ನವದೆಹಲಿ: ದೆಹಲಿಯಲ್ಲಿ ಡಿಸೆಂಬರ್ 31ರ ತಡರಾತ್ರಿ ನಡೆದ ಅಂಜಲಿ ಹಿಟ್ ಆ್ಯಂಡ್ ಡ್ರ್ಯಾಗ್ ಕೇಸ್ಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ತಮ್ಮ ಇಲಾಖೆಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಹೊಸವರ್ಷದ ದಿನ ಅಂಜಲಿ ಮತ್ತು ಆಕೆಯ ಸ್ನೇಹಿತೆ ನಿಧಿ ಇಬ್ಬರೂ ರೋಹಿಣಿ ಜಿಲ್ಲೆಯಲ್ಲಿರುವ ಹೋಟೆಲ್ವೊಂದರಲ್ಲಿ ತಡರಾತ್ರಿಯವರೆಗೆ ಪಾರ್ಟಿ ಮಾಡಿ, ಮುಂಜಾನೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಸುಲ್ತಾನ್ಪುರಿ ಬಳಿ ಅಪಘಾತವಾಗಿತ್ತು. ಐವರು ಇದ್ದ ಕಾರು ಈ ಯುವತಿಯರ ಸ್ಕೂಟರ್ಗೆ ಡಿಕ್ಕಿಯಾಗಿತ್ತು. ಇದರಲ್ಲಿ ಅಂಜಲಿ ಕಾರಿನ ಅಡಿಗೆ ಸಿಲುಕಿ ಸುಮಾರು 12 ಕಿಮೀ ದೂರ ಎಳೆಯಲ್ಪಟ್ಟು ಮೃತಪಟ್ಟಿದ್ದಳು.
ಈ ಕೇಸ್ಗೆ ಸಂಬಂಧಪಟ್ಟು ಈಗ ಒಟ್ಟು 11 ಪೊಲೀಸ್ ಸಿಬ್ಬಂದಿ ತಲೆದಂಡವಾಗಿದೆ. ಅಂದು ರೋಹಿಣಿ ಜಿಲ್ಲೆಯಲ್ಲಿ, ಅಂಜಲಿಗೆ ಅಪಘಾತವಾದ ಮಾರ್ಗದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಸಬ್ ಇನ್ಸ್ಪೆಕ್ಟರ್ಗಳು, ನಾಲ್ವರು ಸಹಾಯಕ ಸಬ್ ಇನ್ಸ್ಪೆಕ್ಟರ್ಗಳು, ನಾಲ್ವರು ಹೆಡ್ ಕಾನ್ಸ್ಟೆಬಲ್ಗಳು ಮತ್ತು ಒಬ್ಬರು ಕಾನ್ಸ್ಟೆಬಲ್ ಸೇರಿ 11 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಹೊಸವರ್ಷದ ಹಿನ್ನೆಲೆಯಲ್ಲಿ ಅಂದು ಪೊಲೀಸ್ ಭದ್ರತೆಯೂ ಜಾಸ್ತಿಯಿತ್ತು. ಯುವತಿಗೆ ಅಪಘಾತವಾದ ಮಾರ್ಗದಲ್ಲಿ ಪೊಲೀಸ್ ಕಂಟ್ರೋಲ್ ರೂಂನ ಮೂರು ವಾಹನಗಳಿದ್ದು, ಅದರಲ್ಲಿ ಸಿಬ್ಬಂದಿಯಿದ್ದರು. ಒಂದೆರಡು ಕಡೆ ಗುಂಪು ಗಸ್ತು ಕೂಡ ಇತ್ತು. ಹಾಗಿದ್ದಾಗ್ಯೂ ಅಂಜಲಿ ಕೇಸ್ನಲ್ಲಿ ಪೊಲೀಸ್ ವೈಫಲ್ಯವಾಗಿದೆ ಎಂದು ಕೇಂದ್ರ ಗೃಹ ಇಲಾಖೆಯೇ ಹೇಳಿದ್ದು, ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು. ಅಂದಿನ ಘಟನೆಯ ಬಗ್ಗೆ ತನಿಖೆ ನಡೆಸಲು ದೆಹಲಿ ವಿಶೇಷ ಪೊಲೀಸ್ ಆಯುಕ್ತರಾದ ಶಾಲಿನಿ ಸಿಂಗ್ ನೇತೃತ್ವದಲ್ಲಿ ಒಂದು ವಿಚಾರಣಾ ಸಮಿತಿಯನ್ನೂ ರಚಿಸಲಾಗಿತ್ತು. ಈ ಕಮಿಟಿ ಕೊಟ್ಟ ವರದಿ ಆಧಾರದ ಮೇಲೆ ಈಗ 11 ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: Delhi Accident Case | ಆರೋಪಿಗಳ ವಿರುದ್ಧ ಕೊಲೆ ಕೇಸ್ ಹಾಕುವಂತೆ ಒತ್ತಾಯಿಸಿ ಠಾಣೆ ಎದುರು ಅಂಜಲಿ ಕುಟುಂಬ ಧರಣಿ