ಒಂದೇ ಒಂದು ರಿಹರ್ಸಲ್ ಮಾಡಿ ಹಾಡಿ ಮುಗಿಸುವುದು. ಎಸ್. ಪಿ. ಬಾಲು ಅಂತಹ ಸಿಂಗರ್ ದಿನಕ್ಕೆ 15-20 ಹಾಡುಗಳನ್ನು ಹಾಡುತ್ತಿದ್ದ ದಿನಗಳು ಅವು. ಆದ್ದರಿಂದ ಟ್ರ್ಯಾಕ್ ಸಿಂಗರ್ ಪದ್ಧತಿ ಅನಿವಾರ್ಯ ಆಗಿತ್ತು.
ಸಂಗೀತ ನಿರ್ದೇಶಕ ಹಂಸಲೇಖ ಮೊದಲು ಆ ಹಾಡನ್ನು ಹೇಮಂತ್ ಕುಮಾರ್ ಎಂಬ ಟ್ರ್ಯಾಕ್ ಸಿಂಗರ್ ಮೂಲಕ ಹಾಡಿಸಿ ರೆಡಿ ಮಾಡಿ ಆಗಿತ್ತು. ಎಸ್ಪಿಬಿ ಆ ಹಾಡನ್ನು ಹಾಡಲು ಹೈದರಾಬಾದಿನಿಂದ ಬಂದಿದ್ದರು. ಅವರು ಒಮ್ಮೆ ಟ್ರ್ಯಾಕ್ ಸಿಂಗರ್ ಹೇಮಂತ್ ಕುಮಾರ್ ಹಾಡಿದ್ದನ್ನು ಕೇಳಿ ಆಶ್ಚರ್ಯ ಪಟ್ಟರು. ಅವರು ಹಂಸಲೇಖ ಅವರನ್ನು ಕರೆದು ‘ಸರ್, ಆ ಹುಡುಗ ಯಾರು? ಅವನು ಚೆನ್ನಾಗಿ ಹಾಡಿದ್ದಾನೆ. ಧ್ವನಿಯಲ್ಲಿ ಜಾದೂ ಇದೆ. ಅವನಿಂದಲೇ ಆ ಹಾಡನ್ನು ಹಾಡಿಸಿ’ ಎಂದು ಹೇಳಿ ಒಂದು ರೂಪಾಯಿ ಸಂಭಾವನೆ ಪಡೆಯದೆ ಹೈದರಾಬಾದ್ ವಿಮಾನ ಹತ್ತಿದರು!
ಬಾಲು ಅವರ ಈ ಔದಾರ್ಯವು ಒಬ್ಬ ಹೊಸ ಗಾಯಕನಿಗೆ ಜನ್ಮ ಕೊಟ್ಟಿತು. ಮುಂದೆ ಹೇಮಂತ್ ತುಂಬಾ ಸಿನೆಮಾಗಳ ಹಾಡುಗಳನ್ನು ಹಾಡಿ ಜನಪ್ರಿಯ ಗಾಯಕರಾದರು. ತನಗೆ ಬಾಲು ಸರ್ ಮಾಡಿದ ಉಪಕಾರವನ್ನು ಅವರು ಎಂದಿಗೂ ಮರೆಯಲಿಲ್ಲ.
ಇದನ್ನೂ ಓದಿ| ರಾಜಮಾರ್ಗ ಅಂಕಣ | ಆ ಕನ್ನಡಿಗ ನ್ಯಾಯಮೂರ್ತಿ ಸಿಡಿದರೆ ಕೋರ್ಟು ಕಟ್ಟಡವೇ ನಡುಗುತ್ತಿತ್ತು!
ಇದನ್ನೂ ಓದಿ| ರಾಜಮಾರ್ಗ ಅಂಕಣ | ಅವರು ಹಾಡುತ್ತಿದ್ದರೆ ಮೈಯ ನೋವೆಲ್ಲ ಕಣ್ಣೀರಾಗಿ ಹರಿಯುತ್ತಿತ್ತು!