Site icon Vistara News

ರಸ್ತೆ ಜಗಳ ಪ್ರಕರಣ: ಕೊನೆಗೂ ಕೋರ್ಟ್‌ಗೆ ಶರಣಾದ ಕಾಂಗ್ರೆಸ್‌ ನಾಯಕ ಸಿಧು

Navjot Singh Sidhu

ನವದೆಹಲಿ: 1988ರಲ್ಲಿ ನಡೆದಿದ್ದ ರಸ್ತೆ ಜಗಳ (Road Rage Case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು ಇಂದು ಜೈಲು ಸೇರಿದ್ದಾರೆ. ಮೂವತ್ನಾಲ್ಕು ವರ್ಷದ ಹಿಂದೆ ನಡೆದಿದ್ದ ರಸ್ತೆ ಜಗಳ ಪ್ರಕರಣದಲ್ಲಿ ಸಿಧು ಅವರಿಗೆ ಒಂದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಮೇ 19ರಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಶರಣಾಗಲು ಕಾಲಾವಕಾಶ ಬೇಕು. ಆರೋಗ್ಯ ಸಮಸ್ಯೆಯಿರುವುದರಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ನವಜೋತ್‌ ಸಿಂಗ್‌ ಸಿಧು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಕಾಲಾವಕಾಶ ಪಡೆಯಲು ವಿಫಲರಾದ ಅವರಿಂದು ಸಂಜೆ 4ಗಂಟೆ ಹೊತ್ತಿಗೆ ಪಟಿಯಾಲಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಅಮಿತ್‌ ಮಲ್ಹಾನ್‌ ಎದುರು ಶರಣಾದರು.

ಅಲ್ಲಿಂದ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಪಟಿಯಾಲಾದ ಮಾತಾ ಕೌಸಲ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ಪ್ರಕ್ರಿಯೆಗಳೂ ಮುಗಿದ ಬಳಿಕ ಸಿಧುರನ್ನು ಪಟಿಯಾಲಾ ಸೆಂಟ್ರಲ್‌ ಜೈಲಿಗೆ ಕಳಿಸಲಾಗುತ್ತದೆ ಎಂದು ಹೇಳಲಾಗಿದೆ. ಯಾಕೆಂದರೆ ಇಂದು ಬೆಳಗ್ಗೆ ಪಂಜಾಬ್‌ನ ಹೆಚ್ಚುವರಿ ಡೈರೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ವೇರಿಂದರ್‌ ಕುಮಾರ್‌ ಅವರು ಸೆಂಟ್ರಲ್‌ ಜೈಲಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಆದರೆ ಇದಕ್ಕೂ ಸಿಧು ಜೈಲಿಗೆ ಬರುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಗಳು ಇಲ್ಲಿಗೆ ಆಗಾಗ ಬಂದು ಭದ್ರತೆ ಪರಿಶೀಲನೆ ಮಾಡುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

1988ರಲ್ಲಿ ಸಿಧು ಮತ್ತು ಅವರ ಸಹಚರನೊಬ್ಬ ಸೇರಿ ಪಟಿಯಾಲಾದ ಪಾರ್ಕಿಂಗ್‌ ಸ್ಥಳದಲ್ಲಿ 65ವರ್ಷದ ಗುರ್ನಾಮ್‌ ಸಿಂಗ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಇದು. ಅಂದು ಸಿಧು ಅತಿರೇಕವಾಗಿ ವರ್ತಿಸಿ, ಗುರ್ನಾಮ್‌ ತಲೆಗೆ ಏಟು ಹೊಡೆದಿದ್ದರು. ಗುರ್ನಾಮ್‌ ಆ ಕ್ಷಣಕ್ಕೆ ಸಾಯದೇ ಇದ್ದರೂ ಸ್ವಲ್ಪ ದಿನಗಳಲ್ಲೇ ಮೃತಪಟ್ಟಿದ್ದರು. ನಂತರ ಅವರ ಕುಟುಂಬ ನವಜೋತ್‌ ಸಿಂಗ್‌ ಸಿಧು ವಿರುದ್ಧ ಕೋರ್ಟ್‌ ಮೆಟ್ಟಿಲೇರಿತ್ತು. ಈ ಕೇಸ್‌ಗೆ ಸಂಬಂಧಪಟ್ಟಂತೆ ಬರೋಬ್ಬರಿ 34ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ

ಇದನ್ನೂ ಓದಿ: ರಸ್ತೆ ಜಗಳ ಪ್ರಕರಣ: ಕೊನೆಗೂ ಕೋರ್ಟ್‌ಗೆ ಶರಣಾದ ಕಾಂಗ್ರೆಸ್‌ ನಾಯಕ ಸಿಧು

Exit mobile version