Site icon Vistara News

ಜ್ಞಾನವಾಪಿ ಮಸೀದಿ ಕೇಸ್‌; ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಾಕಿದ್ದ ಪ್ರೊಫೆಸರ್‌ ಬಂಧನ

Gyanavapi

ನವದೆಹಲಿ: ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕಿ ದೆಹಲಿ ಯೂನಿರ್ವಸಿಟಿಯ ಹಿಂದು ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್‌ ಲಾಲ್‌ ಎಂಬುವರನ್ನು ದೆಹಲಿ ಸೈಬರ್‌ ಪೊಲೀಸರು ಬಂಧಿಸಿದ್ದಾರೆ. ಅದರ ಬೆನ್ನಲ್ಲೇ, ಪ್ರಾಧ್ಯಾಪಕರ ಬಿಡುಗಡೆಗೆ ಆಗ್ರಹಿಸಿ ದೆಹಲಿ ಯೂನಿರ್ವಸಿಟಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಪ್ರಾಧ್ಯಾಪಕ ರತನ್‌ ಲಾಲ್‌ರನ್ನು ಇಂದು ಮಧ್ಯಾಹ್ಯ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಅವರ ಪರ ವಕೀಲರು ಜಾಮೀನು ಅರ್ಜಿಯನ್ನೂ ಸಲ್ಲಿಸಿದ್ದಾರೆ.

ರತನ್‌ ಲಾಲ್‌ ವಿರುದ್ಧ ದೆಹಲಿಯ ವಕೀಲ ವಿನೀತ್‌ ಜಿಂದಾಲ್‌ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಜ್ಞಾನವಾಪಿ ಮಸೀದಿ ಸರ್ವೇ ಮಾಡುವಾಗ ಶಿವಲಿಂಗ ಪತ್ತೆಯಾಗಿದ್ದರ ಬಗ್ಗೆ ರತನ್‌ ಲಾಲ್‌ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದಾರೆ. ಅವರ ಟ್ವೀಟ್‌ ಕೋಮು ಸಾಮರಸ್ಯ ಕದಡುವಂತಿದ್ದು, ಧಾರ್ಮಿಕ ಗುಂಪುಗಳನ್ನು ಪ್ರಚೋದಿಸುವಂತಿದೆ. ಜ್ಞಾನವಾಪಿ ಮಸೀದಿ ಕೇಸ್‌ ತುಂಬ ಸೂಕ್ಷ್ಮವಾದ ಪ್ರಕರಣವಾಗಿದ್ದು, ವಿಚಾರಣೆ ಇನ್ನೂ ಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಿರುವಾಗ ಇಂಥ ಪೋಸ್ಟ್‌ಗಳನ್ನು ಹಾಕುವುದರಿಂದ ಸಮಸ್ಯೆಯಾಗುತ್ತದೆ ಎಂದಿದ್ದರು.

ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

ಆದರೆ ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ನ್ನು ಸಮರ್ಥಿಸಿಕೊಂಡಿದ್ದ ರತನ್‌ ಲಾಲ್‌, ಭಾರತದಲ್ಲಿ ನೀವು ಯಾವುದೇ ವಿಷಯ ಮಾತನಾಡಿದರೂ ಅದು ಒಂದಲ್ಲ ಒಂದು ಗುಂಪಿನ ಜನರ ಭಾವನೆಗೆ ನೋವನ್ನುಂಟು ಮಾಡುತ್ತದೆ. ನಾನೊಬ್ಬ ಇತಿಹಾಸ ತಜ್ಞ. ಇತಿಹಾಸವನ್ನು ಅಧ್ಯಯನ ಮಾಡಿದ್ದೇನೆ ಮತ್ತು ನನ್ನ ಗಮನಕ್ಕೆ ಬಂದ ಹಲವು ವಿಷಯಗಳನ್ನು ಬರೆದಿಟ್ಟಿದ್ದೇನೆ. ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲೂ ಕೂಡ ಯಾವುದೇ ಪ್ರಚೋದನಾಕಾರಿ ಶಬ್ದಗಳನ್ನು ಪ್ರಯೋಗಿಸಿಲ್ಲ. ಈ ವಿಷಯದ ಬಗ್ಗೆ ಎಲ್ಲಿ ಬೇಕಾದರೂ ನನ್ನನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ನನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಿಂದಾಗಿ ನನ್ನ ಮಗನಿಗೆ ಜೀವ ಬೆದರಿಕೆ ಬರುತ್ತಿದೆ ಎಂದೂ ತಿಳಿಸಿದ್ದರು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿಚಾರಣೆ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂಕೋರ್ಟ್‌

Exit mobile version