Site icon Vistara News

ಉಳಿದ ಧರ್ಮಗಳನ್ನೂ ಗೌರವಿಸಿ: ಇಸ್ಲಾಮಿಕ್‌ ಸಹಕಾರ ಸಂಘಟನೆಗೆ ಭಾರತ ಸರ್ಕಾರದ ಖಡಕ್‌ ಪ್ರತಿಕ್ರಿಯೆ

India Responds Organisation of Islamic Cooperation

ನವ ದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಜ್ಞಾನವಾಪಿ ಕೇಸ್‌ ಬಗ್ಗೆ ಟಿವಿ ಡಿಬೇಟ್‌ನಲ್ಲಿ ಮಾತನಾಡಲು ಹೋಗಿ ಅತ್ಯಂತ ದೊಡ್ಡ ಮಟ್ಟದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಷ್ಟ್ರದೊಳಗೆ ಬಿಜೆಪಿ ಮರ್ಯಾದಿಗೆ ಚ್ಯುತಿ ತಂದಿದ್ದಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ. ಈಗಾಗಲೇ ಬಿಜೆಪಿ ನೂಪುರ್‌ ಶರ್ಮಾರನ್ನು ಅಮಾನತು ಮಾಡುವ ಮೂಲಕ, ಅವರ ಹೇಳಿಕೆಗೂ-ನಮಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿದೆ. ಅದರೊಂದಿಗೆ, ನೂಪುರ್‌ ಶರ್ಮಾ ಹೇಳಿಕೆಯನ್ನು ಇಡೀ ದೇಶಕ್ಕೆ ತಳುಕು ಮಾಡಿ, ಟೀಕಿಸಿದ್ದ ಇಸ್ಲಾಮಿಕ್‌ ಸಹಕಾರ ಸಂಘಟನೆ (The Organisation of Islamic Cooperation -OIC)ಗೆ ಕೇಂದ್ರ ಸರ್ಕಾರ ಕಟುವಾಗಿ ತಿರುಗೇಟು ನೀಡಿದೆ.

ಇಸ್ಲಾಮಿಕ್‌ ಸಹಕಾರ ಸಂಘಟನೆಯೆಂಬುದು 57 ಮುಸ್ಲಿಂ ರಾಷ್ಟ್ರಗಳ ಒಕ್ಕೂಟವಾಗಿದ್ದು, ವಿಶ್ವಸಂಸ್ಥೆಯ ನಂತರದ ದೊಡ್ಡ ಒಕ್ಕೂಟ. ಈ ಸಂಘಟನೆ ಕೂಡ ನೂಪುರ್‌ ಶರ್ಮಾ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿತ್ತು. ʼಪ್ರವಾದಿ ಮೊಹಮ್ಮದರ ಬಗ್ಗೆ ಕೇಳಿ ಬಂದ ಟೀಕೆಗಳು ದುರುದ್ದೇಶಪೂರಿತವಾಗಿದೆ. ಭಾರತದಲ್ಲಿ ಇಸ್ಲಾಂ ವಿರುದ್ಧ ದ್ವೇಷ ಬಿತ್ತುವ ಪ್ರವೃತ್ತಿ ಹೆಚ್ಚುತ್ತಿದೆ. ಮುಸ್ಲಿಮರನ್ನು ನಿಂದಿಸಲಾಗುತ್ತಿದೆ ಮತ್ತು ಅವರನ್ನು ಹತ್ತಿಕ್ಕಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗುತ್ತಿದೆ. ಆದಷ್ಟು ಬೇಗ ವಿಶ್ವ ಸಂಸ್ಥೆ ಹಸ್ತಕ್ಷೇಪ ಮಾಡಿ ಬಗೆಹರಿಸಬೇಕುʼ ಎಂದು ಹೇಳಿತ್ತು.

ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್‌ ಶರ್ಮಾ ಬಿಜೆಪಿಯಿಂದ ಅಮಾನತು

ಇಸ್ಲಾಮಿಕ್‌ ಸಹಕಾರ ಸಂಘಟನೆಯ ಈ ಹೇಳಿಕೆಗೆ ಭಾರತ ಸರ್ಕಾರ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ʼಒಐಸಿಯಿಂದ ಭಾರತದ ಬಗ್ಗೆ ಒಂದು ಹೇಳಿಕೆ ಹೊರಬಿದ್ದಿದೆ. ತುಂಬ ಸಂಕುಚಿತ ಮನೋಭಾವದ, ಅನಗತ್ಯವಾದ ಈ ಹೇಳಿಕೆಯನ್ನು ನಾವು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಭಾರತ ಸರ್ಕಾರ ಪ್ರತಿ ಧರ್ಮವನ್ನೂ ಗೌರವಿಸುತ್ತದೆʼ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ʼಯಾರೋ ಅವರ ವೈಯಕ್ತಿಕ ದೃಷ್ಟಿಕೋನದಲ್ಲಿ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದಾಕ್ಷಣ, ಅವರು ಇಡೀ ಕೇಂದ್ರಸರ್ಕಾರ, ಇಡೀ ಭಾರತವನ್ನೇ ಪ್ರತಿನಿಧಿಸುತ್ತಿದ್ದಾರೆ ಎಂದು ಭಾವಿಸಬಾರದು. ಅನುಚಿತ ಹೇಳಿಕೆ ನೀಡಿದವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಾಗಿದೆʼ ಎಂದು ಹೇಳಿದೆ.

ಅಷ್ಟೇ ಅಲ್ಲ, ಇಸ್ಲಾಮಿಕ್‌ ಸಹಕಾರ ಸಂಘಟನೆ ಮತ್ತೆ ತನ್ನ ವಿಭಜಕ ನೀತಿಯನ್ನು ಪ್ರದರ್ಶಿಸಿದೆ. ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವಕ್ಕೆ ಒಳಗಾಗಿ ಇಂಥ ದುರುದ್ದೇಶಪೂರಿತ ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಕಮೆಂಟ್‌ಗಳನ್ನು ಕೊಡುತ್ತಿದೆ. ಆದರೆ ಹಾಗೆ ಮಾಡಬೇಡಿ, ನಿಮ್ಮ ಕೋಮು ವಿಭಜಕ ಮನೋಭಾವನೆಯನ್ನು ಪ್ರದರ್ಶಿಸಬೇಡಿ. ಎಲ್ಲ ಧರ್ಮ ಮತ್ತು ಎಲ್ಲರ ಧಾರ್ಮಿಕ ನಂಬಿಕೆಗಳನ್ನೂ ಗೌರವಿಸಿʼ ಎಂದು ನಾವು ಒತ್ತಾಯಿಸುತ್ತೇವೆ ಎಂದು ಸಚಿವಾಲಯ ಖಡಕ್‌ ಪ್ರಕಟಣೆ ಹೊರಡಿಸಿದೆ.

ನೂಪುರ್‌ ಶರ್ಮಾ ಹೇಳಿಕೆ ವಿರುದ್ಧ ಕತಾರ್‌, ಕುವೈತ್‌ ಮತ್ತು ಇರಾನ್‌, ಸೌದಿ ಅರೇಬಿಯಾನಂಥ ಮುಸ್ಲಿಂ ದೇಶಗಳು ಕೇಂಡಾಮಂಡಲವಾಗಿವೆ. ಈಗಾಗಲೇ ಕತಾರ್‌ ಮತ್ತು ಕುವೈತ್‌ಗಳು ಅಲ್ಲಿರುವ ಭಾರತೀಯ ರಾಯಭಾರಿಗಳಿಗೆ ಸಮನ್ಸ್‌ ನೀಡಿ, ಸ್ಪಷ್ಟನೆ ನೀಡುವಂತೆ ಕೇಳಿದ್ದಾರೆ. ಇಂಥ ಕೀಳುಮಟ್ಟದ ಹೇಳಿಕೆ ನೀಡಿರುವ ನೂಪುರ್‌ ಶರ್ಮಾ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಕುವೈತ್‌ ಆಗ್ರಹಿಸಿದೆ.

ಇದನ್ನೂ ಓದಿ: ನೂಪುರ್‌ ಶರ್ಮಾ ಅಮಾನತಿಗೆ ಬಿಜೆಪಿ ಬಳಸಿದ್ದು ನಿಯಮ 10 ಎ, ಹಾಗಿದ್ದರೆ ಏನಿದೆ ಅದರಲ್ಲಿ?

Exit mobile version