Site icon Vistara News

ವೈದ್ಯರ ಮಹಾ ಪ್ರಮಾದ; ಸ್ಮಶಾನಕ್ಕೆ ಕರೆದೊಯ್ಯುತ್ತಿದ್ದಾಗ ಕಣ್ಣುಬಿಟ್ಟ ಶಿಶು !

New Born Baby Death

ಶ್ರೀನಗರ: ಒಮ್ಮೊಮ್ಮೆ ಎಂಥ ಪ್ರಮಾದಗಳು ನಡೆದುಬಿಡುತ್ತವೆ ನೋಡಿ ! ಜಮ್ಮು-ಕಾಶ್ಮೀರದ ರಾಂಬನ್‌ ಜಿಲ್ಲೆಯಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಅನ್ಯಾಯವಾಗಿ ಜೀವಂತ ಮಗುವೊಂದು ಮಣ್ಣಾಗಿಬಿಡುತ್ತಿತ್ತು. ಇಲ್ಲಿನ ಬಾನಿಹಾಲ್‌ನಲ್ಲಿರುವ ಉಪ ಜಿಲ್ಲಾಸ್ಪತ್ರೆಯ ವೈದ್ಯರು ನವಜಾತ ಶಿಶು (Newborn Baby)ವೊಂದು ಸತ್ತೇ ಹೋಗಿದೆ ಎಂದು ಘೋಷಿಸಿದ್ದರಿಂದ, ಕುಟುಂಬದವರು ಅದನ್ನು ಮಣ್ಣು ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ಆಗತಾನೇ ಹುಟ್ಟಿದ ಮಗುವಿಗೆ ಜೀವವಿಲ್ಲ ಎಂಬ ವಿಷಯವನ್ನು ಅದರ ಪಾಲಕರು ಅರಗಿಸಿಕೊಳ್ಳಲಾಗದೆ ಗೋಳಿಡುತ್ತಲೇ, ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮಗುವನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗುವ ಹೊತ್ತಲ್ಲೇ ಅದು ಕಣ್ಣುಬಿಟ್ಟಿದೆ. ದೊಡ್ಡದಾಗಿ ಅಳಲು ಶುರು ಮಾಡಿದೆ ಮತ್ತು ಅದರ ದೇಹ ಕದಲತೊಡಗಿದೆ.

ಆ ಮಗುವನ್ನು ಹೆತ್ತವರಿಗೆ, ಕುಟುಂಬದವರಿಗೆ ಒಂದು ಕಡೆ ಎಲ್ಲಿಲ್ಲದ ಸಂತೋಷವಾದರೆ, ಮತ್ತೊಂದೆಡೆ ಆಸ್ಪತ್ರೆ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ. ಮಗು ಕಣ್ಣು ಬಿಟ್ಟ ತಕ್ಷಣ ವಾಪಸ್‌ ಆಸ್ಪತ್ರೆಗೆ ಬಂದ ಕುಟುಂಬದವರು ವೈದ್ಯರು, ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕೇಸ್‌ಗೆ ಸಂಬಂಧಪಟ್ಟಂತೆ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಜ್ಯೂನಿಯರ್‌ ಸ್ಟಾಪ್‌ ನರ್ಸ್‌ ಸುಮಿನಾ ಬೇಗಂ ಮತ್ತು ಕಸಗುಡಿಸುವಾಕೆ ಹಜಾರಾ ಬೇಗಂ ಎಂಬುವರನ್ನು ಅಮಾನತು ಮಾಡಲಾಗಿದೆ. ಸದ್ಯ ಮಗುವಿಗೆ ಶ್ರೀನಗರದ ಆಸ್ಪತ್ರೆಯೊಂದರಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಐಸಿಸ್‌ಗೆ ಯುವಕರನ್ನು ಸೇರಿಸುವ ಉಗ್ರರ ಜಾಲ ಬೆಂಗಳೂರಿನಲ್ಲೂ ಸಕ್ರಿಯ, ಎನ್‌ಐಎ ತನಿಖೆಯಲ್ಲಿ ಸ್ಫೋಟಕ ವಿವರ

ಏನಿದು ಘಟನೆ?
ಜಮ್ಮು-ಕಾಶ್ಮೀರದ ಬಾನ್‌ಕೂಟ್‌ ನಿವಾಸಿ ಬಶರತ್‌ ಅಹ್ಮದ್‌ ಎಂಬುವರ ಪತ್ನಿ ಹೆರಿಗೆ ನೋವಿನಿಂದ ಬಾನಿಹಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಯೇನೋ ಆಯಿತು. ಆದರೆ ಮಗುವಿನಲ್ಲಿ ಯಾವುದೇ ಕದಲಿಕೆಯಿರಲಿಲ್ಲ. ಕೆಲ ಹೊತ್ತು ಅದರ ತಪಾಸಣೆ ಮಾಡಿದ ಸಿಬ್ಬಂದಿ, ಮಗು ಹುಟ್ಟುವಾಗಲೇ ಮೃತಪಟ್ಟಿದೆ ಎಂದು ಹೇಳಿದರು. ಅದನ್ನು ನಂಬಿ ಕುಟುಂಬದವರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮಗುವಿಗೆ ಜೀವ ಇದೆ ಎಂದು ಗೊತ್ತಾದ ಮೇಲೆ ಕುಟುಂಬದವರು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಪೊಲೀಸ್‌ ಅಧಿಕಾರಿ ಮುನೀರ್‌ ಖಾನ್‌ ನೇತೃತ್ವದ ತಂಡವೊಂದು ಆಸ್ಪತ್ರೆಗೆ ಭೇಟಿ ನೀಡಿ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಇನ್ನಷ್ಟು ತನಿಖೆ ಬಳಿಕ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಂದ ಸೇವಾ ಶುಲ್ಕ ವಸೂಲು ಮಾಡದಂತೆ ರೆಸ್ಟೊರೆಂಟ್‌ಗಳಿಗೆ ಸರಕಾರದ ಎಚ್ಚರಿಕೆ

Exit mobile version