ಮುಂಬಯಿ: ಇಲ್ಲಿನ ನ್ಹವ ಶೇವಾ ಬಂದರಿನಲ್ಲಿ ಬೃಹತ್ ಪ್ರಮಾಣದ ಮಾದಕ ದ್ರವ್ಯ ಇದ್ದ ಕಂಟೇನರ್ನ್ನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ಜಪ್ತಿ ಮಾಡಿದೆ. ಅಂದಾಜು 22 ಟನ್ಗಳಷ್ಟು ಲೈಕೋರೈಸ್ ಲೇಪಿತ ಹೆರಾಯಿನ್ಗಳನ್ನು (heroin seized) ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೊತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1725 ಕೋಟಿ ರೂಪಾಯಿ ಎನ್ನಲಾಗಿದೆ.
ಲೈಕೋರೈಸ್ ಎಂದರೆ ಒಂದು ಗಿಡಮೂಲಿಕೆಯಾಗಿದ್ದು ಯುರೋಪ್ ಮತ್ತು ಏಷ್ಯಾದ ಹಲವು ಭಾಗಗಳಲ್ಲಿ ಬೆಳೆಯುತ್ತದೆ. ಇದರ ಬೇರುಗಳನ್ನು ಗ್ಲೈಸಿರೈಜಿನ್ (ಜ್ಯೇಷ್ಠಮಧು) ಎನ್ನಲಾಗುತ್ತದೆ. ಇದೊಂದು ಔಷಧೀಯ ಬೇರು. ಆದರೆ ಜಾಸ್ತಿ ತಿಂದರೆ ಅಡ್ಡಪರಿಣಾಮಗಳು ಗ್ಯಾರಂಟಿ. ಹೆರಾಯಿನ್ಗಳೆಂದು ಅನುಮಾನ ಬರಬಾರದು ಎಂಬ ಕಾರಣಕ್ಕೆ ಲೈಕೋರೈಸ್ನ್ನು ಲೇಪಿಸಲಾಗಿತ್ತು. ಕಂಟೇನರ್ ಮುಂಬೈ ಬಂದರಿನಿಂದ ದೆಹಲಿಗೆ ಹೋಗುವುದಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು ‘ 1725 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಕಂಟೇನರ್ನಲ್ಲಿದ್ದವು. ನಮ್ಮ ದೇಶವನ್ನು ನಾರ್ಕೊ ಭಯೋತ್ಪಾದನೆ ಹೇಗೆ ಬಾಧಿಸುತ್ತಿದೆ ಮತ್ತು ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರು ಯಾವೆಲ್ಲ ಮಾರ್ಗದಲ್ಲಿ ಭಾರತಕ್ಕೆ ಡ್ರಗ್ಸ್ ತರುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿ ಇಬ್ಬರು ಅಫ್ಘಾನಿಸ್ತಾನದ ಪ್ರಜೆಗಳನ್ನು ಬಂಧಿಸಿ ಅವರಿಂದ 1200 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದರು. ಅವರ ಬಳಿ 312.5 ಕೆಜಿಗಳಷ್ಟು ಮೆಥಾಂಫೆಟಮೈನ್ ಡ್ರಗ್ಸ್ ಮತ್ತು 10 ಕೆಜಿ ಹೆರೋಯಿನ್ ಇತ್ತು. ಆದರೆ ಈಗ ವಶಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣ ಅದಕ್ಕೂ ಹೆಚ್ಚು.
ಇದನ್ನೂ ಓದಿ: Video: ಗೃಹ ಸಚಿವ ಅಮಿತ್ ಶಾ ಎದುರೇ 30 ಸಾವಿರ ಕೆಜಿ ಮಾದಕ ದ್ರವ್ಯ ಸುಟ್ಟುಹಾಕಿದ ಎನ್‌ಸಿಬಿ