ಕೋಲ್ಕತ್ತ: ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ನೇಮಕಾತಿ ಹಗರಣದಲ್ಲಿ ಆರೋಪಿಯಾಗಿ ಇ.ಡಿ.ಯಿಂದ ಬಂಧಿತರಾಗಿರುವ ಸಚಿವ ಪಾರ್ಥ ಚಟರ್ಜಿಗೆ ಯಾವ ಎದೆನೋವೂ ಇಲ್ಲ, ಅಸ್ವಸ್ಥೆಯೂ ಇಲ್ಲ. ಅವರು ನಾಟಕವಾಡಿದ್ದಾರೆ ಎಂದು ಇ.ಡಿ. ಅಧಿಕಾರಿಗಳು ಕೋಲ್ಕತ್ತ ಹೈಕೋರ್ಟ್ನ ಏಕ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದೆ. ʼಪಾರ್ಥ ಚಟರ್ಜಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ನಾಟಕ ಮಾಡುತ್ತಿದ್ದಾರೆ. ಚಿಕಿತ್ಸೆಗೆಂದು ಎಸ್ಎಸ್ಕೆಎಂ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿ ದೊಡ್ಡ ಡಾನ್ನಂತೆ ವರ್ತಿಸುತ್ತಿದ್ದಾರೆ ಎಂದೂ ಇ.ಡಿ. ಹೇಳಿದೆ.
ಶುಕ್ರವಾರದಿಂದ ಪಾರ್ಥ ಚಟರ್ಜಿ ಮತ್ತು ಅವರ ಆಪ್ತರ ಮನೆಯನ್ನು ರೇಡ್ ಮಾಡುತ್ತಿದ್ದ ಇ.ಡಿ. ಶನಿವಾರ ಪಾರ್ಥ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಬಂಧಿಸಿತ್ತು. ಆದರೆ ಪಾರ್ಥ ಚಟರ್ಜಿ ತಮ್ಮ ಆರೋಗ್ಯ ಕೈಕೊಟ್ಟಿದೆ. ಎದೆ ನೋಯಿತ್ತಿರುವ ಕಾರಣ ಆಸ್ಪತ್ರೆಗೆ ದಾಖಲಾಗಲು ಅವಕಾಶ ಕೋಡಬೇಕು ಎಂದು ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದಕ್ಕೆ ಆ ನ್ಯಾಯಾಲಯ ಒಪ್ಪಿಗೆ ಕೊಟ್ಟಿತ್ತು. ಆದರೆ ಇದರ ವಿರುದ್ಧ ಇ.ಡಿ. ಹೈಕೋರ್ಟ್ ಮೆಟ್ಟಿಲೇರಿದೆ. ನಾವು ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದೇವೆ. ಆದರೆ ಅಲ್ಲಿ ಅಡ್ಮಿಟ್ ಆಗುವ ಅವಶ್ಯಕತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ʼನ್ಯಾಯಾಲಯ ಈ ಪ್ರಕರಣವನ್ನು ತುಂಬ ಸ್ಥೂಲವಾಗಿ ನೋಡಬೇಕು. ಅತ್ಯುನ್ನತ ಮಟ್ಟದ ಭ್ರಷ್ಟಾಚಾರದ ಕೇಸ್ ಇದು. ಹಣ ಪಡೆದು ಅನರ್ಹರಿಗೆ ಉದ್ಯೋಗ ಕೊಡಲಾಗಿದೆ. ಇದರಿಂದಾಗಿ ಅರ್ಹರು ಕೆಲವರು ಪ್ರಾಣ ಬಲಿಕೊಟ್ಟಿದ್ದಾರೆ. ನಾವೀಗ ಪಾರ್ಥ ಚಟರ್ಜಿಯನ್ನು ವಿಚಾರಣೆಗೆ ಒಳಪಡಿಸಲೇಬೇಕು. ಇನ್ನು 15 ದಿನಗಳಲ್ಲಿ ಇವರ ವಿಚಾರಣೆ ನಡೆಸಬೇಕು. ಆದರೆ ಅದರಿಂದ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡುತ್ತಿದ್ದಾರೆ. ಹಾಗಾಗಿ ನಾವು ವಿಚಾರಣೆ ನಡೆಸಲು ಅವಕಾಶ ಮಾಡಿಕೊಡಬೇಕುʼ ಎಂದು ಇ.ಡಿ. ತಿಳಿಸಿದೆ.
ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಅಕ್ರಮ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇ.ಡಿ. ತೀವ್ರ ತನಿಖೆ ನಡೆಸುತ್ತಿದೆ. ಈಗಾಗಲೇ ಅರ್ಪಿತಾ ಮುಖರ್ಜಿ ಬಂಧನವಾಗಿದ್ದು, ಸಚಿವರ ಇನ್ನೊಬ್ಬ ಆಪ್ತೆ, ಯೂನಿವರ್ಸಿಟಿಯೊಂದರ ಪ್ರಾಧ್ಯಾಪಕಿ ಮೊನಾಲಿಸಾ ದಾಸ್ ಮೇಲೆ ಕೂಡ ಇ.ಡಿ. ಕಣ್ಗಾವಲು ಇಟ್ಟಿದೆ.
ಇದನ್ನೂ ಓದಿ: ಬಂಧಿತ ಸಚಿವ ಪಾರ್ಥ ಚಟರ್ಜಿ ಇನ್ನೊಬ್ಬ ಆಪ್ತೆ ಮೊನಾಲಿಸಾ ದಾಸ್ಗೂ ಇ ಡಿ ಸಂಕಷ್ಟ? ಯಾರೀಕೆ?