ನವದೆಹಲಿ: ರಾಜ್ಯ ಸಭೆ ಕಲಾಪಕ್ಕೆ ಮೊದಲ ದಿನವೇ ವಿಘ್ನ ಎದುರಾಗಿದೆ. ಇಂದು ಬೆಳಗ್ಗೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಗದ್ದಲ ಎಬ್ಬಿಸಿದ್ದಾರೆ. ಜಿಎಸ್ಟಿ ಮತ್ತು ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ, ಅಗ್ನಿಪಥ್ ಯೋಜನೆ ಸೇರಿ ಹಲವು ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಕಲಾಪ ಶುರುವಾಗಿ ಕೆಲವೇ ನಿಮಿಷದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಹೀಗಾಗಿ ರಾಜ್ಯಸಭೆ ಕಲಾಪವನ್ನು ನಾಳೆ (ಜುಲೈ 19) ಬೆಳಗ್ಗೆ 11ಗಂಟೆವರೆಗೆ ಮುಂದೂಡಲಾಗಿದೆ.
ಇಂದು ರಾಜ್ಯಸಭೆಯಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾತನಾಡಿದ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ, ಉಳಿದೆಲ್ಲ ವಿಷಯಗಳೂ ಪಕ್ಕಕ್ಕಿರಲಿ. ಮೊದಲಿಗೆ ಅಗ್ನಿಪಥ್ ಬಗ್ಗೆ ಚರ್ಚೆ ನಡೆಸುವಂತೆ ಆಗ್ರಹಿಸಿದರು. ಹಾಗೇ, ಇನ್ನೊಬ್ಬ ಸಂಸದ ಶಕ್ತಿಸಿಂಹ್ ಗೋಹಿಲ್ ಕೂಡ ಅಗ್ನಿಪಥ್ ಬಗ್ಗೆಯೇ ಧ್ವನಿ ಎತ್ತಿ, ಕೂಡಲೇ ಈ ಯೋಜನೆ ವಾಪಸ್ ಪಡೆಯಲು ಒತ್ತಾಯಿಸಿದರು. ಅದಾದ ನಂತರ ಬೆಲೆ ಏರಿಕೆ, ಜಿಎಸ್ಟಿ ಹೆಚ್ಚಳದ ಗಲಾಟೆ ಪ್ರಾರಂಭವಾಯಿತು. ಬಳಿಕ ಮಾತನಾಡಿದ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು, ʼಕೆಲವರು ಸದನದಲ್ಲಿ ಕಲಾಪಕ್ಕೆ ಅವಕಾಶ ಕೊಡಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದಾರೆ. ಈ ಪ್ರತಿಭಟನೆ, ಗಲಾಟೆಗಳು ಅಡ್ಡಿಯಾಗುತ್ತಿವೆ. ಹಾಗೇ, ಇಂದು ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಸದಸ್ಯರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಕಲಾಪವನ್ನು ನಾಳೆಗೆ ಮುಂದೂಡುತ್ತಿದ್ದೇನೆ ಎಂದು ಹೇಳಿದರು.
ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ, ಯುಎಇ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಕೀನ್ಯಾ ಮಾಜಿ ಅಧ್ಯಕ್ಷ ಮ್ವೈ ಕಿಬಾಕಿ ಅವರಿಗೆ ಗೌರವ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಗೇ, ಮೃತ ರಾಜ್ಯಸಭಾ ಸದಸ್ಯ ಕಿಶೋರ್ ಕುಮಾರ್ ಮೊಹಂತಿ, ರಾಬರ್ಟ್ ಖರ್ಶಿಯಿಂಗ್, ಕೆ.ಕೆ.ವೀರಪ್ಪನ್ ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರಿಗೂ ಸಂತಾಪ ಸೂಚಿಸಲಾಯಿತು.
ಲೋಕಸಭೆಯಲ್ಲೂ ಹೀಗೇ ಆಯ್ತು
ಲೋಕಸಭೆ ಕಲಾಪ ಕೂಡ ಮಂಗಳವಾರ ಬೆಳಗ್ಗೆಗೆ ಮುಂದೂಡಲ್ಪಟ್ಟಿದೆ. ಇಂದು ಬೆಳಗ್ಗೆ 11ಗಂಟೆಗೆ ಕಲಾಪ ಶುರುವಾಗಿ ಕೆಲವೇ ಹೊತ್ತಲ್ಲಿ, ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿತ್ತು. ರಾಷ್ಟ್ರಪತಿ ಚುನಾವಣೆಗೆ ಸಂಸದರೆಲ್ಲ ಮತದಾನ ಮಾಡಲು ಹೋಗಬೇಕಾಗಿದ್ದರಿಂದ ಮುಂದೂಡಲಾಗಿತ್ತು. ಆದರೆ 2ಗಂಟೆಗೆ ಕಲಾಪ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಸೇರಿ, ವಿವಿಧ ಪ್ರತಿಪಕ್ಷಗಳ ನಾಯಕರು ಗಲಾಟೆ ಶುರು ಮಾಡಿದರು. ಹಣದುಬ್ಬರ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಕೇಂದ್ರದ ವಿರುದ್ಧ ಘೋಷಣೆ ಕೂಗಿದ್ದಾರೆ. ಕಲಾಪ ನಡೆಸಲು ಸಾಧ್ಯವಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗುತ್ತಿದ್ದಂತೆ ಸ್ಪೀಕರ್ ಓಂಬಿರ್ಲಾ ಕಲಾಪ ಮುಂದೂಡಿ ಆದೇಶಿಸಿದರು. ಅಧಿವೇಶನದ ಮೊದಲ ದಿನವೇ ಆಮ್ ಆದ್ಮಿ ಪಕ್ಷದ ಸಂಸದರು ಸಂಸತ್ ಭವನದ ಎದುರು ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಜಾಗೇಶ್ ಅಲ್ಲ ಜಗ್ಗೇಶ್ ಎಂದು ಸರಿಪಡಿಸಿದ ವೆಂಕಯ್ಯ ನಾಯ್ಡು: ರಾಜ್ಯಸಭೆಯಲ್ಲಿ ಸ್ವಾರಸ್ಯ