ಚಂಡೀಗಢ: ಕಣ್ಣೆದುರೇ ಹೆತ್ತ ಮಗ, 10 ತಿಂಗಳ ಕಂದಮ್ಮ ಅಸುನೀಗಿದರೆ ಯಾವ ತಂದೆ-ತಾಯಿ ತಾನೆ ಮನಸ್ಸನ್ನು ಕಲ್ಲು ಮಾಡಿಕೊಂಡು ಇರಲು ಸಾಧ್ಯ? ಆದರೆ, ಚಂಡೀಗಢದಲ್ಲಿ 10 ತಿಂಗಳ ಕೂಸು ಅಸುನೀಗಿದ (Infant Dies) ಬಳಿಕ ಆ ಮಗುವಿನ ಅಂಗಾಂಗಗಳನ್ನು ಎರಡು ಶಿಶುಗಳ ಜೀವ ಉಳಿಸಲು ದಾನ ಮಾಡುವ ಮೂಲಕ ದುಃಖದ ಕ್ಷಣಗಳಲ್ಲೂ ಔದಾರ್ಯ ಮೆರೆದಿದ್ದಾರೆ.
ಹೌದು, ಚಂಡೀಗಢದ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 10 ತಿಂಗಳ ಮಗು ಮೃತಪಟ್ಟಿದೆ. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಮಗು ಅಸುನೀಗಿದೆ. ಇದಾದ ಬಳಿಕ ಪೋಷಕರು ಆ ಮಗುವಿನ ಎರಡು ಅಂಗಾಂಗಗಳನ್ನು ದಾನ ಮಾಡಿದ್ದಾರೆ.
ಎರಡು ಶಿಶುಗಳು ಜೀವನ್ಮರಣದ ಜತೆ ಹೋರಾಡುತ್ತಿದ್ದವು. ಎರಡೂ ಮಕ್ಕಳು ಉಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ, ಹರಿಯಾಣದ ದಂಪತಿಯು ತಮ್ಮ ಮಗನ ಎರಡು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎರಡೂ ಜೀವಗಳನ್ನು ಉಳಿಸಿದ್ದಾರೆ. ನವದೆಹಲಿಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ (ILBS) ಹಾಗೂ ಚಂಡೀಗಢದ ಪೋಸ್ಟ್ ಗ್ರ್ಯಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್ (PGIMER) ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ ಎರಡು ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಇದನ್ನೂ ಓದಿ: Bear Attack: ಕರಡಿ ದಾಳಿಗೆ ಕಣ್ಣುಗಳು ಕಿತ್ತು ಬಂದರೂ 2 ಕಿ.ಮೀ. ನಡೆದು ಜೀವ ಉಳಿಸಿಕೊಂಡ ವೃದ್ಧ!
“ನಮ್ಮ ಮಗನ ಅಂಗಾಂಗ ದಾನ ಮಾಡಿದರೆ ಎರಡು ಜೀವಗಳು ಉಳಿಯುತ್ತವೆ ಎಂದು ಗೊತ್ತಾಯಿತು. ನಮ್ಮ ಅಸುಗೂಸನ್ನು ಕಳೆದುಕೊಂಡು ಅಪಾರ ದುಃಖ ಅನುಭವಿಸಿದ್ದೇವೆ. ಈ ದುಃಖ ಬೇರೊಬ್ಬ ತಂದೆ-ತಾಯಿಗೆ ಕಾಡಬಾರದು ಎಂದು ಅಂಗಾಂಗ ದಾನ ಮಾಡಲು ತೀರ್ಮಾನಿಸಿದೆವು” ಎಂದು ಹೇಳುವ ಮೂಲಕ ಶಿಶುವಿನ ಪೋಷಕರು ದೊಡ್ಡತನ ಮೆರೆದಿದ್ದಾರೆ. ಪೋಷಕರ ನಿರ್ಧಾರಕ್ಕೆ PGIMER ಸಂಸ್ಥೆ ವೈದ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.