ಹೈದರಾಬಾದ್: ಕಾಂಗ್ರೆಸ್ನಲ್ಲಿ 50 ವರ್ಷಗಳಿಂದ ಇದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷ ಬಿಟ್ಟು ಹೋದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಅವರ ಬೆಂಬಲಿಗರು ಹಲವರು ಕಾಂಗ್ರೆಸ್ ತೊರೆದಿದ್ದಾರೆ. ಈಗ ತೆಲಂಗಾಣದ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಾರೆ. ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಮೊದಲಿನ ಘನತೆಯನ್ನು ವಾಪಸ್ ಪಡೆಯುತ್ತದೆ, ಈ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಸಾರ್ವಜನಿಕರಲ್ಲಿ ಭರವಸೆ ಹುಟ್ಟಿಸುವಲ್ಲಿ ಪಕ್ಷದ ವರಿಷ್ಠರು ಸಂಪೂರ್ಣ ವಿಫಲವಾಗಿದ್ದಾರೆ’ ಎಂದು ಆರೋಪಿಸಿ ತೆಲಂಗಾಣ ರಾಜ್ಯಸಭಾ ಮಾಜಿ ಸದಸ್ಯ ಎಂ.ಎ.ಖಾನ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಪಕ್ಷವನ್ನು ತಳಮಟ್ಟದಿಂದ ಕಟ್ಟಿದವರನ್ನು ಮತ್ತೆ ಪಕ್ಷದಲ್ಲಿ ಸಕ್ರಿಯಗೊಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಸೋಲುತ್ತಿದೆ. ಪಂಡಿತ್ ನೆಹರು, ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿ ಕಾಂಗ್ರೆಸ್ಗೆ ಇದ್ದ ಬದ್ಧತೆ, ನಿಷ್ಠೆ ಈಗಿಲ್ಲ. ಇದೇ ಕಾರಣಕ್ಕೆ ಹಿರಿಯ ನಾಯಕರು ಕಾಂಗ್ರೆಸ್ ಬಿಡುತ್ತಿದ್ದಾರೆ. ಹೀಗೆ ಬಿಟ್ಟು ಹೋಗುತ್ತಿರುವವರನ್ನು ತಡೆಯಲೂ ಪಕ್ಷದ ಹಿರಿಯರು ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ನನಗೆ ಕಾಂಗ್ರೆಸ್ ಬಿಟ್ಟರೆ ಯಾವುದೇ ಆಯ್ಕೆಗಳಿಲ್ಲ. ಆದರೆ ಏನೇ ಆದರೂ ನಾನು ಪಕ್ಷಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಎಂ.ಎ.ಖಾನ್ ತಿಳಿಸಿದ್ದಾರೆ.
ಎಂ.ಎ. ಖಾನ್ ಅವರೂ ಕೂಡ ಪಕ್ಷದ ಅವನತಿಗೆ ರಾಹುಲ್ ಗಾಂಧಿಯೇ ಕಾರಣ ಎಂದು ಆರೋಪಿಸಿದ್ದಾರೆ. ಯಾವಾಗ ರಾಹುಲ್ ಗಾಂಧಿ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದರೋ, ಆಗಿನಿಂದಲೇ ಕಾಂಗ್ರೆಸ್ಗೆ ಹೊಡೆತ ಬೀಳಲು ಪ್ರಾರಂಭವಾಯಿತು. ಎಲ್ಲರದ್ದೂ ಒಂದು ಅಭಿಪ್ರಾಯವಾದರೆ, ರಾಹುಲ್ ವಿಚಾರಗಳೇ ಮತ್ತೊಂದು ಇರುತ್ತಿತ್ತು. ಅದು ಪಕ್ಷದಲ್ಲಿ ಇನ್ಯಾರ ಆಲೋಚನಾ ಕ್ರಮಕ್ಕೂ ಹೊಂದಿಕೆಯಾಗುತ್ತಿರಲಿಲ್ಲ. ಕಾಂಗ್ರೆಸ್ ಅವನತಿಯಾಗಲು ರಾಹುಲ್ ಗಾಂಧಿಯವರ ಈ ವರ್ತನೆಯೇ ಕಾರಣವಾಯಿತು. ರಾಹುಲ್ ಗಾಂಧಿ ಹಿರಿಯ ನಾಯಕರೊಂದಿಗೆ ಹೇಗೆಗೆಲ್ಲ ವರ್ತಿಸಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ ಎಂದೂ ಆಪಾದಿಸಿದ್ದಾರೆ.
ಗುಲಾಂ ನಬಿ ಆಜಾದ್ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ದೊಡ್ಡ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಸೋನಿಯಾ ಗಾಂಧಿಯವರಿಗೆ ಐದು ಪುಟಗಳ ಪತ್ರ ಬರೆದು, ಇಡೀ ಪಕ್ಷ ಕೆಳಗೆ ಬಿದ್ದಿದ್ದೇ ರಾಹುಲ್ ಗಾಂಧಿಯಿಂದ ಎಂದು ನೇರವಾಗಿ ಆರೋಪಿಸಿದ್ದಾರೆ. ಅವರು ಎತ್ತಿದ ಧ್ವನಿಗೆ ಇನ್ನಷ್ಟು ಬಲ ಬರುತ್ತಿದೆ.
ಇದನ್ನೂ ಓದಿ: Rahul Gandhi | ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, ಅವರಂಥ ಪ್ರಭಾವಿ ನಾಯಕರು ಯಾರಿದ್ದಾರೆ? ಖರ್ಗೆ ಪ್ರಶ್ನೆ