ಭಾರತದಲ್ಲಿ ಕೊವಿಡ್ 19 ಕೇಸ್ಗಳು (Covid 19 Cases) ನಿಧಾನಗತಿಯಲ್ಲಿ ಏರಿಕೆಯಾಗುತ್ತಿವೆ. ಇಂದು ಒಂದೇ ದಿನ 1,134 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 7026ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕೊವಿಡ್ 19 ಸೋಂಕಿತರ ಒಟ್ಟು ಸಂಖ್ಯೆ 4,46,98,118ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆ, ಒಟ್ಟಾರೆ ಸೋಂಕಿತರ ಸಂಖ್ಯೆಯ ಶೇ. 0.02ರಷ್ಟಿದೆ.
ದೇಶದಲ್ಲಿ ಕೊರೊನಾ ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.1.09ರಷ್ಟಿದ್ದು, ವಾರದ ಪಾಸಿಟಿವಿಟಿ ರೇಟ್ 0.98ರಷ್ಟಿದೆ. ಸೋಂಕಿನಿಂದ ಸಾಯುತ್ತಿರುವವರ ರೇಟ್ ಶೇ.1.19ರಷ್ಟಿದೆ. ಕಳೆದ 24ಗಂಟೆಯಲ್ಲಿ ಕೊರೊನಾದಿಂದ ಐದು ಸಾವಾಗಿದ್ದು, ಅದರಲ್ಲಿ ಛತ್ತೀಸ್ಗಢ, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳಾದಿಂದ ತಲಾ ಒಂದು ಸಾವು ವರದಿಯಾಗಿದೆ. ಒಟ್ಟಾರೆ ಸಾವಿನ ಸಂಖ್ಯೆ 5,30,813ಕ್ಕೆ ತಲುಪಿದೆ. ಇದುವರೆಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,41,60,279ಆಗಿದ್ದು, ಚೇತರಿಕೆ ರೇಟ್ ಶೇ. 98.80ರಷ್ಟಿರುವುದು ತುಸು ಸಮಾಧಾನಕರ ಸಂಗತಿ.
ಇದನ್ನೂ ಓದಿ: H3N2 Virus: ಎಚ್3ಎನ್2 ಸೋಂಕಿಗೆ ಒಳಗಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿ ಸಾವು; ಕೊವಿಡ್ 19 ಕೂಡ ಬಾಧಿಸುತ್ತಿತ್ತು
ಇನ್ನೊಂದೆಡೆ ದೇಶದಲ್ಲಿ ಕೊರೊನಾ ತಪಾಸಣೆ ಕೂಡ ನಡೆಯುತ್ತಿದೆ. ಇದುವರೆಗೆ 92.05 ಕೋಟಿ ಜನರಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ಕಳೆದ 24ಗಂಟೆಯಲ್ಲಿ 1,03,831 ಜನರಿಗೆ ಟೆಸ್ಟ್ ನಡೆದಿದೆ. ಹಾಗೇ, ಲಸಿಕೆ ನೀಡಿಕೆಯೂ ಮುಂದುವರಿದೆ. ಇಂದಿನ ದಿನದವರೆಗೆ ದೇಶದ 220.65 ಕೋಟಿ ಜನರು ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಬೇಸಿಗೆ ಪ್ರಾರಂಭವಾಗುತ್ತಿದ್ದು, ಕೊರೊನಾ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಅದರ ಮಧ್ಯೆ ಎಚ್3ಎನ್2 ಸೋಂಕು ಸೇರಿ, ಇನ್ನಿತರ ಕೆಲವು ರೀತಿಯ ಜ್ವರವೂ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಜನರ ಬಳಿ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಿದೆ. ಅಂದಹಾಗೇ, ಈ ಎಚ್3ಎನ್2 ಜ್ವರದ ಲಕ್ಷಣಗಳೂ ಕೂಡ ಕೊರೊನಾ ಲಕ್ಷಣಗಳಂತೆ ಇರುತ್ತವೆ. ಕೊವಿಡ್ 19 ಜ್ವರ ಬಂದಾಗ ಹೇಗೆ ಜ್ವರ, ಕೆಮ್ಮು, ಮೈಕೈ ನೋವು, ಸುಸ್ತು ಇರುತ್ತದೆಯೋ, ಜಾಗೇ, ಈ ಸೋಂಕು ತಗುಲಿದಾಗಲೂ ಇವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಇಂಥ ಲಕ್ಷಣಗಳು ಕಂಡುಬಂದರೆ ಕೂಡಲೇ ಕೊವಿಡ್ ಟೆಸ್ಟ್ನ್ನೂ ಮಾಡಿಸುವುದು ಒಳ್ಳೆಯದು ಎಂದು ಆರೋಗ್ಯ ಇಲಾಖೆ ಹೇಳಿದೆ.