Site icon Vistara News

ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಒಂದೇ ವಾರದಲ್ಲಿ ಕಮಲ ಹಿಡಿದ ಸುನಿಲ್‌ ಜಾಖರ್‌

Sunil Jakhar

ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್‌ ಜಾಖರ್‌ ಇಂದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಕಳೆದ ವಾರ ಪಕ್ಷಕ್ಕೆ ರಾಜೀನಾಮೆ ಘೋಷಿಸುವ ಮೂಲಕ ಶಾಕ್‌ ನೀಡಿದ್ದರು. ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ಕಮಲ ಹಿಡಿದ ಜಾಖರ್‌ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಕುಟುಂಬದ ಮೂರು ತಲೆಮಾರುಗಳನ್ನು ನಾವು ಕಾಂಗ್ರೆಸ್‌ನಲ್ಲಿಯೇ ಕಳೆದಿದ್ದೇವೆ. ಸುಮಾರು 50 ವರ್ಷಗಳಿಂದ ಕಾಂಗ್ರೆಸ್‌ನೊಂದಿಗೆ ನನಗೆ ನಂಟಿದೆ. ಆ ಪಕ್ಷವನ್ನು ಬಿಡುವುದು ಅಷ್ಟು ಸುಲಭ ಆಗಿರಲಿಲ್ಲ ಎಂದು ಹೇಳಿದರು. ಹಾಗೇ, ನಾನು ಕಾಂಗ್ರೆಸ್‌ ತೊರೆದಿದ್ದು ಯಾವುದೇ ವೈಯಕ್ತಿಕ ಕಾರಣಕ್ಕಲ್ಲ. ಅಲ್ಲಿ ರಾಷ್ಟ್ರೀಯತೆ, ಭ್ರಾತೃತ್ವ ಮತ್ತು ಏಕತೆಗೆ ಸಂಬಂಧಪಟ್ಟ ಸಮಸ್ಯೆಗಳು ಇವೆ. ಈಗ ಕಾಂಗ್ರೆಸ್‌ ಪಕ್ಷ ಎಂಬುದು ಒಂದು ಗ್ಯಾಂಗ್‌ ಆಗಿ ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುನಿಲ್‌ ಜಾಖರ್‌ ಅವರು 2021ರ ಜುಲೈನಲ್ಲಿ ಪಂಜಾಬ್‌ ಕಾಂಗ್ರೆಸ್‌ ಸಮಿತಿ(ಪಿಪಿಸಿಸಿ) ಅಧ್ಯಕ್ಷನ ಹುದ್ದೆ ತೊರೆದಿದ್ದರು. ನವಜೋತ್‌ ಸಿಂಗ್‌ ಸಿಧುಗಾಗಿಯೇ ಇದನ್ನು ಬಿಟ್ಟುಕೊಟ್ಟಿದ್ದರು ಎಂದರೂ ತಪ್ಪಿಲ್ಲ. ಇತ್ತೀಚೆಗೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಛನ್ನಿಯನ್ನು ಟೀಕಿಸಿದ್ದ ಕಾರಣಕ್ಕೆ ಪಕ್ಷದಿಂದ ಶೋಕಾಸ್‌ ನೋಟಿಸ್‌ ಪಡೆದಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಆಗಾಗ ಹೊಗಳುವ ಮೂಲಕವೂ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದನ್ನೂ ಓದಿ: ಬಿಜೆಪಿ ನಾಯಕನ ಹೆಸರು ಹೇಳುತ್ತಿದ್ದಂತೆ ಸಚಿವರು ಫೋನ್‌ ಕಟ್‌ ಮಾಡಿದರು: ವಕೀಲೆ ಸಂಗೀತಾ ಶಿಕ್ಕೇರಿ ಆರೋಪ

ಸುನಿಲ್‌ ಜಾಖರ್‌ ಅವರಿಗೆ ಬಿಜೆಪಿ ರಾಜ್ಯ ಸಭಾ ಟಿಕೆಟ್‌ ನೀಡಲಿದೆ. ಅದರೊಂದಿಗೆ ಪಂಜಾಬ್‌ನ ಕೆಲವು ಜವಾಬ್ದಾರಿಯನ್ನೂ ನೀಡಲಿದೆ ಮತ್ತು ಪಂಜಾಬ್‌ ಕಾಂಗ್ರೆಸ್‌ನಲ್ಲಿ ಅನೇಕರು ಅತೃಪ್ತರಿದ್ದಾರೆ. ಇವರೆಲ್ಲ ಒಂದಲ್ಲ ಒಂದು ಕಾರಣಕ್ಕೆ ಪಕ್ಷದ ಬಗ್ಗೆ ಅಸಮಾಧಾನಹೊಂದಿದ್ದಾರೆ. ಅವರನ್ನೆಲ್ಲ ಬಿಜೆಪಿಗೆ ಕರೆದುಕೊಂಡು ಬರುವಲ್ಲಿ ಸುನೀಲ್‌ ಜಾಖರ್‌ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಮೂಲಗಳು ತಿಳಿಸಿದ್ದಾಗಿ ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸುನಿಲ್‌ ಜಾಖರ್‌ ಪಂಜಾಬ್‌ನ ಪ್ರಮುಖ ರಾಜಕೀಯ ನಾಯಕರು. ಕಳೆದ ವಿಧಾನಸಭೆ ಚುನಾವಣೆಗೂ ಮೊದಲು ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬೇರೆ ಪಕ್ಷ ರಚನೆ ಮಾಡಿದ್ದರು. ನಂತರ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅವರಾದ ಬಳಿಕ ಕಾಂಗ್ರೆಸ್‌ನ ಎರಡನೇ ಪ್ರಮುಖ ನಾಯಕ ಬಿಜೆಪಿ ಪಾಳೆಯ ಸೇರಿದಂತಾಗಿದೆ.

ಸುನಿಲ್‌ ಜಾಖರ್‌ ತಂದೆ ಬಲರಾಮ್‌ ಜಾಖರ್‌ ಅವರು 1980 ರಿಂದ 1989ರವರೆಗೆ ಲೋಕಸಭಾ ಸ್ಪೀಕರ್‌ ಆಗಿದ್ದವರು. ಮಧ್ಯಪ್ರದೇಶದ ರಾಜ್ಯಪಾಲರೂ ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಲರಾಮ್‌ ಜಾಖರ್‌ ಇಂದಿರಾ ಗಾಂಧಿಗೆ ನಿಷ್ಠರಾಗಿದ್ದವರು. ಸುನಿಲ್‌ ಜಾಖರ್‌ 48 ವರ್ಷದಲ್ಲಿದ್ದಾಗ ಮೊದಲಿಗೆ ಫಾಜಿಲ್ಕಾ ಜಿಲ್ಲೆಯ ಅಬೋಹರ್‌ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಬಳಿಕ 2007 ಮತ್ತು 2012ರ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲೂ ಗೆದ್ದಿದ್ದಾರೆ. 2012ರಿಂದ 2017ರವರೆಗೆ ಪಂಜಾಬ್‌ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದರು. 2017ರ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತರು, ಆಗ ವಿನೋದ್‌ ಖನ್ನಾ ನಿಧನದ ನಂತರ ಖಾಲಿಯಿದ್ದ ಗುರುದಾಸ್‌ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಕೈ ಬಿಟ್ಟ ಹಾರ್ದಿಕ್ ಪಟೇಲ್‌ ಗೆ ಬಿಜೆಪಿ, ಆಪ್‌ ಗಾಳ

Exit mobile version