ಅಮೃತ್‌ಸರ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಗ್ಯಾಂಗ್‌ಸ್ಟರ್‌ಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದು, ಈ ದಾಳಿಯಲ್ಲಿ ಒಬ್ಬ ಶೂಟರ್ ಮೃತಪಟ್ಟಿದ್ದಾನೆ. ಇವರಿಬ್ಬರೂ ಅಮೃತ್‌ಸರ್‌ನ ಅಟ್ಟಾರಿ ಗಡಿ ಬಳಿ ಚಿಚಾ ಭಕ್ನಾ ಎಂಬ ಹಳ್ಳಿಯಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಹೋಗಿದ್ದರು. ಈ ವೇಳೆ ಗ್ಯಾಂಗ್‌ಸ್ಟರ್‌ಗಳು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಪೊಲೀಸರು ಅಟ್ಯಾಕ್ ಮಾಡಿದ್ದಾರೆ. ಈ ಜಟಾಪಟಿಯಲ್ಲಿ ಇಬ್ಬರು ಪೊಲೀಸ್ ಕೂಡ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಸಿಧು ಮೂಸೆವಾಲಾ ಹತ್ಯೆಯಲ್ಲಿ ಪಾಲ್ಗೊಂಡ ಗ್ಯಾಂಗಸ್ಟರ್ ಜಗ್‌ರೂಪ್ ಸಿಂಗ್ ಅಲಿಯಾಸ್ ರೂಪಾ ಮತ್ತು ಆತನ ಸಹಚರ ಮನ್ನು ಕುಸಾ ಅಟ್ಟಾರಿಯ ಚಿಚಾಭಕ್ನಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಇಡೀ ಹಳ್ಳಿಯನ್ನು ಎಲ್ಲ ಕಡೆಯಿಂದಲೂ ಸುತ್ತುವರಿದು, ಅವರಿಬ್ಬರನ್ನೂ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಅವರಿಬ್ಬರೂ ಪೊಲೀಸರ ಮೇಲೆಯೇ ಗುಂಡಿನ ಸುರಿಮಳೆ ಗೈದಿದ್ದಾರೆ.
ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ ಕೇಸ್, ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ
ಪಂಜಾಬ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ, ಕಾಂಗ್ರೆಸ್ ನಾಯಕ ಮೂಸೆವಾಲಾರನ್ನು ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಎಂಬಲ್ಲಿ ಕೊಲ್ಲಲಾಗಿದೆ. ಈ ಹತ್ಯೆಯಲ್ಲಿ ಐವರು ಶೂಟರ್‌ಗಳು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗಿದೆ. ಐವರಲ್ಲಿ ಈ ರೂಪಾ ಮತ್ತು ಮನ್ನು ಕುಸಾ ಕೂಡ ಇದ್ದರು. ಈ ಹತ್ಯೆಯ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ ಎಂಬುದು ಸ್ಪಷ್ಟವಾಗಿದೆ. ಹಾಗಂತ ಇವನು ಶೂಟ್ ಮಾಡಿಲ್ಲ. ಯಾಕೆಂದರೆ ಈಗಾಗಲೇ ಅವನು ಜೈಲಿನಲ್ಲಿ ಇದ್ದಾನೆ. ತನಗೆ ಮೂಸೆವಾಲಾ ಮೇಲಿದ್ದ ದ್ವೇಷವನ್ನು ತೀರಿಸಿಕೊಳ್ಳಲು ಪಿತೂರಿ ರೂಪಿಸಿ, ಆತನ ಜೀವವನ್ನೇ ತೆಗೆದಿದ್ದಾನೆ. ಇಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದು ರೂಪಾ ನೋ ಅಥವಾ ಕುಸಾ ನೋ ಎಂಬುದು ಸ್ಪಷ್ಟವಾಗಿಲ್ಲ. ಇನ್ನೂ ಕೂಡ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ:Sidhu MooseWala: ಪಂಜಾಬಿ ಸಿಂಗರ್ ಸಿಧು ಮೂಸೆವಾಲಾ ಗುಂಡಿಗೆ ಬಲಿ