ಜಮ್ಮು-ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಭದ್ರತಾ ಪಡೆಗಳು ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈಗ ಮತ್ತೊಬ್ಬ ಉಗ್ರನ ಹತ್ಯೆಯಾಗಿದೆ. ಇಂದು ಮುಂಜಾನೆಯಿಂದಲೇ ಆವಂತಿಪೋರಾದ ಪದಗಂಪೋರಾದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ಶುರುಮಾಡಿದ್ದರು. ಬೆಳಗ್ಗೆ ಮೊದಲು ಅಖೀಬ್ ಮುಸ್ತಾಕ್ ಎಂಬ ಉಗ್ರನನ್ನು ಹತ್ಯೆಗೈಯ್ಯಲಾಗಿತ್ತು. ಈಗ ಅದೇ ಏರಿಯಾದಲ್ಲಿ ಇನ್ನೊಬ್ಬನನ್ನು ಕೊಂದಿದ್ದಾರೆ. ಅವನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಶ್ಮೀರ ವಲಯದ ಪೊಲೀಸ್ ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ.
ಪುಲ್ವಾಮಾದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾನನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಉಗ್ರರ ವಿರುದ್ಧ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಶುರು ಮಾಡಿದ್ದರು. ಪದಗಂಪೋರಾದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೇ ಅಲ್ಲಿಗೆ ಹೋಗಿದ್ದರು. ಭದ್ರತಾ ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಸಿಬ್ಬಂದಿ ಕೂಡ ದಾಳಿ ನಡೆಸಿದರು. ಅದರಲ್ಲೀಗ ಇಬ್ಬರು ಉಗ್ರರ ಹತ್ಯೆಯಾಗಿದೆ. ಕಾರ್ಯಾಚರಣೆ ಮುಂದುವರಿದಿದೆ.