Site icon Vistara News

Pralhad Joshi: ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ

Pralhad Joshi

ನವದೆಹಲಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಿಂದ ನಮಗೆ ಬರೋಬ್ಬರಿ 1,79,588 ಸೋಲಾರ್ ಪಂಪ್‌ ಅಳವಡಿಕೆಗೆ ಬೇಡಿಕೆ ಬಂದಿದೆ ಎಂದು ವಿವರಿಸಿದರು.

ವಿಫಲವಾಗಿದ್ರೆ ಬೇಡಿಕೆ ಏಕಿರುತ್ತಿತ್ತು?

ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ, ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರದವರು ಏಕೆ ಅಧಿಕೃತವಾಗಿ ನಮಗೆ ಇಷ್ಟೊಂದು ಬೇಡಿಕೆ ಕಳುಹಿಸುತ್ತಿದ್ದರು? ಎಂದು ಸಚಿವರು ಪ್ರಶ್ನಿಸಿದರು.

ಇದನ್ನೂ ಓದಿ: Namma Metro: ಆ.6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ

ಪಿಎಂ ಕುಸುಮ್ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಿದ್ದು, ಸ್ವತಂತ್ರ ಸೋಲಾರ್ ಪಂಪ್‌ಗಳ ಸ್ಥಾಪನೆಗೆ ರೈತರಿಗೆ ಹಣಕಾಸಿನ ನೆರವು ಕೂಡ ನೀಡಲಾಗಿದೆ. ರೈತರಿಗೆ ಇದು ಆಶಾದಾಯಕವಾಗಿದೆ ಎಂದು ತಿಳಿಸಿದರು.

ಸೂರ್ಯ ಘರ್‌ಗೆ 1.30 ಕೋಟಿ ನೋಂದಣಿ

ಇನ್ನು, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 2024ರವರೆಗೆ 1.30 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಸೂರ್ಯ ಘರ್ ಯೋಜನೆಗೆ ಈಗಾಗಲೇ 15 ಲಕ್ಷಕ್ಕೂ ಹೆಚ್ಚು ಗ್ರಾಹಕರ ಅರ್ಜಿ ಸ್ವೀಕರಿಸಲಾಗಿದೆ. ಸುಮಾರು 2.3 ಲಕ್ಷ ಸೌರ ಮೇಲ್ಛಾವಣಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರಗಳಿಂದಾಗಿ, ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಭಾರತ ನಂ.4ನೇ ಸ್ಥಾನದಲ್ಲಿದೆ. ಪವನ ಶಕ್ತಿ ಸಾಮರ್ಥ್ಯದಲ್ಲಿ 4ನೇ ಸ್ಥಾನ ಮತ್ತು ಸೌರ ಪಿವಿ ಸಾಮರ್ಥ್ಯದಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಎನ್‌ಡಿಎ ಸರ್ಕಾರ 21000 ಕೋಟಿ ವೆಚ್ಚ ಮಾಡಲಿದೆ

ಯುಪಿಎ ಆಡಳಿತಾವಧಿಯ ಒಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಸರ್ಕಾರ ಕೇವಲ 6091 ಕೋಟಿ ರೂ. ವೆಚ್ಚ ಮಾಡಿತ್ತು. ಆದರೆ, ಎನ್‌ಡಿಎ ಸರ್ಕಾರ ಈ ವರ್ಷವೇ ಬರೋಬ್ಬರಿ 21,000 ಕೋಟಿ ರೂ.ವೆಚ್ಚ ಮಾಡಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

ಪ್ರಥಮ ಪ್ರಧಾನ ಕಚೇರಿ

ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಭಾರತ ಈಗ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಯಾವ ಅಂತರಾಷ್ಟ್ರೀಯ ಸಂಸ್ಥೆಯು ಭಾರತದಲ್ಲಿ ಪ್ರಧಾನ ಕಛೇರಿಯನ್ನು ಸ್ಥಾಪಿಸಲು ಯೋಚನೆಯನ್ನೇ ಮಾಡಿರಲಿಲ್ಲ. ಮೋದಿ ಕಾಲಘಟ್ಟದಲ್ಲಿ ಇದು ಸಾಧ್ಯವಾಗಿದ್ದು, ದೂರದೃಷ್ಟಿಯ ಅವರ ನಾಯಕತ್ವಕ್ಕೆ ಇದೊಂದು ನಿದರ್ಶನ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

Exit mobile version