Site icon Vistara News

ಉದ್ಧವ್‌ ಠಾಕ್ರೆ ರಾಜೀನಾಮೆ ಬೆನ್ನಲ್ಲೇ ರಾಜ್‌ ಠಾಕ್ರೆಯಿಂದ ಟ್ವೀಟ್‌; ಬರೆದ ಸಾಲುಗಳಿಗೇನು ಅರ್ಥ?

Raj Thackeray

ಮುಂಬಯಿ: ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನಗೊಂಡು, ಉದ್ಧವ್‌ ಠಾಕ್ರೆ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಅವರ ಸೋದರ ಸಂಬಂಧಿ, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್‌ಠಾಕ್ರೆ ಒಂದು ಟ್ವೀಟ್‌ ಮಾಡಿದ್ದಾರೆ. ರಾಜ್‌ ಠಾಕ್ರೆ(Raj Thackeray)ಯವರು ಸಂಬಂಧದಲ್ಲಿ ಉದ್ಧವ್‌ ಠಾಕ್ರೆಗೆ ಸಹೋದರ. ಅಂದರೆ ಉದ್ಧವ್‌ ಠಾಕ್ರೆಯವರ ತಂದೆ ಬಾಳಾ ಸಾಹೇಬ್‌ ಠಾಕ್ರೆ ಮತ್ತು ರಾಜ್‌ ಠಾಕ್ರೆ ಅಪ್ಪ ಶ್ರೀಕಾಂತ್‌ ಪ್ರಬೋಧಂಕರ್‌ ಠಾಕ್ರೆ ಸ್ವಂತ ಅಣ್ಣ-ತಮ್ಮಂದಿರು. ರಾಜ್‌ ಠಾಕ್ರೆ ಕೂಡ ಮೊದಲು ಶಿವಸೇನೆಯಲ್ಲೇ ಇದ್ದರು. ಆದರೆ ಇವರ ಮಧ್ಯೆಯ ಸಂಘರ್ಷದಿಂದ 2006ರಲ್ಲಿ ಶಿವಸೇನೆಯಿಂದ ಹೊರಬಿದ್ದು, ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಕಟ್ಟಿದರು. ಈಗಲೂ ಕೂಡ ಉದ್ಧವ್‌ ಠಾಕ್ರೆ-ರಾಜ್‌ ಠಾಕ್ರೆ ಮುನಿಸು ಮುಂದುವರಿದೇ ಇದೆ.

ಕಳೆದ 10ದಿನಗಳಿಂದ ಮಹಾರಾಷ್ಟ್ರ ಸರ್ಕಾರ ಅತಂತ್ರವಾಗಿತ್ತು. ಶಿವಸೇನೆ ಪ್ರಬಲ ನಾಯಕ ಏಕನಾಥ್‌ ಶಿಂಧೆ ಮತ್ತು ಅವರ 40ಕ್ಕೂ ಹೆಚ್ಚು ಬೆಂಬಲಿಗ ಶಾಸಕರು ಬಂಡಾಯವೆದ್ದು, ಅಂತಿಮವಾಗಿ ಜೂ.29ರಂದು ಸರ್ಕಾರ ಪತನಗೊಂಡಿತು. ಅದರ ಬೆನ್ನಲ್ಲೇ ರಾಜ್‌ ಠಾಕ್ರೆ ಟ್ವೀಟ್‌ ಮಾಡಿ, “ಯಾರೇ ಆಗಲಿ, ಅವರು ಅದೃಷ್ಟದಿಂದ ಸಿಕ್ಕಿದ್ದನ್ನೇ ತಮ್ಮ ವೈಯಕ್ತಿಕ ಸಾಧನೆ ಎಂದು ತಪ್ಪಾಗಿ ಅರ್ಥೈಸಿಕೊಂಡರೆ, ಅಲ್ಲಿಂದಲೇ ಅವರ ಅವನತಿಯೂ ಶುರುವಾಗುತ್ತದೆ” (When anyone misunderstands one’s good fortune as one’s personal accomplishment. therein begins the journey towards one’s decline) ಎಂದು ಹೇಳಿದ್ದಾರೆ.

ಟ್ವೀಟ್‌ನಲ್ಲಿ ಮಹಾರಾಷ್ಟ್ರ ರಾಜಕೀಯದ ಬಗ್ಗೆಯಾಗಲೀ, ಉದ್ಧವ್‌ ಠಾಕ್ರೆ ರಾಜೀನಾಮೆ ಕುರಿತಾಗಲಿ ರಾಜ್‌ ಠಾಕ್ರೆ ಒಂದೂ ವಾಕ್ಯ ಬರೆದಿಲ್ಲ. ಆದರೆ ಇದು ಉದ್ಧವ್‌ ಠಾಕ್ರೆಯವರಿಗೇ ಹೇಳಿದ ಮಾತುಗಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅದೃಷ್ಟದಿಂದ ಸಿಎಂ ಹುದ್ದೆಗೆ ಏರಿದವರ ಅವನತಿ ಇದು ಎಂದು ರಾಜ್‌ ಠಾಕ್ರೆ ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಟ್ವಿಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ ಪ್ರಮಾಣವಚನ ಸ್ವೀಕಾರ ಇಂದು

Exit mobile version