Site icon Vistara News

ಹಸುವಿನ ಸಗಣಿ ಲೇಪನವಾದ ಮನೆಗಳ ಮೇಲೆ ಪರಮಾಣು ವಿಕಿರಣವೂ ಪ್ರಭಾವ ಬೀರೋದಿಲ್ಲ ಎಂದ ಗುಜರಾತ್​ ನ್ಯಾಯಾಧೀಶ

Cow Dung Covered housed not Affected by Atomic Radiation

ಗಾಂಧಿನಗರ: ಗೋವುಗಳು ಪೂಜನೀಯ, ಬಹುಪಯೋಗಿ. ಅವುಗಳ ಸಗಣಿ, ಮೂತ್ರಕ್ಕೂ ಅಪಾರ ಮನ್ನಣೆಯಿದೆ ಎಂಬುದನ್ನು ನಮ್ಮ ದೇಶದ ಪರಂಪರೆ ಹೇಳಿದೆ. ಈ ಕಾಲದಲ್ಲೂ ಅನೇಕಾನೇಕರು ಅದನ್ನು ಅನುಮೋದಿಸುತ್ತಾರೆ. ಈಗ ಗುಜರಾತ್​​ನ ತಾಪಿ ಜಿಲ್ಲೆಯ ಸೆಷನ್ಸ್​​ ಕೋರ್ಟ್​ ನ್ಯಾಯಾಧೀಶರೊಬ್ಬರೂ ಕೂಡ ಗೋವಿನ ಮಹತ್ವ ಸಾರಿದ್ದಾರೆ.

ಗುಜರಾತ್​​ನಿಂದ ಮಹಾರಾಷ್ಟ್ರಕ್ಕೆ ಹಸುಗಳನ್ನು ಮತ್ತು ಹೋರಿಗಳನ್ನು, ಕೊಲ್ಲುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಸಾಗಣೆ ಮಾಡಿ, ಸಿಕ್ಕಿಬಿದ್ದ 22 ವರ್ಷದ ಯುವಕನ ಕೇಸ್​​ನ್ನು ವಿಚಾರಣೆ ನಡೆಸುವ ವೇಳೆ ಹಸುಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ನ್ಯಾಯಾಧೀಶ ಸಮೀರ್​ ವ್ಯಾಸ ‘ಗೋವು ನಮ್ಮ ತಾಯಿ. ಹಸುಗಳ ಸಗಣಿಯಿಂದ ನಿರ್ಮಾಣವಾಗಿರುವ ಮನೆಗಳು ಪರಮಾಣು ವಿಕಿರಣದ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂಬುದನ್ನು ವಿಜ್ಞಾನವೂ ಒಪ್ಪುತ್ತದೆ. ಅಷ್ಟೇ ಅಲ್ಲ, ಗೋಮೂತ್ರಕ್ಕೂ ಕೂಡ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ’ ಎಂದು ಹೇಳಿದ್ದಾರೆ. ಅಂದರೆ ಮನೆಗಳ ಗೋಡೆಗಳಿಗೆಲ್ಲ ಹಸುವಿನ ಸಗಣಿ ಲೇಪನ ಮಾಡಿದರೆ, ಮೇಲ್ಛಾವಣಿಯ ಮೇಲೂ ಸಗಣಿ ಬೆರಣಿಗಳನ್ನೆಲ್ಲ ಹಾಕಿಟ್ಟರೆ ಅಂಥ ಮನೆಗಳ ಮೇಲೆ ಪರಮಾಣು ವಿಕಿರಣಗಳೂ ಪ್ರಭಾವ ಬೀರುವುದಿಲ್ಲ ಎಂಬರ್ಥದಲ್ಲಿ ನ್ಯಾಯಾಧೀಶರು ಈ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: RSS Chief Bhagwat | ಮುಸ್ಲಿಮ್ ಪ್ರಮುಖರ ಜತೆ ಭಾಗವತ್! ಕಾಫಿರ್, ಗೋಹತ್ಯೆ, ಜಿಹಾದಿ, ಪಾಕಿಸ್ತಾನಿ ಇತ್ಯಾದಿ ಚರ್ಚೆ

ಹಸುವಿನ ರಕ್ತ ಭೂಮಿ ಮೇಲೆ ಬೀಳುವುದು (ಗೋವುಗಳ ಹತ್ಯೆ ನಿಲ್ಲುವುದೋ) ನಿಲ್ಲುತ್ತದೆಯೋ, ಆಗಲೇ ಈ ಭೂಮಿ ಮೇಲಿನ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ. ಗೋಹತ್ಯೆ ನಿಷೇಧದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ವಧೆ ಮಾತ್ರ ಸ್ಥಗಿತವಾಗುತ್ತಿಲ್ಲ. ಪ್ರತಿದಿನವೂ ಹಸುಗಳ ಹತ್ಯೆ ನಡೆಯುತ್ತಲೇ ಇರುತ್ತದೆ. ಇದು ನಿಜಕ್ಕೂ ಸುಸಂಸ್ಕೃತ ಸಮಾಜಕ್ಕೆ ಅವಮಾನ’ ಎಂದೂ ನ್ಯಾಯಾಧೀಶ ಸಮೀರ್​ ವ್ಯಾಸ ಅಭಿಪ್ರಾಯಪಟ್ಟಿದ್ದಾರೆ.

Exit mobile version