ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನಿಂದ (AJL) ಯಂಗ್ ಇಂಡಿಯಾಕ್ಕೆ ಹಸ್ತಾಂತರ ಮಾಡುವಾಗ ನಡೆದ ಎಲ್ಲ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಮೋತಿಲಾಲ್ ವೋರಾ (Motilal Vora). ಅದರಲ್ಲಿ ಅಕ್ರಮ ನಡೆದ ಬಗ್ಗೆ ನನಗೆ ವೈಯಕ್ತಿಕ ಮಾಹಿತಿ ಇಲ್ಲ ಎಂದು ರಾಹುಲ್ ಗಾಂಧಿ ಇ.ಡಿ. ಅಧಿಕಾರಿಗಳ ಎದುರು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಗ್ಗೆ ಮೋತಿ ಲಾಲ್ ವೋರಾ ಪುತ್ರ ಅರುಣ್ ವೋರಾ ಪ್ರತಿಕ್ರಿಯೆ ನೀಡಿದ್ದಾರೆ. ʼರಾಹುಲ್ ಗಾಂಧಿ ನನ್ನ ತಂದೆ ಮೋತಿಲಾಲ್ ವೋರಾ ವಿರುದ್ಧ ಇಂಥ ಆರೋಪ ಮಾಡುವ ಸಾಧ್ಯತೆ ಇಲ್ಲ. ರಾಹುಲ್ ಗಾಂಧಿ ವಿಚಾರಣೆಯೇ ಇನ್ನೂ ಮುಗಿದಿಲ್ಲ. ಈ ಹೊತ್ತಲ್ಲಿ ಇ.ಡಿ. ಮೂಲಗಳಿಂದ ಇಂಥ ಮಾಹಿತಿ ಸಾರ್ವಜನಿಕರಿಗೆ ತಲುಪಬಾರದು. ಇದೆಲ್ಲ ಆಧಾರರಹಿತ ಆರೋಪಗಳುʼ ಎಂದು ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್‌ನಿಂದ ಯಂಗ್ ಇಂಡಿಯಾಕ್ಕೆ ಹಸ್ತಾಂತರ ಮಾಡುವಾಗ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅದೇ ವಿಷಯದಲ್ಲಿ ರಾಹುಲ್ ಗಾಂಧಿಯನ್ನು ಇ.ಡಿ. ಅಧಿಕಾರಿಗಳು ಮೂರು ದಿನ ವಿಚಾರಣೆ ನಡೆಸಿದ್ದಾರೆ. ಮತ್ತೆ ಜೂ.17ಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ಕೂಡ ನೀಡಿದ್ದಾರೆ. ಆದರೆ ಈ ಮೂರು ದಿನಗಳ ವಿಚಾರಣೆ ವೇಳೆ ರಾಹುಲ್ ಗಾಂಧಿ ಎಲ್ಲವನ್ನೂ ಮೋತಿಲಾಲ್ ವೊರಾ ತಲೆಗೆ ಕಟ್ಟಿದ್ದಾರೆ ಎಂಬುದೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಮೋತಿಲಾಲ್ ವೋರಾ ಗಾಂಧಿ ಕುಟುಂಬದ ಪರಮಾಪ್ತರಾಗಿದ್ದು, ಯಂಗ್ ಇಂಡಿಯಾದಲ್ಲಿಯೂ ಪಾಲುಹೊಂದಿದ್ದರು. ಇವರೀಗ ಬದುಕಿಲ್ಲ, ಆದರೆ ಹಿಂದೊಮ್ಮೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟಿದ್ದರು. ಇನ್ನೊಂದು ಪ್ರಮುಖ ವಿಷಯವೆಂದರೆ, ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪವನ್ ಬನ್ಸಾಲ್ ಕೂಡ, ʼಇಡೀ ಹಣಕಾಸು ವ್ಯವಹಾರದ ಹೊಣೆಯನ್ನು ಮೋತಿಲಾಲ್ ವೊರಾ ಅವರೇ ಹೊತ್ತಿದ್ದರುʼ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದೀಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅರುಣ್ ವೋರಾ, ʼನನಗೆ ಮಲ್ಲಿಕಾರ್ಜುನ್ ಖರ್ಗೆ ಮತ್ತು ಪವನ್ ಬನ್ಸಾಲ್ ಬಗ್ಗೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಈ ಕೇಸ್‌ನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮೋತಿಲಾಲ್ ವೋರಾಗೆ ಗೆಲುವು ಸಿಗುತ್ತದೆ. ಈ ಮೂಲಕ ಸತ್ಯಕ್ಕೇ ಜಯ ಸಿಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್ ಮೋತಿಲಾಲ್ ವೋರಾ ತಲೆಗೆ ಕಟ್ಟಲು ರಾಹುಲ್ ಯತ್ನ!