ತಿರುವನಂತಪುರ: ಕೇರಳದ ಕೊಲ್ಲಂನಲ್ಲಿರುವ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಆಫ್ ಟೆಕ್ನಾಲಜಿ ಕೇಂದ್ರದಲ್ಲಿ ನೀಟ್ (ವೈದ್ಯಕೀಯ ಪ್ರವೇಶ ಪರೀಕ್ಷೆ) ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿಯರಲ್ಲಿ ಶೇ.90ರಷ್ಟು ಹುಡುಗಿಯರಿಗೆ ಮೇಲ್ವಿಚಾರಕರು ಒಳ ಉಡುಪು ಬಿಚ್ಚಿಸಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಹೋಗಿದ್ದ ಪರೀಕ್ಷಾರ್ಥಿಯೊಬ್ಬಳ ತಂದೆ ಕೊಟ್ಟಾರಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬೆನ್ನಲ್ಲೇ ಪ್ರಕರಣ ದೊಡ್ಡಮಟ್ಟದ ಸದ್ದು ಮಾಡಿದೆ.
ಈಗ ವಿವಾದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರತಿಕ್ರಿಯೆ ನೀಡಿದೆ. ಕೇರಳದ ಕೊಲ್ಲಂನ ಪರೀಕ್ಷಾ ಕೇಂದ್ರ ಸೇರಿ ಯಾವುದೇ ಕೇಂದ್ರದಲ್ಲೂ ಇಂಥ ಕೃತ್ಯ ನಡೆದಿಲ್ಲ. ಯಾವ ವಿದ್ಯಾರ್ಥಿನಿಯರ ಒಳ ಉಡುಪನ್ನೂ ಬಿಚ್ಚಿಸಿಲ್ಲ. ಅವರಿಗೆ ಮುಜುಗರ, ಮಾನಸಿಕ ಹಿಂಸೆ ನೀಡಿಲ್ಲ ಎಂದು ಎನ್‌ಟಿಎ ಹೇಳಿಕೆ ಬಿಡುಗಡೆ ಮಾಡಿದೆ. ʼಹಾಗೇನಾದರೂ ಇದ್ದಿದ್ದರೆ ಪರೀಕ್ಷೆ ಮುಗಿದ ತಕ್ಷಣವೇ ಒಬ್ಬರಾದರೂ ದೂರು ನೀಡುತ್ತಿದ್ದರು ಅಥವಾ ಹೀಗೆ ಒಳ ಉಡುಪು ಬಿಚ್ಚಿ ಎಂದು ಹೇಳಿದಾಗಲೇ ಧ್ವನಿ ಎತ್ತುತ್ತಿದ್ದರು. ನಮಗೆ ಬಂದ ಮಾಹಿತಿಯ ಪ್ರಕಾರ ಯಾರನ್ನೂ ಒಳ ಉಡುಪು ಬಿಚ್ಚುವಂತೆ ಕೇಳಲಾಗಿಲ್ಲ. ಈಗಲೂ ಕೂಡ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ ಹೊರತು ನಮಗೆ ಇ-ಮೇಲ್ ಆಗಲೀ, ದೂರಾಗಲೀ ಬಂದಿಲ್ಲ. ಹಾಗಾಗಿ ಇದೊಂದು ದುರುದ್ದೇಶದಿಂದ ಕೂಡಿದ ದೂರುʼ ಎಂದು ಎನ್‌ಟಿಎ ತಿಳಿಸಿದೆ.
ಇದನ್ನೂ ಓದಿ: Neet Exam 2022 | ನೀಟ್ ಪರೀಕ್ಷೆಗೆ ಕ್ಷಣಗಣನೆ; ರಾಜ್ಯದ 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ
ಹೀಗೊಂದು ದೂರು ನೀಡಲಾಗಿದೆ ಎಂದು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದಂತೆ ಆ ನಿರ್ದಿಷ್ಠ ಪರೀಕ್ಷಾ ಕೇಂದ್ರದ ಅಧೀಕ್ಷಕ ಮತ್ತು ಸ್ವತಂತ್ರ ವೀಕ್ಷಕ (ನಗರ ಸಂಯೋಜಕ)ರ ಬಳಿ ವರದಿ ಕೇಳಿದ್ದೇವೆ. ಅವರೂ ಕೂಡ ಇಂಥದ್ಯಾವುದೇ ಪ್ರಕರಣ ನಡೆದಿಲ್ಲ ಎಂದೇ ಹೇಳಿದ್ದಾರೆ ಎಂದೂ ಪರೀಕ್ಷಾ ಸಂಸ್ಥೆ ತಿಳಿಸಿದೆ. ನೀಟ್ ಪರೀಕ್ಷಾರ್ಥಿಗಳಿಗೆ ವಸ್ತ್ರ ಸಂಹಿತೆ ನಿಗದಿ ಮಾಡಿದ್ದು ಪರೀಕ್ಷೆ ಪಾರದರ್ಶಕವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಯಲಿ ಎಂಬ ಕಾರಣಕ್ಕೆ ಹೊರತು, ಇನ್ಯಾವುದಕ್ಕೂ ಅಲ್ಲ. ಲಿಂಗ, ಧಾರ್ಮಿಕ, ಸಾಂಸ್ಕೃತಿಕ, ಪ್ರಾದೇಶಿಕ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು, ಅದ್ಯಾವುದಕ್ಕೂ ಅವಮಾನ ಆಗದ ರೀತಿಯಲ್ಲಿ ವಸ್ತ್ರ ಸಂಹಿತೆ ರೂಪಿಸಿದ್ದೇವೆ. ಹಾಗೇ, ಪರೀಕ್ಷಾರ್ಥಿಗಳ ಬಯೋಮೆಟ್ರಿಕ್ ಪ್ರವೇಶ ಸುಲಭಗೊಳಿಸಲೂ ಕೂಡ ಇದು ಸಹಕಾರಿಯಾಗುತ್ತದೆ ಎಂದು ಎನ್‌ಟಿಎ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಇದ್ಯಾವ ಕರ್ಮ?; ನೀಟ್ ಪರೀಕ್ಷೆ ಬರೆಯಲು ಹೋದ ಹುಡುಗಿಯರ ಬ್ರಾ ಬಿಚ್ಚಿಸಿದ ಮೇಲ್ವಿಚಾರಕರು