ನವ ದೆಹಲಿ: ಪ್ರವಾದಿ ಮೊಹಮ್ಮದ್‌ಗೆ ಅವಹೇಳನ ಮಾಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪುರ್ ಶರ್ಮಾ (Nupur Sharma) ಮತ್ತು ಆಕೆಯ ಕುಟುಂಬದವರಿಗೆ ಒಂದೇ ಸಮ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಈ ಬಗ್ಗೆ ನೂಪುರ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ, ದೆಹಲಿ ಪೊಲೀಸರು ಅವರಿಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ ಮತ್ತು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿ ಕೇಸ್ ಬಗ್ಗೆ ಪ್ಯಾನೆಲ್ ಡಿಸ್ಕಶನ್‌ಗೆಂದು ಟಿವಿ ಚಾನಲ್‌ವೊಂದಕ್ಕೆ ಹೋಗಿದ್ದ ನೂಪುರ್ ಶರ್ಮಾ ಅಲ್ಲಿ, ಪ್ರವಾದಿ ಮೊಹಮ್ಮದ್‌ಗೆ ಅವಮಾನವಾಗುವಂತಹ ಮಾತುಗಳನ್ನಾಡಿದ್ದರು. ಆಗಿನಿಂದಲೂ ಮುಸ್ಲಿಂ ಸಮುದಾಯ ಇದನ್ನು ದೊಡ್ಡಮಟ್ಟದಲ್ಲಿ ವಿರೋಧಿಸುತ್ತಿದೆ. ದೇಶದೊಳಗಿನ ಮುಸ್ಲಿಮರಷ್ಟೇ ಅಲ್ಲ, ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧವೇ ತಿರುಗಿಬಿದ್ದಿವೆ. ಈ ಮಧ್ಯೆ ಬಿಜೆಪಿ ನೂಪುರ್ ಶರ್ಮಾರನ್ನು ಅಮಾನತು ಮಾಡಿ, ಆಕೆಯಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದೆ ಮತ್ತು ಅವರ ಹೇಳಿಕೆಯನ್ನು ಇಡೀ ಭಾರತದೊಂದಿಗೆ ಬೆಸೆದು ಟೀಕಿಸುತ್ತಿರುವ ಮುಸ್ಲಿಂ ರಾಷ್ಟ್ರಗಳು, ಸಂಘಟನೆಗಳಿಗೆ ತಕ್ಕ ಪ್ರತ್ಯುತ್ತರವನ್ನೂ ನೀಡುತ್ತಿದೆ.
ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿದ್ದ ವಕ್ತಾರೆ ನೂಪುರ್ ಶರ್ಮಾ ಬಿಜೆಪಿಯಿಂದ ಅಮಾನತು
ಸುಮಾರು 10 ದಿನಗಳಿಂದ ಈ ನೂಪುರ್ ಶರ್ಮಾ ಹೇಳಿಕೆ ಸುತ್ತ ಬೆಳವಣಿಗೆಗಳು ನಡೆಯುತ್ತಿವೆ. ಇವರು ಪಕ್ಷದಿಂದ ಅಮಾನತುಗೊಂಡಿದ್ದರೆ, ಅನ್ಯ ಧರ್ಮದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ದೆಹಲಿ ಬಿಜೆಪಿ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್‌ರನ್ನು ಉಚ್ಚಾಟನೆಯಾಗಿದ್ದಾರೆ. ಕುವೈತ್, ಕತಾರ್, ಇರಾನ್ ಸೇರಿ ಇಡೀ ಅರಬ್ ರಾಷ್ಟ್ರಗಳು ಭಾರತದ ವಿರುದ್ಧ ಟೀಕೆ ಮಾಡುತ್ತಿವೆ. ಅಲ್ಲೆಲ್ಲ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಲಾಗುತ್ತಿದೆ. ದೊಡ್ಡ ಮಳಿಗೆಗಳು, ಸೂಪರ್ ಮಾರ್ಕೆಟ್‌ಗಳಿಂದ ಭಾರತದ ಚಹಾ ಪುಡಿ, ಅಕ್ಕಿ, ಮಸಾಲೆ ಪದಾರ್ಥಗಳನ್ನು ತೆರವು ಮಾಡಲಾಗುತ್ತಿದೆ. ಈ ನೂಪುರ್ ಶರ್ಮಾ ಆಡಿದ್ದ ಮಾತುಗಳಿಗೆಲ್ಲ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡುವಂತಾಗಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ಅಮಾನತಿಗೆ ಬಿಜೆಪಿ ಬಳಸಿದ್ದು ನಿಯಮ 10 ಎ, ಹಾಗಿದ್ದರೆ ಏನಿದೆ ಅದರಲ್ಲಿ?