Site icon Vistara News

ಇದು ಅಮೃತಕಾಲವೆಂದ ರಾಹುಲ್‌ ಗಾಂಧಿ; ರೂಪಾಯಿ ಮೌಲ್ಯ ಕುಸಿದಿದ್ದಕ್ಕೆ ಪ್ರಧಾನಿ ಮೋದಿ ವಿರುದ್ಧ ಟೀಕೆ

Rahul Gandhi

ನವ ದೆಹಲಿ: ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 80ಕ್ಕೆ ಕುಸಿದ ಬೆನ್ನಲ್ಲೇ ಕಾಂಗ್ರೆಸ್‌, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಳೆದ ಕೆಲವು ದಿನಗಳಿಂದಲೂ ಡಾಲರ್‌ ಎದುರು ಕರೆನ್ಸಿ ಮೌಲ್ಯ ಕಡಿಮೆಯಾಗುತ್ತಿದೆ. ಹೀಗೆ ರೂಪಾಯಿ ಮುಕ್ತ ಪತನಗೊಳ್ಳುತ್ತಿದ್ದರೂ ಸರ್ಕಾರ ಮೌನವಾಗಿದೆ. ಆದರೆ ಈ ರೂಪಾಯಿ ಕುಸಿತ ಸಾಮಾನ್ಯ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌, ʼಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ರೂಪಾಯಿಗೆ ಕೆಡುಕಾಗುತ್ತಿದೆʼ ಎಂದು ಹೇಳಿದೆ.

ನರೇಂದ್ರ ಮೋದಿ ಹಿಂದೆ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಇದೇ ರೂಪಾಯಿ ಕುಸಿತದ ಬಗ್ಗೆ ಮಾತನಾಡುವಾಗ ಯುಪಿಎ ಸರ್ಕಾರವನ್ನು ವ್ಯಂಗ್ಯಮಾಡಿದ್ದನ್ನು ನೆನಪಿಸಿ, ಉಲ್ಲೇಖಿಸಿದ ಕಾಂಗ್ರೆಸ್‌, ʼಅಂದು ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಹೇಳಿದ ಮಾತುಗಳು ನೆನಪಾಗುತ್ತಿವೆ. ಪ್ರಧಾನಮಂತ್ರಿಯ ಪ್ರತಿಷ್ಠೆಯೆಂಬುದು ರೂಪಾಯಿ ಕುಸಿತಕ್ಕೆ ಅಂಟಿಕೊಂಡೇ ಇರುತ್ತದೆ. ರೂಪಾಯಿ ಮೌಲ್ಯ ಕುಸಿದಷ್ಟೂ ಇತ್ತ ಪ್ರಧಾನಿಯ ವಿಶ್ವಾಸಾರ್ಹತೆ, ಘನತೆಯೂ ಕಡಿಮೆಯಾಗುತ್ತದೆ ಎಂದು ಹೇಳಿದ್ದರು. ಅದೇ ಮಾತುಗಳು ಈಗ ಅವರಿಗೇ ಅನ್ವಯ ಆಗುತ್ತವೆʼ ಎಂದು ಕಾಂಗ್ರೆಸ್‌ ಹೇಳಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ, ʼರೂಪಾಯಿ ಮೌಲ್ಯ 40 ಇದ್ದಾಗ: ಉಲ್ಲಾಸ. 50ರಲ್ಲಿ ಇದ್ದಾಗ: ಭಾರತ ಬಿಕ್ಕಟ್ಟಿನಲ್ಲಿದೆ. 60: ಐಸಿಯು. 70ಕ್ಕೆ ಕುಸಿದಾಗ: ಆತ್ಮನಿರ್ಭರ. 80ಕ್ಕೆ ಇಳಿದಾಗ ಅಮೃತ್‌ಕಾಲʼ ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಶುಕ್ರವಾರ ಟ್ವೀಟ್‌ ಮಾಡಿದ್ದ ಅವರು, ʼಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗ ರೂಪಾಯಿ ಮೌಲ್ಯ ಕುಸಿದಾಗ ದೇಶವು ಹತಾಶೆಯ ಸುಳಿಯಲ್ಲಿದೆ ಎಂದು ಹೇಳಿದ್ದಿರಿ. ಇದೇ ವಿಷಯವನ್ನು ಇಟ್ಟುಕೊಂಡು ಎಷ್ಟೆಲ್ಲ ಮಾತನಾಡಿದ್ದಿರಿ ಈಗ ಏಕೆ ರೂಪಾಯಿ ಮೌಲ್ಯ ಇಷ್ಟು ವೇಗವಾಗಿ ಕುಸಿಯುತ್ತಿದ್ದರೂ ಮೌನವಾಗಿ ಇದ್ದೀರಿ? ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿ, ಡಾಲರ್‌ ಎದುರು ರೂಪಾಯಿ ಮೌಲ್ಯ ಪತನವಾಗುತ್ತಿರುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಸರ್ಕಾರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಹೀಗೆ ರೂಪಾಯಿ ಇನ್ನೆಷ್ಟು ಪತನವಾಗುತ್ತದೆಯೋ, ಸರ್ಕಾರದ ಮೇಲಿನ ನಂಬಿಕೆಯೂ ಅಷ್ಟು ಕೆಳಮಟ್ಟಕ್ಕೆ ಹೋಗುತ್ತದೆʼ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್‌ ಮಾಡಿ, ಯುಎಸ್‌ ಡಾಲರ್‌ ಎದುರು 69ಕ್ಕೆ ಇಳಿದಿದ್ದ ರೂಪಾಯಿ ಮೌಲ್ಯವನ್ನು 2013ರಲ್ಲಿ ಯುಪಿಎ ಸರ್ಕಾರ ಕೇವಲ 4 ತಿಂಗಳಲ್ಲಿ 58ಕ್ಕೆ ಏರಿಸಿತ್ತು. ಹಾಗೇ, ಜಿಡಿಪಿ ಬೆಳವಣಿಗೆ 2012-13ರಲ್ಲಿ ಶೇ. 5.1ರಷ್ಟಿತ್ತು. ಅದನ್ನು 2013-14ರಲ್ಲಿ ನಮ್ಮ ಸರ್ಕಾರ 6.9ಕ್ಕೆ ಏರಿಸಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಚ್ಚಾ ತೈಲ ದರ ಸ್ಫೋಟ, 80 ರೂ. ಸನಿಹಕ್ಕೆ ರೂಪಾಯಿ ಮೌಲ್ಯ ಕುಸಿತ

Exit mobile version