Site icon Vistara News

ಸ್ಮೃತಿ ಇರಾನಿ ಪುತ್ರಿ ವಿರುದ್ಧ ಆರೋಪ ಮಾಡಿದ್ದ ಮೂವರು ಕಾಂಗ್ರೆಸ್‌ ನಾಯಕರಿಗೆ ಹೈಕೋರ್ಟ್‌ ಸಮನ್ಸ್‌

Smriti Irani

ನವ ದೆಹಲಿ: ಸ್ಮೃತಿ ಇರಾನಿ ಪುತ್ರಿ ಝೋಯಿಶ್‌ ಗೋವಾದಲ್ಲಿ ಬಾರ್‌ & ರೆಸ್ಟೋರೆಂಟ್‌ವೊಂದನ್ನು ನಡೆಸುತ್ತಿದ್ದು, ಅದರ ಪರವಾನಗಿ ನಕಲಿ ಎಂದು ಆರೋಪ ಮಾಡಿದ್ದಲ್ಲದೆ, ವಿವಿಧ ಟ್ವೀಟ್‌ಗಳನ್ನು ಮಾಡಿದ್ದ ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್‌, ಪವನ್‌ ಖೇರಾ, ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್‌ ಸಮನ್ಸ್‌ ನೀಡಿದೆ. ಹಾಗೇ, ಕೇಸ್‌ನ ವಿಚಾರಣೆಯನ್ನು ಆಗಸ್ಟ್‌ 18ಕ್ಕೆ ಮುಂದೂಡಿದೆ. ಅಂದು ಈ ಮೂವರೂ ನಾಯಕರು ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿದೆ. ಅಂದಹಾಗೇ, ಪುತ್ರಿಯ ಬಗ್ಗೆ ಸಲ್ಲದ ಆರೋಪ ಮಾಡಿ, ಅವಹೇಳನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಸಚಿವೆ ಸ್ಮೃತಿ ಇರಾನಿ 2 ಕೋಟಿ ರೂಪಾಯಿಯ ಸಿವಿಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ನ್ಯಾಯಮೂರ್ತಿ ಮಿನಿ ಪುಷ್ಕರಣ ನೇತೃತ್ವದ ಪೀಠ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇದೀಗ ಮೂವರೂ ನಾಯಕರಿಗೆ ಹೈಕೋರ್ಟ್‌ ನೋಟಿಸ್‌ ನೀಡಿ, ʼಸ್ಮೃತಿ ಇರಾನಿ ಮಗಳ ಬಗ್ಗೆ ಮಾಡಿದ ಟ್ವೀಟ್‌ಗಳನ್ನು ಇನ್ನು 24ಗಂಟೆಯಲ್ಲಿ ಡಿಲೀಟ್‌ ಮಾಡಬೇಕು. ಒಂದೊಮ್ಮೆ ಅವರು ಮಾಡದೆ ಇದ್ದರೆ, ಟ್ವಿಟರ್‌ ಮಾಡಲಿದೆ ಎಂದು ಹೇಳಿದೆ. ʼಪ್ರಕರಣದ ವಿಚಾರಣೆಯನ್ನು ಮುಂದೂಡುತ್ತಿದ್ದೇವೆ. ಆದರೆ ಅರ್ಜಿದಾರರ ಪುತ್ರಿ ವಿರುದ್ಧ ಆರೋಪ ಮಾಡಿದ್ದ ವಿಡಿಯೋವನ್ನು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ಗಳಲ್ಲಿ ಶೇರ್‌ ಮಾಡಲಾಗಿದ್ದು, ಅವುಗಳನ್ನೆಲ್ಲ ಕೂಡಲೇ ಡಿಲೀಟ್‌ ಮಾಡಬೇಕು. ಆರೋಪಕ್ಕೆ ಪೂರಕವಾಗಿ ಪೋಸ್ಟ್‌ ಮಾಡಲಾಗಿದ್ದ ತಿರುಚಿದ ಫೋಟೋಗಳು, ಸಂದರ್ಶನದ ವಿಡಿಯೋಗಳನ್ನೂ ಕೂಡ ಸೋಷಿಯಲ್‌ ಮೀಡಿಯಾಗಳಿಂದ ತೆಗೆದುಹಾಕಬೇಕುʼ ಎಂದು ಕೋರ್ಟ್‌ ಸೂಚಿಸಿದೆ.

ದೆಹಲಿ ಹೈಕೋರ್ಟ್‌ನಿಂದ ತಮಗೆ ನೋಟಿಸ್‌ ಬಂದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿ, ʼನಾವು ಸ್ಮೃತಿ ಇರಾನಿಯವರ ನೋಟಿಸ್‌ಗೆ ಕಾನೂನು ಪ್ರಕಾರವೇ ಉತ್ತರಿಸುತ್ತೇವೆ. ಕೋರ್ಟ್‌ ಎದುರು ನಮ್ಮ ದಾಖಲೆಗಳನ್ನು ಪ್ರಸ್ತುತ ಪಡಿಸುತ್ತೇವೆʼ ಎಂದಿದ್ದಾರೆ.

ಕಾಂಗ್ರೆಸ್‌ ಮಾಡಿದ ಆರೋಪ ಏನು?

ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಮತ್ತು ಜೈರಾಮ್‌ ರಮೇಶ್ ಅವರು ಇತ್ತೀಚೆಗೆ ಒಂದು ಪತ್ರಿಕಾಗೋಷ್ಠಿ ನಡೆಸಿ, ಇರಾನಿ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದರು. ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ನಡೆಸುತ್ತಿರುವ ರೆಸ್ಟೋರೆಂಟ್‌ ನಕಲಿ ಲೈಸೆನ್ಸ್‌ ಹೊಂದಿದೆ. ಇದು ಗಂಭೀರವಾದ ಅಪರಾಧವಾಗಿದ್ದು, ಈ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಚಿವೆ ಸ್ಮೃತಿ ಇರಾನಿಯ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ತಮ್ಮ ಮಾತಿಗೆ ಪೂರಕವಾಗಿ ಅವರು ಒಂದು ಶೋಕಾಸ್‌ ನೋಟೀಸ್‌ನ ಪ್ರತಿಯನ್ನು ಪ್ರದರ್ಶಿಸಿದರು. ಇದು ಗೋವಾದ ಎಕ್ಸೈಸ್‌ ಕಮಿಷನರ್‌ ನಾರಾಯಣ ಎಂ. ಗಾಡ್‌ ಎಂಬವರು ಜುಲೈ 21ರಂದು ರೆಸ್ಟೋರೆಂಟ್‌ಗೆ ನೀಡಿದ್ದ ಶೋಕಾಸ್‌ ನೋಟೀಸ್.‌ ಐರೆಸ್‌ ರೋಡ್ರಿಗಸ್‌ ಎಂಬ ವಕೀಲರು ಕೊಟ್ಟ ದೂರಿನ ಮೇರೆಗೆ ನೀಡಲಾದ ಶೋಕಾಸ್‌ ನೋಟೀಸ್‌ ಅದಾಗಿತ್ತು.

ಇದನ್ನೂ ಓದಿ: ವಿಸ್ತಾರ Explainer | ಸ್ಮೃತಿ ಇರಾನಿ ಮಗಳು ಝೋಯಿಶ್‌ ಹಾಗೂ ಗೋವಾ ರೆಸ್ಟೋರೆಂಟ್‌: ಏನಿದು ವಿವಾದ?

Exit mobile version