Site icon Vistara News

ಇವು ಸ್ವತಂತ್ರ ಭಾರತದ ಸಿಂಹಗಳು; ರಾಷ್ಟ್ರ ಲಾಂಛನ ವಿವಾದಕ್ಕೆ ಪ್ರತಿಕ್ರಿಯಿಸಿದ ಅನುಪಮ್‌ ಖೇರ್‌

Anupam Kher

ನವ ದೆಹಲಿ: ಸಂಸತ್‌ ಭವನದ ರಾಷ್ಟ್ರ ಲಾಂಛನದ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಬಾಲಿವುಡ್‌ ಹಿರಿಯ ನಟ ಅನುಪಮ್‌ ಖೇರ್‌ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿರುವ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿರುವ ರಾಷ್ಟ್ರ ಲಾಂಛನದ ಒಂದು ಪುಟ್ಟ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿರುವ ಅನುಪಮ್‌ ಖೇರ್‌, ʼಪ್ರೀತಿಯ ಸಹೋದರರೇ. ಹಲ್ಲುಗಳನ್ನು ಹೊಂದಿರುವ ಸಿಂಹ ಖಂಡಿತ ಅವುಗಳನ್ನು ತೋರಿಸುತ್ತದೆ. ಅಷ್ಟಕ್ಕೂ ಈ ಸಿಂಹಗಳು ಸ್ವತಂತ್ರ ಭಾರತದ ಸಿಂಹಗಳು. ಅಗತ್ಯ ಬಿದ್ದರೆ ಆ ಸಿಂಹಗಳು ಕಚ್ಚಲೂ ಬಹುದು..!!ʼ ಎಂದು ತುಂಬ ಮಾರ್ಮಿಕವಾಗಿ ಕ್ಯಾಪ್ಷನ್‌ ಬರೆದಿದ್ದಾರೆ.

ಸೆಂಟ್ರಲ್‌ ವಿಸ್ಟಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ನೂತನ ಸಂಸತ್‌ ಭವನದ ಮೇಲಿನ ರಾಷ್ಟ್ರ ಲಾಂಛನವನ್ನು ಜುಲೈ 11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದು. ಅದು ಉದ್ಘಾಟನೆಗೊಂಡ ಬೆನ್ನಲ್ಲೇ ವಿವಾದ ಸೃಷ್ಟಿಯಾಯಿತು. ಮೂಲ ಸಾರಾನಾಥ ಲಾಂಛನಕ್ಕೂ-ಈ ಲಾಂಛನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹೊಸದಾಗಿ ರೂಪಿಸಲಾದ ಲಾಂಛನದಲ್ಲಿ ಸಿಂಹಗಳ ಹಲ್ಲುಗಳು ವಿಭಿನ್ನವಾಗಿದೆ. ಒರಿಜಿನಲ್‌ ರಾಷ್ಟ್ರ ಲಾಂಛನದ ಸಿಂಹಗಳಲ್ಲಿನ ಕೋರೆಹಲ್ಲುಗಳಿಗಿಂತಲೂ ಇಲ್ಲಿ ವ್ಯಘ್ರತೆ ಜಾಸ್ತಿಯಿದೆ ಎಂಬುದು ಕಾಂಗ್ರೆಸ್‌ ಮತ್ತು ಇತರ ಪ್ರತಿಪಕ್ಷಗಳ ಆರೋಪ. ಹೀಗೆ ಹೊಸ ಲಾಂಛನ ಖಂಡಿಸುತ್ತಿರುವವರನ್ನು ನಿರ್ದೇಶಕ ಅಗ್ನಿಹೋತ್ರಿ ಅರ್ಬನ್‌ ನಕ್ಸಲ್‌ ಎಂದು ಕರೆದಿದ್ದಾರೆ. ಈಗ ಅನುಪಮ್‌ ಖೇರ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಲಾಂಛನವನ್ನು ಕೆಳಭಾಗದಿಂದ ತೆಗೆದ ಫೋಟೋ ವೈರಲ್‌ ಆಗ್ತಿದೆ; ಶಿಲ್ಪಿ ಸುನಿಲ್‌ ಡಿಯೋರ್‌ ಸ್ಪಷ್ಟನೆ

ಓವೈಸಿ ವಾದವೇನು?
ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳಲ್ಲಿ ಸೌಮ್ಯತೆಯೇ ಇಲ್ಲ ಎಂದು ಪ್ರತಿಪಕ್ಷಗಳು ಆಕ್ಷೇಪ ಎತ್ತಿವೆ. ಈ ಮಧ್ಯೆ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್‌ ಎಂಪಿ ಅಸಾದುದ್ದೀನ್‌ ಓವೈಸಿ ಇನ್ನೊಂದು ಆರೋಪ ಮಾಡಿದ್ದಾರೆ. ʼನರೇಂದ್ರ ಮೋದಿ ಒಂದು ಸರ್ಕಾರದ ಮುಖ್ಯಸ್ಥ. ಹೀಗಿರುವಾಗ ಅವರು ಹೊಸ ಸಂಸತ್ತಿನ ಮೇಲ್ಭಾಗದಲ್ಲಿ ರಾಷ್ಟ್ರ ಲಾಂಛನ ಉದ್ಘಾಟನೆ ಮಾಡಿದ್ದು ಸಂವಿಧಾನದ ನಿಯಮ ಉಲ್ಲಂಘನೆ. ನಮ್ಮ ದೇಶದಲ್ಲಿ ಸಂಸತ್ತು, ಸರ್ಕಾರ ಮತ್ತು ನ್ಯಾಯಾಂಗಕ್ಕೆಲ್ಲ ಅದರದ್ದೇ ಆದ ಅಧಿಕಾರ ಇದೆ. ಈ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖ ಇದೆ. ಸಂಸತ್‌ ಭವನ ಎಂಬುದು ಎಂದಿಗೂ ಸರ್ಕಾರದ ಅಧೀನವಲ್ಲ. ಹೀಗಿರುವಾಗ ಅಲ್ಲಿ ನಿರ್ಮಾಣವಾದ ಲಾಂಛನವನ್ನು ಸರ್ಕಾರದ ಭಾಗವಾಗಿರುವ ಪ್ರಧಾನಮಂತ್ರಿ ಉದ್ಘಾಟನೆ ಮಾಡುವಂತಿಲ್ಲ. ಆದರೆ ನರೇಂದ್ರ ಮೋದಿ ನಿಯಮ ಉಲ್ಲಂಘಿಸಿದ್ದಾರೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂತನ ರಾಷ್ಟ್ರ ಲಾಂಛನ ವಿರೋಧಿಗಳನ್ನು ಅರ್ಬನ್‌ ನಕ್ಸಲ್ಸ್‌ ಎಂದು ಕರೆದ ವಿವೇಕ್‌ ಅಗ್ನಿಹೋತ್ರಿ

Exit mobile version