Site icon Vistara News

ನ್ಯಾಯ ಸುಲಭವಾಗಿ ಸಿಗಬೇಕೆಂದ ಪ್ರಧಾನಿ ಮೋದಿ: ದೇಶದ ಬಲ ಇರುವುದೇ ಯುವಕರಲ್ಲಿ ಎಂದ ಸಿಜೆಐ

Ease of justice is Very important Says PM Narendra Modi

ನವ ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ಕಳೆಯಿತು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಈ ಹೊತ್ತಲ್ಲಿ, ಜನಜೀವನ-ಉದ್ಯಮಗಳನ್ನು ಸುಲಭಗೊಳಿಸುವುದು ಎಷ್ಟು ಮುಖ್ಯವೋ, ಜನರಿಗೆ ನ್ಯಾಯವೂ ಸುಲಭವಾಗಿ ಸಿಗುವಂತೆ ಮಾಡುವುದು ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ಪ್ರಯತ್ನಗಳು ನಡೆಯುತ್ತಿರುವುದನ್ನು ಶ್ಲಾಘಿಸಿದರು.

ಮೊದಲ ಅಖಿಲ ಭಾರತೀಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ‘ಇದೀಗ ನಾವು ಆಜಾದಿ ಕಾ ಅಮೃತ ಮಹೋತ್ಸವದ ಕಾಲದಲ್ಲಿದ್ದೇವೆ. ಇನ್ನು 25ವರ್ಷಗಳಲ್ಲಿ ಭಾರತವನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯಲು ಈಗಿನಿಂದಲೇ ಬದ್ಧರಾಗಬೇಕು. ದೇಶದ ಪ್ರತಿ ಸಮಾಜಕ್ಕೂ ನ್ಯಾಯ ಸುಲಭವಾಗಿ, ಶೀಘ್ರವಾಗಿ ಸಿಗುವಂತಾಗಬೇಕು. ಹೀಗಾಗಬೇಕು ಎಂದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಸೌರ್ಕರ್ಯಗಳ ಗುಣಮಟ್ಟ, ಪ್ರಮಾಣ ಹೆಚ್ಚಬೇಕು. ದೇಶದ ನ್ಯಾಯಾಂಗ ಕ್ಷೇತ್ರವನ್ನು ಬಲಪಡಿಸಲು ನಮ್ಮ ಎನ್‌ಡಿಎ ಸರ್ಕಾರ ಕಳೆದ 8 ವರ್ಷಗಳಲ್ಲಿ ಹಲವು ಕ್ರಮಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಭಾರತದಲ್ಲಿ ಇ-ಕೋರ್ಟ್‌ ಮಿಷನ್‌, ವರ್ಚ್ಯುವಲ್‌ ನ್ಯಾಯಾಲಯ ವ್ಯವಸ್ಥೆ ಪ್ರಾರಂಭವಾಗಿದೆ. ಟ್ರಾಫಿಕ್‌ ನಿಯಮ ಉಲ್ಲಂಘನೆ ಸೇರಿ ಇಂಥ ಹತ್ತು-ಹಲವು ಪ್ರಕರಣಗಳ ವಿಚಾರಣೆಗಾಗಿ 24 ತಾಸು ಕಾರ್ಯನಿರ್ವಹಿಸುವ ಕೋರ್ಟ್‌ಗಳೂ ಇದ್ದಾವೆ. ಜನರಿಗಾಗಿ ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್‌ ವ್ಯವಸ್ಥೆಯೂ ಶುರುವಾಗಿದೆ. ಇದೆಲ್ಲ ಅಭಿವೃದ್ಧಿಗಳೂ ಸ್ವಾಗತಾರ್ಹ ಎಂದು ಹೇಳಿದರು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಕೇಸ್‌; ಶಿವಲಿಂಗ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆ ಒಪ್ಪದ ಸುಪ್ರೀಂಕೋರ್ಟ್‌

ಪ್ರಧಾನಿ ನರೇಂದ್ರ ಮೋದಿ ಮಾತಿಗೂ ಮುನ್ನ ಮಾತನಾಡಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ʼಎಲ್ಲರಿಗೂ ನ್ಯಾಯ ಸಿಗಬೇಕು. ದೇಶದ ನಿಜವಾದ ಬಲ ಅಡಗಿರುವುದೇ ಯುವಜನರಲ್ಲಿ. ಇಡಿ ವಿಶ್ವದ ಒಟ್ಟಾರೆ ಯುವಜನರಲ್ಲಿ 1/5ರಷ್ಟು ಮಂದಿ ಭಾರತದಲ್ಲೇ ಇದ್ದಾರೆ. ಆದರೆ ಕೌಶಲವುಳ್ಳ ಕೆಲಸಗಾರರ ಪ್ರಮಾಣ ಶೇ.3ರಷ್ಟು ಮಾತ್ರ. ನಾವು ನಮ್ಮ ದೇಶದ ಕೌಶಲ ಭರಿತ ಪಡೆಯನ್ನು ಇನ್ನಷ್ಟು ಸಜ್ಜುಗೊಳಿಸಬೇಕು ಎಂದು ಹೇಳಿದರು. ಹಾಗೇ, ಜಗತ್ತಿಗೂ-ಭಾರತಕ್ಕೂ ಇದ್ದ ಅಂತರ ಕಡಿಮೆಯಾಗುತ್ತಿದೆ ಎಂದೂ ತಿಳಿಸಿದರು.

ಬಹುಪಾಲು ಜನರು ಅರಿವಿನ ಕೊರತೆಯಿಂದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಅವರಿಗೆಲ್ಲ ಕಾನೂನು ಸೇವೆ ಸಿಗುವಂತಾಗಬೇಕು. ನಾವಿಂದು ನ್ಯಾಯಾಂಗದ ಸೇವೆಯನ್ನು ವಿಸ್ತರಿಸಿದ್ದೇವೆ. ತ್ವರಿತವಾಗಿ ನ್ಯಾಯ ಸಿಗುವಂತೆ ಮಾಡುತ್ತಿದ್ದೇವೆ ಅಂದರೆ ಅದರ ಹಿಂದೆ ನೂರಾರು ಸಮರ್ಥ ನ್ಯಾಯಾಧೀಶರು, ಉತ್ಸಾಹಿ ವಕೀಲರು ಮತ್ತು ಸರ್ಕಾರಗಳ ಶ್ರಮವಿದೆ. ಅವರಿಗೆಲ್ಲ ನಾವು ಕೃತಜ್ಞತೆ ಸಲ್ಲಿಸಬೇಕು ಎಂದೂ ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಉದಯ್‌ ಯು ಲಲಿತ್‌ ಮತ್ತು ಡಿ.ವೈ.ಚಂದ್ರಚೂಡ್‌, ಕಾನೂನು ಸಚಿವ ಕಿರಣ್‌ ರಿಜಿಜು ಇದ್ದರು.

ಇದನ್ನೂ ಓದಿ: Chess Olympiad | 44ನೇ ಆವೃತ್ತಿಯ ಚೆಸ್‌ ಒಲಿಂಪಿಕ್ಸ್‌ಗೆ ಪ್ರಧಾನಿ ಮೋದಿ ಚಾಲನೆ

Exit mobile version