Site icon Vistara News

ಕಾಂಗ್ರೆಸ್‌ಗೆ ಹಾರ್ದಿಕ್‌ ಪಟೇಲ್‌ ಗುಡ್‌ಬೈ, ಮುಂದಿನ ನಿಲ್ದಾಣ ಬಿಜೆಪಿ?

ಹಾರ್ದಿಕ್‌ ಪಟೇಲ್‌

ಅಹಮದಾಬಾದ್‌: ಗುಜರಾತ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿಯಾಗಿದ್ದ ಪಾಟೀದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಬುಧವಾರ ಮುಂಜಾನೆ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ ಮುನ್ನ ನಡೆದಿರುವ ಈ ವಿದ್ಯಮಾನ ಪಕ್ಷಕ್ಕೆ ದೊಡ್ಡ ಹೊಡೆತ ಕೊಡುವ ನಿರೀಕ್ಷೆ ಇದೆ. ಈ ನಡುವೆ ಹಾರ್ದಿಕ್‌ ಪಟೇಲ್‌ ಮುಂದಿನ ದಾರಿ ಯಾವುದು ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲವಿದೆ. ಅವರು ಬಿಜೆಪಿ ಸೇರಬಹುದು ಎಂಬ ಮಾತು ಕೇಳಿಬರುತ್ತಿದೆ.

“ಕಾಂಗ್ರೆಸ್‌ ಪಕ್ಷ ಮತ್ತು ಅದರ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡುವ ಧೈರ್ಯ ಮಾಡಿದ್ದೇನೆ. ನನ್ನ ಈ ನಿರ್ಧಾರವನ್ನು ಗುಜರಾತ್‌ನ ಸಹವರ್ತಿಗಳು, ಜನರು ಸ್ವಾಗತಿಸುತ್ತಾರೆ ಎಂಬ ನಂಬಿಕೆ ಇದೆ. ಈ ನಿರ್ಧಾರದ ಮೂಲಕ ನಾನು ಗುಜರಾತ್‌ನ ಅಭಿವೃದ್ಧಿಗಾಗಿ ನಿಜಕ್ಕೂ ಧನಾತ್ಮಕವಾಗಿ ಕೆಲಸ ಮಾಡಬಹುದು,” ಎಂದು ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹಾರ್ದಿಕ್‌ ಪಟೇಲ್‌ ತಿಳಿಸಿದ್ದಾರೆ. ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗೋಡ್ಸೆ ಆರಾಧಕ ಮೋದಿ ಎಂದ ಗುಜರಾತ್‌ ಶಾಸಕನ ಬಂಧನ: ಅಸ್ಸಾಂ ಪೊಲೀಸರಿಂದ ಮೇವಾನಿ ವಶಕ್ಕೆ

ಹಾರ್ದಿಕ್‌ ಪಟೇಲ್‌ ಅವರು 2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಪಕ್ಷ ಸೇರಿದ್ದರು. ಕಳೆದ ಕೆಲವು ಸಮಯದಿಂದ ಗುಜರಾತ್‌ ಕಾಂಗ್ರೆಸ್‌ ಘಟಕದಲ್ಲಿ ಭಾರಿ ಒಳಜಗಳ ನಡೆಯುತ್ತಿದೆ. ಇದರ ಬಗ್ಗೆ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡಿದ್ದರು. ಗುಜರಾತ್‌ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿರುವ ಹಾರ್ದಿಕ್‌ ಪಟೇಲ್‌ ತಾನು `ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮದುವೆ ಗಂಡಿನಂತಿದ್ದೇನೆ’,” ಎಂದು ಹೇಳಿದ್ದು ಸುದ್ದಿಯಾಗಿತ್ತು.

ರಾಜ್ಯ ಕಾಂಗ್ರೆಸ್‌ ನಾಯಕರು ತನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಹಾರ್ದಿಕ್‌ ಪಟೇಲ್‌, ತಾನು ಪಕ್ಷ ಬಿಟ್ಟು ಹೋಗುವಂತೆ ಮಾಡಲು ಈ ರೀತಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ ಅವರಿಗೆ ದೂರು ನೀಡಿದ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದೂ ಪಟೇಲ್‌ ನೋವು ತೋಡಿಕೊಂಡಿದ್ದರು.

ಬಿಜೆಪಿ ಶ್ಲಾಘನೆ
ಕಾಂಗ್ರೆಸ್‌ ಪಕ್ಷದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಆಪಾದಿಸಿದ್ದ ಹಾರ್ದಿಕ್‌ ಪಟೇಲ್‌, ಈ ನಿಟ್ಟಿನಲ್ಲಿ ಬಿಜೆಪಿಯನ್ನು ಶ್ಲಾಘಿಸಿದ್ದರು. ತಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದೇನೆ ಎಂದು ಹೇಳುವ ಮೂಲಕ ಅವರು ಬಿಜೆಪಿ ಬಗೆಗಿನ ಒಲವು ವ್ಯಕ್ತಪಡಿಸಿದ್ದರು. ಹೀಗಾಗಿ ಅವರು ಇದೀಗ ಬಿಜೆಪಿ ಸೇರಬಹುದು ಎಂಬ ವದಂತಿ ಹರಡಿದೆ.

ಎಲ್ಲರಿಗೂ ಬೇಕು ಹಾರ್ದಿಕ್‌
28 ವರ್ಷದ ಹಾರ್ದಿಕ್‌ ಪಟೇಲ್‌ ಅವರು ಪಾಟೀದಾರ್‌ ಸಮುದಾಯಕ್ಕೆ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯನ್ನು ನೀಡಬೇಕು ಎಂದು ಆಗ್ರಹಿಸಿ ನಡೆದ ಹೋರಾಟದ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಗುಜರಾತ್‌ನಲ್ಲಿ ಪಾಟೀದಾರ್‌ ಸಮುದಾಯ ದೊಡ್ಡ ಪ್ರಮಾಣದಲ್ಲಿದೆ. 2018ರಲ್ಲಿ ದೇಶಾದ್ಯಂತ ಸುದ್ದಿಯಾದ ಅವರು 2019ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರು. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿತ್ತು. ಪಟೇಲ್‌ ಸಮುದಾಯದಲ್ಲಿ ಪ್ರಭಾವ ಹೊಂದಿರುವ ಹಾರ್ದಿಕ್‌ ಪಟೇಲ್‌ ಬಿಜೆಪಿಗೆ ತಲೆನೋವಾಗಿದ್ದರು. ಆದರೆ, ಈಗ ಕಾಂಗ್ರೆಸ್‌ ನಿಂದ ಭ್ರಮ ನಿರಸನಗೊಂಡಿರುವ ಹಾರ್ದಿಕ್‌ನನ್ನು ಬಿಜೆಪಿ ಸೆಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿಗೆ ಈ ಬಾರಿ ಕಾಂಗ್ರೆಸ್‌ಗಿಂತಲೂ ಆಮ್‌ ಆದ್ಮಿ ಪಾರ್ಟಿ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಹಾರ್ದಿಕ್‌ರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ. ಈ ನಡುವೆ ಆಮ್‌ ಆದ್ಮಿ ಪಾರ್ಟಿ ಕೂಡಾ ಹಾರ್ದಿಕ್‌ ಮೇಲೆ ಕಣ್ಣಿಟ್ಟಿರುವ ಸಾಧ್ಯತೆ ಇದೆ.

ಕೈಗೆ ಬೈ: ಹಿರಿಯ ಕಾಂಗ್ರೆಸ್‌ ನಾಯಕ ಸುನಿಲ್‌ ಜಾಖಡ್‌ ಪಕ್ಷತ್ಯಾಗ

Exit mobile version